ಚೆನ್ನೈ: ತಮಿಳು ಚಿತ್ರರಂಗದ ಸೂಪರ್ಸ್ಟಾರ್ ವಿಜಯ್ ಸೇತುಪತಿ ತಮ್ಮ ವಿಶಿಷ್ಟ ವ್ಯಕ್ತಿತ್ವದಿಂದಲೇ ಅಸಂಖ್ಯಾತ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಸಮಾಜದ ಬಗೆಗಿನ ಅವರ ಚಿಂತನೆ ಹಾಗೂ ಸಮಾಜಮುಖಿ ಕೆಲಸಗಳಿಂದಲೂ ಸೇತುಪತಿ ಮಾದರಿಯಾಗಿದ್ದಾರೆ. ಒಬ್ಬ ನಟನಾಗಿ ಯಾವುದೇ ಪಾತ್ರವನ್ನು ಕೊಟ್ಟರು ನಿಭಾಯಿಸುವ ಸೇತುಪತಿ, ತಮ್ಮ ಪಾತ್ರದ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡುಬೇಕೆಂಬ ಉದ್ದೇಶ ಇಟ್ಟುಕೊಂಡಿದ್ದಾರೆ. ವಿಜಯ್ ಅವರ ನಡೆ-ನುಡಿಯಲ್ಲೂ ತುಂಬಾ ಸರಳತೆ ಇದೆ. ಸ್ಟಾರ್ ನಟ ಎಂಬ ಬಿರುದನ್ನು ಪಕ್ಕಕ್ಕಿಟ್ಟು ಎಷ್ಟೋ ಬಾರಿ ಸರಳತೆಯಿಂದ ನಡೆದುಕೊಂಡ ಉದಾಹರಣೆ ಇದೆ.
ನೋಡಲು ಸರಳವಾಗಿರುವ ಸೇತುಪತಿ ಇಂದು ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಆಸ್ತಿಯ ಒಡೆಯರಾಗಿದ್ದಾರೆ. ಹಾಗಂತ ಈ ಆಸ್ತಿ ಸುಮ್ಮನೆ ಬಂದಿಲ್ಲ. ಬಡತನದಿಂದ ಬಂದ ಸೇತುಪತಿ, ಒಂದು ಕಾಲದಲ್ಲಿ ಚಿತ್ರರಂಗದಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾತ್ರ ಮಾಡುತ್ತಿದ್ದರು. ಇಂದು ಈ ಸ್ಥಾನಕ್ಕೆ ಬರಲು ಸಾಕಷ್ಟು ಸರ್ಕಸ್ ಮಾಡಿದ್ದಾರೆ. ಅಲ್ಲದೆ, ಅನೇಕ ಅವಮಾನಗಳನ್ನು ಎದುರಿಸಿದ್ದಾರೆ.
ಸೇತುಪತಿ ಅವರು ನಾಯಕನಾಗಿ ಮಾತ್ರವಲ್ಲದೆ ವಿಲನ್ ಆಗಿಯೂ ನಟಿಸಿದ್ದಾರೆ. ವೃತ್ತಿಜೀವನದ ತಮ್ಮ 50ನೇ ಚಿತ್ರ “ಮಹಾರಾಜ”ಗೆ ಸಂಭಾವನೆ ಪಡೆಯದೇ ನಟಿಸಿದ್ದಾರೆ. ಚಿತ್ರದ ಯಶಸ್ಸಿನ ನಂತರ ಬಂದ ಲಾಭದ ಒಂದು ಪಾಲು ಮಾತ್ರ ತೆಗೆದುಕೊಂಡಿದ್ದಾರೆ ಎಂಬ ಮಾಹಿತಿ ಇದೆ. ಸದ್ಯ ಸೇತುಪತಿ ಕೈಯಲ್ಲಿ ಸಾಕಷ್ಟು ಸಿನಿಮಾಗಳು ಇವೆ. ತುಂಬಾ ಬಿಜಿಯಾಗಿರುವುದರಿಂದ ಇದೀಗ ಅವರ ಆಸ್ತಿ ವಿಚಾರವೂ ಕೂಡ ಸದ್ದು ಮಾಡುತ್ತಿದೆ. ಸೇತುಪತಿ ಅವರ ಬಳಿ ಎಷ್ಟು ಕೋಟಿ ಆಸ್ತಿ ಇದೆ ಎಂಬ ನಿಮ್ಮ ಕುತೂಹಲಕ್ಕೆ ಉತ್ತರ ಇಲ್ಲಿದೆ.
