

ನವದೆಹಲಿ: ಕರೊನಾ ಲಸಿಕೆ ಸಂಶೋಧನೆಗೆ ಜಗತ್ತಿನಲ್ಲೆಡೆ ಇನ್ನಿಲ್ಲದ ಪೈಪೋಟಿ ನಡೆಯುತ್ತಿದೆ. ಕನಿಷ್ಠ 14 ಕಂಪನಿಗಳು ಮಾನವರ ಮೇಲೆ ಪ್ರಯೋಗ ನಡೆಸುತ್ತಿವೆ. ತಾವೇ ಮೊದಲು ಲಸಿಕೆ ಕಂಡುಹಿಡಿಯಬೇಕೆಂಬ ಹಪಾಹಪಿ ಎಲ್ಲದ್ದಾಗಿದೆ.
ಆಗಸ್ಟ್ 15ಕ್ಕೆ ಲಸಿಕೆಯನ್ನು ರೋಗಿಗಳ ಬಳಕೆಗೆ ಮುಕ್ತಗೊಳಿಸುವುದಾಗಿ ರಷ್ಯಾ ಹೇಳಿಕೊಂಡಿದೆ. ಆದರೆ, ಬೇರೆ ದೇಶಗಳ ಲಸಿಕೆ ಸಂಶೋಧನಾ ಮಾಹಿತಿಯನ್ನು ರಷ್ಯಾ ಕದಿಯುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ರಷ್ಯಾ ವಿರುದ್ಧ ಬ್ರಿಟನ್, ಅಮೆರಿಕ ಹಾಗೂ ಕೆನಡಾ ಕೆಂಡ ಕಾರಿವೆ.
ಕೋಜಿ ಬೀರ್ ಎಂದೇ ಕರೆಯಲಾಗುವ ಎಪಿಟಿ29 ಗುಂಪು ರಷ್ಯಾ ಗುಪ್ತಚರ ಘಟಕದ ಭಾಗವಾಗಿದ್ದು, ಕರೊನಾ ಲಸಿಕೆ ಸಂಶೋಧನೆಯಲ್ಲಿ ತೊಡಗಿರುವ ಪ್ರಯೋಗಾಲಯ ಹಾಗೂ ಸಂಸ್ಥೆಗಳ ಮೇಲೆ ಹ್ಯಾಕಿಂಗ್ ನಡೆಸುತ್ತಿದೆ ಎಂದು ಹೇಳಲಾಗಿದೆ.
ನಿರಂತರವಾಗಿ ಆನ್ಲೈನ್ ದಾಳಿ ನಡೆಸುತ್ತಿರುವುದರ ಹಿಂದೆ ಕರೊನಾ ಲಸಿಕೆ ಸಂಶೋಧನೆಯ ಮಾಹಿತಿ ಕದಿಯುವ ಉದ್ದೇಶ ಅಡಗಿದೆ ಹೊರತು ಸಂಶೋಧನೆಗೆ ಅಡ್ಡಿಪಡಿಸುವುದಲ್ಲ ಎಂದು ಬ್ರಿಟನ್ನಿನ ನ್ಯಾಷನಲ್ ಸೈಬರ್ ಸೆಕ್ಯುರಿಟಿ ಸೆಂಟರ್ನ ಗುಪ್ತಚರ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಸಂಶೋಧನೆಗೆ ಸಂಬಂಧಿಸಿದ ಮಾಹಿತಿ ಕಳ್ಳತನ ಮಾಡಲಾಗಿದೆ ಎಂಬುದು ಖಚಿತವಾಗಿಲ್ಲ. ಆದರೆ, ಗೌಪ್ಯವಾಗಿರುವ ಮಾಹಿತಿ ಹ್ಯಾಕರ್ಗಳ ಕೈಸೇರಿಲ್ಲ ಎಂದು ಹೇಳಲಾಗಿದೆ.
ಕೋಜಿ ಬೀರ್ ರಷ್ಯಾ ಗುಪ್ತಚರ ಇಲಾಖೆ ಜತೆಗೆ ಕಾರ್ಯನಿರ್ವಹಿಸುವ ಹ್ಯಾಕಿಂಗ್ ತಂಡವಾಗಿದೆ ಎಂದು ಅಮೆರಿಕ ಗುರುತಿಸಿದೆ. 2016ರಲ್ಲಿ ಅಮೆರಿಕ ಅಧ್ಯಕ್ಷರ ಚುನಾವಣೆಗೂ ಮುನ್ನ ಡೆಮಾಕ್ರೆಟಿಕ್ ಪಕ್ಷದ ಈಮೇಲ್ ಹ್ಯಾಕ್ ಮಾಡಿ ಮಾಹಿತಿ ಕದ್ದಿತ್ತು. ಇನ್ನೊಂದು ಗುಂಪು ಫ್ಯಾನ್ಸಿ ಬೀರ್ ಕೂಡ ರಷ್ಯಾದ್ದೇ ಆಗಿದೆ.