

ಲಖನೌ: ಇಲ್ಲಿಯ ಬರೋಲಿ ಗ್ರಾಮದಲ್ಲಿ ಕಳ್ಳತನ ಮಾಡಲು ಹೋಗಿ ಸಿಕ್ಕಿಹಾಕಿಕೊಂಡ ಮೂವರ ಸ್ಥಿತಿ ಮಾತ್ರ ಯಾರಿಗೂ ಬೇಡವಾಗಿದೆ. ಇನ್ನು ಮುಂದೆ ಕಳ್ಳತನ ಮಾಡುವವರು ಕೂಡ ಭಯ ಪಡುವಂಥ ಶಿಕ್ಷೆಯನ್ನು ಇಲ್ಲಿಯ ಗ್ರಾಮಸ್ಥರು ನೀಡಿದ್ದಾರೆ.
ಅಷ್ಟಕ್ಕೂ ಗ್ರಾಮಸ್ಥರು ಮಾಡಿದ್ದೇನೆಂದರೆ, ಮೂವರು ಯುವಕರ ತಲೆಯನ್ನು ಅರ್ಧ ಬೋಳಿಸಿದ್ದಾರೆ. ನಂತರ ಚಪ್ಪಲಿ ಮತ್ತು ಶೂಗಳಿಂದ ಹಾರ ಮಾಡಿ ಅವರ ಕೊರಳಿಗೆ ಹಾಕಿ ಅವರನ್ನು ಗ್ರಾಮದ ತುಂಬ ಮೆರವಣಿಗೆ ಮಾಡಿದ್ದಾರೆ.
ಈ ದೃಶ್ಯವನ್ನು ವಿಡಿಯೋದಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಬಿಡಲಾಗಿದ್ದು, ಯುವಕರಿಗೆ ಎಲ್ಲೆಡೆಯಿಂದ ಛೀಮಾರಿ ಹಾಕಲಾಗಿದೆ. ಕಳ್ಳತನ ಮಾಡುವವರಿಗೆ ಇಂಥದ್ದೇ ಶಿಕ್ಷೆ ನೀಡಬೇಕು ಎಂದು ಕಮೆಂಟ್ಗಳನ್ನು ಮಾಡಲಾಗಿದೆ.
ಕಳ್ಳತನ ಮಾಡುವವರನ್ನು ಹೊಡೆದು, ಬಿಡಿದು ಹಿಂಸಿಸುವ ಬದಲು ಇಂಥ ಶಿಕ್ಷೆಯೇ ಅವರಿಗೆ ಸರಿಯಾದ ಕ್ರಮ. ಇದರಿಂದ ಅವರು ಯಾರಿಗೂ ಮುಖ ತೋರಿಸಲು ಸಾಧ್ಯವಾಗುವುದಿಲ್ಲ. ಹೋದ ಕಡೆಗಳಲ್ಲೆಲ್ಲಾ ಛೀಮಾರಿ ಹಾಕಿಸಿಕೊಳ್ಳುತ್ತಾರೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಅಷ್ಟಕ್ಕೂ ಈ ಮೂವರು ಯುವಕರು ಮಾಡುತ್ತಿದ್ದುದೇನೆಂದರೆ ಯಾರೂ ಇಲ್ಲದ ಸಮಯದಲ್ಲಿ ಮನೆಗಳಿಗೆ ನುಗ್ಗಿ ಅಲ್ಲಿರುವ ವಸ್ತುಗಳನ್ನು ಕಳುವು ಮಾಡಿಕೊಂಡು ಪರಾರಿಯಾಗುತ್ತಿದ್ದರು. ಈ ಪ್ರಕರಣ ಹೆಚ್ಚಾದ ಕಾರಣ, ಗ್ರಾಮಸ್ಥರು ಹೊಂಚು ಹಾಕಿ ಮೂವರನ್ನು ರೆಡ್ಹ್ಯಾಂಡ್ ಆಗಿ ಹಿಡಿದಿದ್ದಾರೆ.
ಇವರ ವಿರುದ್ಧ ಕೇಸು ದಾಖಲಾಗಿದ್ದು, ವಿಚಾರಣೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿ ಕೆ.ಕೆ.ಮಿಶ್ರಾ ಹೇಳಿದ್ದಾರೆ.