ಮುಳ್ಳುಹಂದಿಯ ಆಸೆಗೆ ಪ್ರಾಣವನ್ನೇ ಕಳೆದುಕೊಂಡ್ರು; ಗುಹೆಯೊಳಗೆ ಉಸಿರುಗಟ್ಟಿ ಇಬ್ಬರ ಸಾವು

Porcupine
Published on

ಚಿಕ್ಕಮಗಳೂರು: ಇದು ಪ್ರಾಣ ತೆಗೆಯಲು ಹೋಗಿ ತಾವೇ ಪ್ರಾಣ ಬಿಟ್ಟಂಥ ಪ್ರಕರಣ. ಮುಳ್ಳುಹಂದಿಯ ಆಸೆಯಿಂದ ಗುಹೆಯೊಳಕ್ಕೆ ಹೊಕ್ಕ ಇಬ್ಬರು ಅಲ್ಲೇ ಉಸಿರುಗಟ್ಟಿ ಸಾವಿಗೀಡಾಗಿದ್ದಾರೆ. ಇಂಥದ್ದೊಂದು ಪ್ರಕರಣ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಂಭವಿಸಿದೆ.

ತಮಿಳುನಾಡು ಮೂಲದ ಗೊವಿಂದರಾಜು (3೦) ಮತ್ತು ವಿಜಯ್​ಕುಮಾರ್ (29) ಸಾವಿಗೀಡಾದವರು. ಮೂಡಿಗೆರೆ ತಾಲೂಕಿನ ಆನೆಗುಂದಿ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದೆ. ಗುಹೆಯೊಳಕ್ಕೆ ಒಟ್ಟು ನಾಲ್ವರು ಹೊಕ್ಕಿದ್ದು, ಆ ಪೈಕಿ ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ತಮಿಳುನಾಡಿನ ಈ ಕಾರ್ಮಿಕರು ಕಾಫಿತೋಟದ ಕೆಲಸಕ್ಕೆ ಬಂದಿದ್ದರು. ಮುಳ್ಳುಹಂದಿಯನ್ನು ಹಿಡಿಯುವ ಸಲುವಾಗಿ ಗುಹೆಯೊಳಗೆ ಬೆಂಕಿ ಹಾಕಿದ್ದರು. ನಂತರ ನಾಲ್ವರೂ ಒಳಹೊಕ್ಕಿದ್ದರು. ಈ ಸಂದರ್ಭದಲ್ಲಿ ಒಂದು ಮುಳ್ಳುಹಂದಿ ಬೆಂಕಿ ತಗುಲಿ ಸಾವಿಗೀಡಾಗಿದ್ದರೂ ಅದನ್ನು ಹಿಡಿಯಲು ಹೋಗಿದ್ದ ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ.

ಅಗ್ನಿಶಾಮಕ ದಳದ ಸಿಬ್ಬಂದಿ, ಸ್ಥಳೀಯರು ಜೊತೆಯಾಗಿ ಕಾರ್ಯಾಚರಣೆ ನಡೆಸಿ ಶವಗಳನ್ನು ಗುಹೆಯಿಂದ ಹೊರಗೆ ತೆಗೆದಿದ್ದಾರೆ. ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net