

ಮುಂಬೈ: ತಾಜ್ ಹೋಟೆಲ್ ಸ್ಫೋಟಿಸಲು ಪಾಕಿಸ್ತಾನಿಗಳಿಬ್ಬರು ನಗರವನ್ನು ತಲುಪಲಿದ್ದಾರೆ ಎಂದು ಮುಂಬೈ ಪೊಲೀಸರಿಗೆ ಕರೆ ಮಾಡಿ ಬೆದರಿಕೆ ಹಾಕಿರುವ ಘಟನೆ ಗುರುವಾರ ನಡೆದಿದೆ.
ಮುಂಬೈ ಪೊಲೀಸ್ ಇಲಾಖೆಯ ಮುಖ್ಯ ಕಂಟ್ರೋಲ್ ರೂಮ್ಗೆ ಬೆದರಿಕೆ ಕರೆ ಬಂದಿದೆ. ನಗರದ ಲ್ಯಾಂಡ್ಮಾರ್ಕ್ ಆಗಿರುವ ತಾಜ್ ಹೋಟೆಲ್ ಅನ್ನು ಸ್ಫೋಟಿಸಲು ಪಾಕಿಸ್ತಾನದ ಇಬ್ಬರು ವ್ಯಕ್ತಿಗಳು ಸಮುದ್ರ ಮಾರ್ಗದ ಮೂಲಕ ಭಾರತದ ಗಡಿಯನ್ನು ಪ್ರವೇಶ ಮಾಡಲಿದ್ದಾರೆ ಎಂದು ಬೆದರಿಕೆ ಹಾಕಲಾಗಿದೆ.
ಕರೆ ಮಾಡಿದ ವ್ಯಕ್ತಿ ತನ್ನನ್ನು ತಾನು ಮುಕೇಶ್ ಸಿಂಗ್ ಎಂದು ಪರಿಚಯಿಸಿಕೊಂಡಿದ್ದಾನೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ. ಆದಾಗ್ಯೂ ಆತನ ನಿಜವಾದ ಹೆಸರು ಜಗದಂಬ ಪ್ರಸಾದ್ ಸಿಂಗ್ ಎಂಬುದು ತನಿಖೆಯಲ್ಲಿ ತಿಳಿದುಬಂದಿದೆ. 35 ವರ್ಷದ ಪ್ರಸಾದ್ ಸಿಂಗ್, ಉತ್ತರ ಪ್ರದೇಶದ ಗೊಂಡಾ ಮೂಲದವನು. ಆದರೆ, ಪ್ರಸ್ತುತ ಮುಂಬೈನ ಸಾಂತಾಕ್ರೂಜ್ನಲ್ಲಿ ನೆಲೆಸಿದ್ದಾನೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಯನ್ನು ಆರಂಭಿಸಿದ್ದಾರೆ.
ಮುಂಬೈನ ಕೊಲಾಬಾ ಪ್ರದೇಶದಲ್ಲಿರುವ ತಾಜ್ ಹೋಟೆಲ್ ಮೇಲೆ 2008ರಲ್ಲಿ ಉಗ್ರರಿಂದ ದಾಳಿ ನಡೆದಿತ್ತು. ಈ ಘಟನೆಯಲ್ಲಿ 18 ಭದ್ರತಾ ಸಿಬ್ಬಂದಿ ಸೇರಿದಂತೆ 166 ಮಂದಿ ಮೃತಪಟ್ಟಿದ್ದರು. ಒಂಬತ್ತು ಉಗ್ರರನ್ನು ನಮ್ಮ ಯೋಧರು ಹೊಡೆದುರುಳಿಸಿದ್ದರು. ಕೊನೆಗೂ ಲಷ್ಕರ್ ಎ ತೊಯ್ಬಾ ಉಗ್ರಗಾಮಿ ಸಂಘಟನೆಯ ಅಜ್ಮಲ್ ಕಸಬ್ನನ್ನು ಜೀವಂತವಾಗಿ ಸೆರೆ ಹಿಡಿಯುವಲ್ಲಿ ಸೇನೆ ಯಶಸ್ವಿಯಾಗಿತ್ತು. 2012ರ ನವೆಂಬರ್ 21ರಂದು ಈತನಿಗೆ ಗಲ್ಲುಶಿಕ್ಷೆ ವಿಧಿಸಲಾಯಿತು.
ಈ ಹಿಂದೆಯೂ ಹೋಟೆಲ್‌ಗೆ ಇದೇ ರೀತಿಯ ಅನೇಕ ಬೆದರಿಕೆ ಕರೆಗಳು ಬಂದಿವೆ. (ಏಜೆನ್ಸೀಸ್)