ಹಿಂದಿ ಸಿನಿಮಾಗಳಾದ ಜವಾನ್ ಮತ್ತು ಕ್ರಿಸ್‌ಮಸ್‌ಗಾಗಿ ವಿಜಯ್ ಸೇತುಪತಿ ಅವರು 21 ಕೋಟಿ ರೂಪಾಯಿ ಪಡೆದಿದ್ದಾರೆ ಎನ್ನಲಾಗಿದೆ. ಜಾಹಿರಾತುಗಳಲ್ಲಿ ನಟಿಸಲು 50 ಲಕ್ಷ ರೂ.ವರೆಗೂ ಸಂಭಾವನೆ ಪಡೆಯುತ್ತಾರೆ. ಚೆನ್ನೈನ ಕಲ್ಪಕ್ಕಂ ಮತ್ತು ಎನ್ನೋರ್ನಲ್ಲಿ ಎರಡು ಮನೆಗಳನ್ನು ಹೊಂದಿದ್ದಾರೆ. ಇದಿಷ್ಟೇ ಅಲ್ಲದೆ, 1.76 ಕೋಟಿ ರೂ. ಮೌಲ್ಯದ ಬಿಎಂಡಬ್ಲ್ಯು ಕಾರು ಹಾಗೂ 39 ಲಕ್ಷ ರೂ. ಮೌಲ್ಯದ ಮಿನಿ ಕೂಪರ್ ಸೇರಿದಂತೆ ಟೊಯೋಟಾ ಮತ್ತು ಇನ್ನೋವಾ ಕಾರುಗಳಂತಹ ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ.
ತಮಿಳಿನ ಸ್ಥಳೀಯ ಸುದ್ದಿ ಸಂಸ್ಥೆಗಳು ಮಾಡಿರುವ ವರದಿಯ ಪ್ರಕಾರ ನಟ ವಿಜಯ್ ಸೇತುಪತಿ ಅವರ ಒಟ್ಟು ಆಸ್ತಿ 175 ಕೋಟಿ ರೂಪಾಯಿ ಎನ್ನಲಾಗಿದೆ. ಇದರಲ್ಲಿ ತಿಂಗಳ ಆದಾಯ, ಐಷಾರಾಮಿ ಮನೆಗಳು ಮತ್ತು ದುಬಾರಿ ಕಾರುಗಳು ಕೂಡ ಸೇರಿವೆ.
ಸಿನಿಮಾ ವಿಚಾರಕ್ಕೆ ಬರುವುದಾದರೆ ಗಾಂಧಿ ಟಾಕ್ಸ್ ಮತ್ತು ವಿಡುತಲೈ ಪಾರ್ಟ್ ಸಿನಿಮಾಗಳಲ್ಲಿ ನಟಿಸಿದ್ದು, ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. (ಏಜೆನ್ಸೀಸ್)
ಯಾವುದೇ ಕಾರಣಕ್ಕೂ ಜೇನುತುಪ್ಪದ ಜತೆ ಈ ಆಹಾರಗಳನ್ನು ಸೇವಿಸಬೇಡಿ! ತಿಂದ್ರೆ ನಿಮ್ಮ ಆರೋಗ್ಯಕ್ಕೆ ಡೇಂಜರ್
ಈ 3 ಪ್ರಮುಖ ಕಾರಣಗಳಿಂದಲೇ ಶ್ರೀಲಂಕಾ ವಿರುದ್ಧ ಟೀಮ್ ಇಂಡಿಯಾ ಹೀನಾಯ ಸೋತಿದ್ದು!