

ಬೆಂಗಳೂರು: ನಾಳೆಯಿಂದಲೇ ಟೋಲ್ ಸಂಗ್ರಹಿಸಲಾಗುವುದು ಎಂದು ಘೋಷಿಸಲಾಗಿದ್ದ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಗೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಇತ್ತೀಚಿನ ಬೆಳವಣಿಗೆ ಪ್ರಕಾರ ಟೋಲ್ ಸಂಗ್ರಹ ಸದ್ಯಕ್ಕಿಲ್ಲ ಎಂಬ ಮಾಹಿತಿ ಹೊರಬಿದ್ದಿದೆ.
ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ನಾಳೆ ಬೆಳಗ್ಗೆ 8 ಗಂಟೆಯಿಂದ ಸಂಗ್ರಹಿಸಲಾಗುವುದು ಎಂಬ ಮಾಹಿತಿ ಜೊತೆಗೆ ಟೋಲ್ ಶುಲ್ಕದ ವಿವರ ಪ್ರಕಟಗೊಂಡಿತ್ತು. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಆಕ್ಷೇಪವೂ ವ್ಯಕ್ತವಾಗಿತ್ತು. ಇದರ ಬೆನ್ನಿಗೇ ಸದ್ಯಕ್ಕೆ ಟೋಲ್ ಸಂಗ್ರಹಿಸುವುದಿಲ್ಲ ಎಂಬ ಘೋಷಣೆ ಅಚ್ಚರಿ ಮೂಡಿಸಿದೆ.
ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯ ಸರ್ವಿಸ್ ರಸ್ತೆಗಳ ಕಾಮಗಾರಿ ಪೂರ್ಣಗೊಳ್ಳುವವರೆಗೂ ಟೋಲ್ ಸಂಗ್ರಹ ಆರಂಭಿಸುವುದಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಸದ್ಯಕ್ಕೆ ಟೋಲ್ ಇಲ್ಲ ಎಂಬ ಈ ಘೋಷಣೆಯಿಂದ ಸಾರ್ವಜನಿಕರು ಸಂತಸಗೊಂಡಿದ್ದು, ನಿರಾಳರಾಗಿದ್ದಾರೆ.