VIDEO | ಈ ಸುಂದರವಾದ ಶೌಚಾಲಯ ನೋಡಿದ ನೆಟ್ಟಿಗರು ಹೀಗಾ ಹೇಳೋದು…?

japan toilet
Published on


ಜಪಾನ್: ಅನೇಕರು ಶೌಚಾಲಯವನ್ನು ಬಹಳ ಸ್ವಚ್ಛವಾಗಿ ಹಾಗೂ ಸುಂದರವಾಗಿಟ್ಟುಕೊಂಡಿರುವುದನ್ನು ನಾವೆಲ್ಲ ನೋಡಿದ್ದೇವೆ. ಮತ್ತೆ ಕೆಲವರು ಬಂಗಾರದ ಹೊದಿಕೆಯಿರುವ ಶೌಚ ಗೃಹ ನಿರ್ಮಾಣ ಮಾಡಿರುವುದನ್ನು ನೋಡಿದ್ದೇವೆ. ಆದರೆ ಜಪಾನ್​​ನಲ್ಲಿ ನಿರ್ಮಿಸಿರುವ ಶೌಚಾಲಯ ಇದೀಗ ಅನೇಕರ ಅನೇಕರ ಗಮನ ಸೆಳೆದಿದೆ.

ಕೆಲ ಹೊತ್ತು ಅಂತರ್ಜಾಲವನ್ನು ತಡಕಾಡಿದರೆ ಅದ್ಭುತ ಮತ್ತು ಅಸಾಮಾನ್ಯ ಕಟ್ಟಡಗಳು, ಮನೆಗಳು, ಮಂಟಪಗಳು, ಕೊಠಡಿಗಳು ಮತ್ತು ಸ್ನಾನಗೃಹದ ಹಲವಾರು ವಿಡಿಯೋಗಳು ಸಾಮಾನ್ಯವಾಗಿ ಕಾಣಸಿಗುತ್ತವೆ. ಇವುಗಳ ವಾಸ್ತುಶಿಲ್ಪ ಸಹ ಜನರನ್ನು ಮಂತ್ರಮುಗ್ಧರನ್ನಾಗಿಸುತ್ತವೆ ಅಲ್ಲವೇ, ಆದರೆ ನಾವೀಗ ಹೇಳಲು ಹೊರಟಿರುವುದು ಬಣ್ಣ ಬಣ್ಣದ ಮೀನುಗಳನ್ನು ಹೊಂದಿರುವ, ಅದ್ಭುತವಾದ ಅಕ್ವೇರಿಯಂನಿಂದ ಸುತ್ತುವರಿದ ಶೌಚಾಲಯದ ಬಗ್ಗೆ. ಸದ್ಯ ಈ ಶೌಚಾಲಯದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ನೀವೂ ಈ ಕೆಳಗೆ ನೀಡಿರುವ ವಿಡಿಯೋ ಲಿಂಕ್ ಮೂಲಕ ವಿನೂತನವಾದ ವಿಭಿನ್ನ ಶೌಚಾಲಯವನ್ನು ನೋಡಬಹುದು.

ಎಲ್ಲಿದೆ, ಹೇಗಿದೆ ಗೊತ್ತಾ?
ಅಂದಹಾಗೆ ಈ ಶೌಚಾಲಯ ಜಪಾನ್‌ನ ಹಿಪೊಪೊ ಪಾಪಾ ಕೆಫೆಯಲ್ಲಿದೆ. ಅಕ್ವೇರಿಯಂ ಟಾಯ್ಲೆಟ್ ಎಂದೇ ಖ್ಯಾತಿಯಾಗಿರುವ ಇದು ಗ್ರಾಹಕರಿಗೆ ಅನನ್ಯ ಅನುಭವ ನೀಡುತ್ತದೆ. ವಿಡಿಯೋದಲ್ಲಿ ತೋರಿಸಿರುವ ಹಾಗೆ ಕೆಫೆಯ ಒಳಗಿರುವ ಶೌಚಾಲಯವು ಗಾಜಿನ ಗೋಡೆಗಳಿಂದ ಸುತ್ತುವರಿದಿದೆ. ಈ ಗಾಜಿನ ಗೋಡೆ ನೀರು ಮತ್ತು ಮೀನುಗಳಿಂದ ಆವೃತವಾಗಿದೆ. ಶೌಚಾಲಯದ ಒಳಗೆ ನಡೆಯುತ್ತಿದ್ದಂತೆ ನಿಮಗೆ ಹಲವಾರು ಜಲಚರಗಳು ಸುತ್ತುವರೆದಿರುವ ಹಾಗೆ ಅನುಭವವಾಗುವುದಂತೂ ಸುಳ್ಳಲ್ಲ.

ಹೀಗಿತ್ತು ನೆಟ್ಟಿಗರ ಪ್ರತಿಕ್ರಿಯೆ
ಹಾಗೆ ನೋಡುವುದಾದರೆ ಈ ಪೋಸ್ಟ್ ಅನ್ನು ಕಳೆದ ವರ್ಷವೇ ಹಂಚಿಕೊಳ್ಳಲಾಗಿದೆ. ಆದರಿದಕ್ಕೆ ಸಿಕ್ಕಾಪಟ್ಟೆ ಶೇರ್​​, ಲೈಕ್ಸ್ ಬಂದಿದೆ. ಅಕ್ವೇರಿಯಂ ಟಾಯ್ಲೆಟ್ ವಿಡಿಯೋ ನೋಡಿದ ನೆಟ್ಟಿಗರು ಒಂದೊಂದು ರೀತಿ ಕಾಮೆಂಟ್​​ ಮಾಡಿದ್ದು, ಒರ್ವ ವ್ಯಕ್ತಿ "ನನ್ನನ್ನು ಮೀನುಗಳು ನೋಡುವುದರಿಂದ ಈ ಶೌಚಾಲಯಕ್ಕೆ ಹೋಗಲು ಸಾಧ್ಯವಿಲ್ಲ ಬಿಡಿ'' ಎಂದಿದ್ದಾರೆ. ಇನ್ನೊಬ್ಬರು "ಫ್ಲಶಿಂಗ್ ಮಾಡಲು ಹೆದರಿಕೆಯಾಗುತ್ತದೆ" ಅಂದರೆ , "ನೀವು ಸ್ಪಾಂಜ್​​​ಬಾಬ್‌ನ ಸ್ನಾನಗೃಹದೊಳಗೆ ಬಂದದ್ದು ಹೇಗೆಂದು'' ತಮಾಷೆ ಮಾಡಿದ್ದಾರೆ ಮತ್ತೋರ್ವರು. ಹಾಗಾದರೆ ಈ ವಿಶಿಷ್ಟ ಸ್ನಾನಗೃಹದ ಬಗ್ಗೆ ನಿಮ್ಮ ಅಭಿಪ್ರಾಯವೇನು? ನಮ್ಮೊಂದಿಗೆ ಹಂಚಿಕೊಳ್ಳಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net