6ನೇ ಕ್ಲಾಸ್​ ಬಾಲಕಿಯ ವಿವಾಹ: ಪಾಲಕರು, ಅರ್ಚಕ, ಗ್ರಾಮಸ್ಥರು ಪೇಚಿಗೆ

marriageweb
Published on

ತೆಲಂಗಾಣ: ಆರನೇ ತರಗತಿಯಲ್ಲಿ ಓದುತ್ತಿರುವ ಬಾಲಕಿಯ ವಿವಾಹವನ್ನು ಯಾವುದೇ ಆತಂಕವಿಲ್ಲದೇ ಲಾಕ್​ಡೌನ್​ ನಡುವೆಯೇ ನೆರವೇರಿಸಿದವರು ಈಗ ಪೇಚಿಗೆ ಸಿಲುಕಿದ್ದಾರೆ. ಹೈದರಾಬಾದ್ ಹೊರವಲಯವಾದ ಮಲ್ಕಾಜ್ ಗಿರಿ ಮೆದ್ ಚಾಲ್ ಜಿಲ್ಲೆಯ ಗುಂಡಲಾಪೋಂಚಾಪಲ್ಲಿಯ ದೇವಸ್ಥಾನವೊಂದರಲ್ಲಿ ಈ ಮದುವೆ ನಡೆದಿತ್ತು.

ಬಾಲಕಿ ಮತ್ತು 23 ವರ್ಷದ ವರನ ಪಾಲಕರು, ಮದುವೆಯಲ್ಲಿ ಸಂಭ್ರಮದಿಂದ ಪಾಲ್ಗೊಂಡಿದ್ದ ಗ್ರಾಮಸ್ಥರು ಮಾತ್ರವಲ್ಲದೇ ಮದುವೆಯನ್ನು ನಡೆಸಿಕೊಟ್ಟ ಅರ್ಚಕರು ಎಲ್ಲರ ವಿರುದ್ಧವೂ ಕೇಸು ದಾಖಲಾಗಿದೆ.

ಮಕ್ಕಳ ಹಕ್ಕುಗಳ ಸಂಘಟನೆಯ (ಬಾಲಾಲಾ ಹಕ್ಕುಲಾ ಸಂಘಂ) ಅಚ್ಯುತ ರಾವ್ ಇವರ ವಿರುದ್ಧ ಕೇಸು ದಾಖಲು ಮಾಡಿದ್ದಾರೆ. 23 ವರ್ಷದ ಗುತ್ತಿಗೆ ಕಾಮಗಾರಿಯ ದಿನಗೂಲಿ ನೌಕರನ ಜತೆ ಬಾಲಕಿಯ ವಿವಾಹ ನಡೆದಿರುವುದಾಗಿ ಅವರು ಆರೋಪಿಸಿದ್ದಾರೆ. ಬಾಲಕಿಯ ವಯಸ್ಸು 16 ಎಂದು ಪಾಲಕರು ಹೇಳುತ್ತಿದ್ದರೂ ಆಕೆ 6ನೇ ತರಗತಿಯಲ್ಲಿ ಕಲಿಯುತ್ತಿರುವ ಕಾರಣ, ವಯಸ್ಸು ಇನ್ನೂ ಚಿಕ್ಕದಿದೆ ಎಂದು ಅಚ್ಯುತ್​ ರಾವ್​ ಆರೋಪಿಸಿದ್ದಾರೆ.ಒಂದು ವೇಳೆ ಪಾಲಕರು ಹೇಳುವಂತೆ ಆಕೆಯದ್ದು 16 ವರ್ಷ ವಯಸ್ಸಾಗಿದ್ದರೂ ಕೂಡ ಇದು ಬಾಲ್ಯ ವಿವಾಹ ಆಗುವ ಕಾರಣ, ಮದುವೆ ನಡೆಸಿಕೊಟ್ಟ ಎಲ್ಲರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ಕೋರಿದ್ದಾರೆ.

ಘಟನೆಯನ್ನು ಪೊಲೀಸರು ಖಚಿತಪಡಿಸಿದ್ದು, ಬಾಲಕಿಯನ್ನು ರಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ. ಮದುಮಗ ಕುಟುಂಬಸ್ಥರ ವಿರುದ್ಧ ಹಾಗೂ ಅರ್ಚಕರ ವಿರುದ್ಧ ಐಪಿಸಿ ಸೆಕ್ಷನ್ 376ರ ಪ್ರಕಾರ ಹಾಗೂ ಪೋಸ್ಕೋ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ.

ಜತೆಗೆ, ಈಕೆ ಪ್ರಾಪ್ತಳಲ್ಲ ಎಂದು ಗೊತ್ತಿದ್ದರೂ ಮದುವೆಗೆ ಹಾಜರಾಗಿರುವ ಗ್ರಾಮಸ್ಥರ ವಿರುದ್ಧವೂ ಕ್ರಮ ತೆಗೆದುಕೊಳ್ಳುವಂತೆ ದೂರಿನಲ್ಲಿ ಅಚ್ಯುತ್​ ರಾವ್​ ಕೋರಿದ್ದಾರೆ. ಅಷ್ಟೇ ಅಲ್ಲದೇ, ಮದುವೆಯ ವಿಡಿಯೋ ನೋಡಿದಾಗ ಅದರಲ್ಲಿ ಲಾಕ್​ಡೌನ್​ ನಿಯಮ ಉಲ್ಲಂಘನೆ ಮಾಡಿರುವುದೂ ಕಂಡುಬಂದಿದೆ. ಯಾರು ಕೂಡ ಮಾಸ್ಕ್​ ಧರಿಸದೇ ಒಟ್ಟಿಗೇ ಇರುವುದು ಸಾಬೀತಾಗಿರುವ ಕಾರಣ, ಅದರ ವಿರುದ್ಧವೂ ದೂರು ದಾಖಲು ಮಾಡಿಕೊಳ್ಳಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net