ಈ ರೀತಿಯೂ ಕ್ಯಾಚ್​ ಹಿಡಿಯಬಹುದಾ? ಕ್ರಿಕೆಟ್​ ಇತಿಹಾಸದಲ್ಲೇ ಇದುವರೆಗೂ ನೋಡಿರದ ಕ್ಯಾಚ್​ ಇದು!

Catch
Published on

ನವದೆಹಲಿ: ಕ್ರಿಕೆಟ್ ಒಂದು ಅತ್ಯದ್ಭುತ ಕ್ರೀಡೆಯಾಗಿದ್ದು, ಸದಾ ಒಂದಿಲ್ಲೊಂದು ವಿಚಾರಗಳಿಗೆ ಕ್ರೀಡಾಭಿಮಾನಿಗಳ ಗಮನ ಸೆಳೆಯುತ್ತಿರುತ್ತದೆ. ಇದೀಗ ಅದೇ ರೀತಿಯ ಘಟನೆಯೊಂದು ಇಸಿಎಸ್ ಬಲ್ಗೇರಿಯಾ ಟಿ20 ಟೂರ್ನಿಯಲ್ಲಿ ನಡೆದಿದೆ. ಇದು ಕ್ಯಾಚ್​ಗೆ ಸಂಬಂಧಿಸಿದ ವಿಚಾರವಾಗಿದ್ದು, ಕ್ರಿಕೆಟ್​ ಇತಿಹಾಸದಲ್ಲೇ ಇಂಥದ್ದೊಂದು ಅಭೂತಪೂರ್ವ ಕ್ಯಾಚ್ ಅನ್ನು​ ಹಿಂದೆಂದು ನೋಡಿರುವುದಕ್ಕೆ ಸಾಧ್ಯವಿಲ್ಲ.

ಕ್ಯಾಚ್​ಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದ್ದು, ವಿಡಿಯೋ ನೋಡಿದವರು ವಾವ್​ ಎಂದು ಹುಬ್ಬೇರಿಸುತ್ತಿದ್ದಾರೆ. ಕ್ರಿಕೆಟ್ ಇತಿಹಾಸದಲ್ಲೇ ಇದು ಸಾರ್ವಕಾಲಿಕ ಅತ್ಯುತ್ತಮ ಕ್ಯಾಚ್ ಎಂದು ನೆಟ್ಟಿಗರು ಬಣ್ಣಿಸಿದ್ದಾರೆ. ಈ ರೀತಿಯೂ ಕ್ಯಾಚ್ ಮಾಡಬಹುದೇ, ನಿಜಕ್ಕೂ ಇದು ಕ್ಯಾಚ್ ಆಫ್ ದಿ ಇಯರ್ ಎಂದೆಲ್ಲಾ ಕೊಂಡಾಡುತ್ತಿದ್ದಾರೆ.

ಪಂದ್ಯಾವಳಿಯ ಅಂಗವಾಗಿ ಶನಿವಾರ (ಆಗಸ್ಟ್ 3) ವಿಟಿಯು-ಎಂಯು ಪ್ಲೆವೆನ್ ಮತ್ತು ಅಫ್ಯೋಂಕಾರಹಿಸರ್ ಎಸ್‌ಎಚ್‌ಎಸ್ ತಂಡಗಳ ನಡುವೆ ಪಂದ್ಯ ನಡೆಯಿತು. ಪ್ಲೆವೆನ್ ಅವರ ಇನಿಂಗ್ಸ್‌ನ ನಾಲ್ಕನೇ ಓವರ್‌ನಲ್ಲಿ ಅಫ್ಯೋಂಕಾರಹಿಸರ್ ಫೀಲ್ಡರ್ ಕುರ್ಸಾದ್ ದಲ್ಯಾನ್ ಅಸಾಮಾನ್ಯ ಕ್ಯಾಚ್ ಪಡೆದರು.

ಪ್ಲೆವೆನ್ ಬ್ಯಾಟ್ಸ್‌ಮನ್ ಆನಂದು ಕೃಷ್ಣ ಅವರು ಅಫ್ಯೋಂಕಾರಹಿಸರ್ ಬೌಲರ್ ಶಕೀಲ್ ಫಾರೂಗೆ ಚೆಂಡನ್ನು ಆನ್ ಸೈಡ್ ಕಡೆಗೆ ಬೃಹತ್ ಹೊಡೆತಕ್ಕೆ ಪ್ರಯತ್ನಿಸಿದರು. ಆದರೆ, ಟೈಮಿಂಗ್ ತಪ್ಪಿ ಮಿಡ್ ಆನ್​ನಲ್ಲಿ ಚೆಂಡು ಗಾಳಿಯಲ್ಲಿ ಹಾರಿತು. ಅಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ದಲ್ಯಾನ್ ಕ್ಯಾಚ್ ಹಿಡಿಯಲು ಓಡಿದರು. ಆದರೆ ಚೆಂಡು ಇನ್ನು ಮುಂದೆ ಬೀಳುವ ಸಾಧ್ಯತೆ ಇದ್ದುದ್ದರಿಂದ ತಮ್ಮ ಪಾದವನ್ನು ಮುಂದಕ್ಕೆ ಚಾಚಿದರು. ನಿಖರವಾಗಿ ಚೆಂಡು ಕುರ್ಸಾದ್ ದಲ್ಯಾನ್ ಅವರ ಪಾದದ ಮೇಲೆ ಬಿದ್ದು ಗಾಳಿಯಲ್ಲಿ ಏರಿತು. ಬಳಿಕ ದಲ್ಯಾನ್ ಕ್ಯಾಚ್ ಅನ್ನು ಆಕರ್ಷಕವಾಗಿ ತೆಗೆದುಕೊಂಡರು. ಈ ಕ್ಯಾಚ್​ ನೋಡಿದ ಬ್ಯಾಟರ್ ಆನಂದು ಕೃಷ್ಣ ಸೇರಿದಂತೆ ಎಲ್ಲ ಫೀಲ್ಡರ್‌ಗಳು ಒಮ್ಮೆಲೇ ಶಾಕ್​ ಆದರು.

ಇನ್ನೂ ಪಂದ್ಯದ ವಿಚಾರಕ್ಕೆ ಬರುವುದಾದರೆ ಮೊದಲು ಬ್ಯಾಟ್ ಮಾಡಿದ ಅಫ್ಯೋಂಕಾರಹಿಸರ್ ತಂಡವು ನಿಗದಿತ 10 ಓವರ್‌ಗಳಲ್ಲಿ 104/5 ಗಳಿಸಿತು. ಗುರಿ ಬೆನ್ನತ್ತಿದ ವಿಟಿಯು-ಎಂಯು ಪ್ಲೆವೆನ್ ತಂಡ 40/8ಕ್ಕೆ ಸೀಮಿತವಾಯಿತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net