

ನವದೆಹಲಿ: ಪ್ರೀತಿಸುವ ಹೃದಯಗಳನ್ನು ಬೆಸೆದು ಕೊಂಡಿರುವಂತೆ ಮಾಡಲು ಅಂತರವೊಂದು ಸಮಸ್ಯೆಯೇ ಅಲ್ಲ. ಪ್ರೀತಿ ಇದ್ದಾಗ ಪ್ರೀತಿಸುವವರು ಎಷ್ಟೇ ದೂರದಲ್ಲಿದ್ದರೂ ಮನಸು-ಹೃದಯ ಒಂದು ಅವ್ಯಕ್ತ ಅಗೋಚರ ಸಂಬಂಧ ಹೊಂದಿರುತ್ತವೆ.
ಪ್ರೀತಿಸುವವರು ಎಷ್ಟೇ ದೂರದಲ್ಲಿದ್ದರೂ ಪ್ರೀತಿಯನ್ನು ಪರಸ್ಪರ ಫೀಲ್ ಮಾಡಬಹುದು. ಆದರೆ ಅವರೇ ಚುಂಬನವನ್ನು ಆಲಿಂಗನವನ್ನು ಅನುಭವಿಸಬೇಕು ಎಂದರೆ ಕೈಗೆಟುಕುವಷ್ಟು ಹತ್ತಿರದಲ್ಲೇ ಇರಬೇಕು. ಅದಾಗ್ಯೂ ಇದೀಗ ಎಷ್ಟೇ ದೂರದಲ್ಲಿದ್ದರೂ ಪ್ರೀತಿಸುವವರಿಬ್ಬರು ಪರಸ್ಪರ ಚುಂಬಿಸಬಹುದು. ಹಾಗಂತ ಇದು ಫ್ಲೈಯಿಂಗ್ ಕಿಸ್ ಥರ ಅಲ್ಲ ಮತ್ತು ನಿಜವಾದ ಮುತ್ತಲ್ಲದಿದ್ದರೂ ನಿಜವಾದ ಕಿಸ್ ಕೊಡುವ ಫೀಲ್ಗೇನೂ ಕಡಿಮೆ ಇರುವುದಿಲ್ಲ. ದೂರದಿಂದಲೇ ಅಂಥದ್ದೊಂದು ನೈಜ ಮುತ್ತಿನ ಅನುಭವಕ್ಕೆಂದೇ ಚುಂಬನ ಸಾಧನ ಅರ್ಥಾತ್ ಕಿಸ್ಸಿಂಗ್ ಡಿವೈಸ್ ಇದೀಗ ಲಭ್ಯವಿದೆ.
ಚೀನಾದ ಜಿಯಾಂಗ್ ಝೋಂಗ್ಲಿ ಎಂಬಾತ ಈ ಸಾಧನನ್ನು ವಿನ್ಯಾಸ ಮಾಡಿದ್ದಾನೆ. ದೂರದಲ್ಲಿರುವ ತನ್ನ ಪ್ರೇಯಸಿಗೆ ಮುತ್ತು ಕೊಡಲು ಹಾಗೂ ಅದು ಹತ್ತಿರದಲ್ಲೇ ಇದ್ದು ಕೊಡುವ ಮುತ್ತಿನಷ್ಟೇ ನೈಜ ಅನುಭವ ನೀಡಲು ಆತ ಈ ಉಪಕರಣ ಕಂಡು ಹಿಡಿದಿದ್ದಾನೆ. ಇದನ್ನು ಚೀನಾದ ಚಾಂಗ್ಝೌ ಯುನಿವರ್ಸಿಟಿಯಲ್ಲಿ ಅಭಿವೃದ್ಧಿ ಪಡಿಸಲಾಗಿದೆ.
ಈ ಚುಂಬನ ಸಾಧನ ಟಚ್ ಸೆನ್ಸರ್, ಆ್ಯಕ್ಚುವೇಟರ್ಸ್ ಹಾಗೂ ಸಿಲಿಕಾನ್ ಲಿಪ್ಗಳನ್ನು ಒಳಗೊಂಡಿದೆ. ಇದರ ಮೂಲಕ ಮುತ್ತು ಹಂಚಿಕೊಂಡಾಗ ನಿಜವಾದ ಚುಂಬನದ ಸಂದರ್ಭದಲ್ಲಿನ ಚಲನೆ, ಶಬ್ದ ಹಾಗೂ ಬೆಚ್ಚನೆಯ ಅನುಭವ ಲಭಿಸಲಿದೆಯಂತೆ.
ಈ ಸಾಧನವನ್ನು ಬಳಸುವವರು ತಮ್ಮ ಮೊಬೈಲ್ಫೋನ್ನಲ್ಲಿ ಆ್ಯಪ್ವೊಂದನ್ನು ಇನ್ಸ್ಟಾಲ್ ಮಾಡಿಕೊಳ್ಳಬೇಕಾಗುತ್ತದೆ ಮತ್ತು ಈ ಸಾಧನವನ್ನು ಅವರ ಫೋನ್ ಚಾರ್ಜಿಂಗ್ ಸಾಕೆಟ್ಗೆ ಅಳವಡಿಸಿಕೊಳ್ಳಬೇಕಾಗುತ್ತದೆ. ಪರಸ್ಪರ ಮುತ್ತು ಕೊಡಬೇಕಾದವರು ಈ ಆ್ಯಪ್ ಬಳಸಿಕೊಂಡು ವಿಡಿಯೋ ಕಾಲ್ ಮಾಡಬೇಕಾಗುತ್ತದೆ. ನಂತರ ಅವರು ಮುತ್ತು ಕೊಟ್ಟರೆ ಇಬ್ಬರೂ ಹತ್ತಿರವಿದ್ದು ಮುತ್ತು ಕೊಟ್ಟಷ್ಟೇ ನೈಜವಾಗಿರುತ್ತದೆಯಂತೆ. ಇದೀಗ ಈ ಕಿಸ್ಸಿಂಗ್ ಡಿವೈಸ್ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡಲಾರಂಭಿಸಿದೆ.