

ದೆಹಲಿ: ಬೈಕ್ನಲ್ಲಿ ಚಲಿಸುತ್ತಿದ್ದ ಇಬ್ಬರು ಯುವಕರು ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ರಸ್ತೆ ಮಧ್ಯೆ ಭಾರೀ ಜಟಾಪಟಿ ನಡೆದಿದ್ದು, ಬಂದೂಕು ತೋರಿಸಿ ವ್ಯಕ್ತಿಯೊಬ್ಬನಿಗೆ ಬೆದರಿಸಿದ ದೃಶ್ಯ ಇದೀಗ ಸ್ಥಳೀಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಘಟನೆಯ ವಿವರ: ಈಶಾನ್ಯ ದೆಹಲಿಯ ಭಜನ್‌ಪುರದಲ್ಲಿ ನಿಲ್ಲಿಸಿದ್ದ ಕಾರಿಗೆ ಬೈಕ್ನಲ್ಲಿ ಬಂದ ಇಬ್ಬರು ಯುವಕರು ಡಿಕ್ಕಿ ಹೊಡೆದಿದ್ದಾರೆ. ಇದರ ಪರಿಣಾಮ ಯುವಕರು ಮತ್ತು ಕಾರಿನ ಮಾಲಿಕನ ನಡುವೆ ಬಿರುಸಿನ ವಾಗ್ದಾಳಿ ನಡೆದಿದೆ. ಜಗಳದ ತೀವ್ರತೆ ಹೆಚ್ಚುತ್ತಿದ್ದಂತೆ ಚಾಲಕನಿಗೆ ಬಂದೂಕಿನಿಂದ ಬೆದರಿಸಿದ ಇಬ್ಬರು ಅಪರಿಚಿತ ಯುವಕರ ವಿರುದ್ಧ ಸದ್ಯ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಶುಕ್ರವಾರ ಮಧ್ಯರಾತ್ರಿ 1.15ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪ್ರಾಥಮಿಕ ತನಿಖೆ ಸೂಚಿಸಿದೆ.
"ಆ ಪ್ರದೇಶದಲ್ಲಿನ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲನೆ ನಡೆಸಲಾಗುತ್ತಿದ್ದು, ಶೀಘ್ರವೇ ಪೊಲೀಸರು ಆರೋಪಿಗಳನ್ನು ಗುರುತಿಸಿ ಬಂಧಿಸಲಿದ್ದಾರೆ. ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 506 (ಕ್ರಿಮಿನಲ್ ಬೆದರಿಕೆ), ಮತ್ತು 34 (ಸಾಮಾನ್ಯ ಉದ್ದೇಶಗಳು) ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ" ಎಂದು ಡಿಸಿಪಿ ಹೇಳಿದ್ದಾರೆ,(ಏಜೆನ್ಸೀಸ್).