More

    ಅದಾನಿ ಗ್ರೂಪ್ ವಿರುದ್ಧ ಮತ್ತೆ ದಾಳಿ; ಈ ಭಾರಿ ಒಸಿಸಿ​ಆರ್​​ಪಿಯಿಂದ ಆರೋಪ

    ನವದೆಹಲಿ: ಅಮೆರಿಕದ ಹಿಂಡನ್​ಬರ್ಗ್ ಸಂಸ್ಥೆ ಕೆಲವು ತಿಂಗಳ ಹಿಂದೆ ಮಾಡಿದ ಆರೋಪಗಳಿಂದ ತೀವ್ರ ಆಘಾತ ಎದುರಿಸಿದ್ದ ಗೌತಂ ಅದಾನಿ ನೇತೃತ್ವದ ಉದ್ಯಮ ಸಮೂಹ ಈಗ ಅದೇ ರೀತಿಯ ಮತ್ತೊಂದು ಭಾರಿ ಆರೋಪಕ್ಕೆ ಒಳಗಾಗಿದೆ. ಇದರಿಂದಾಗಿ ಷೇರು ಮಾರುಕಟ್ಟೆಯಲ್ಲಿ ತಲ್ಲಣ ಸೃಷ್ಟಿಯಾಗಿದ್ದು, ಅದಾನಿ ಗ್ರೂಪ್​ನ ಕೆಲವು ಕಂಪನಿಗಳ ಷೇರು ಮೌಲ್ಯ ಕುಸಿದಿದೆ.

    ಆರ್ಥಿಕ ಅಪರಾಧಿಗಳ ಸ್ವರ್ಗ ಎನ್ನಲಾಗುವ ಮಾರಿಷಸ್​ನ ‘ಬೇನಾಮಿ’ ಕಂಪನಿಗಳು ಅದಾನಿ ಷೇರುಗಳಲ್ಲಿ ಹತ್ತಾರು ಲಕ್ಷ ಡಾಲರ್ ಹಣವನ್ನು ಹೂಡಿಕೆ ಮಾಡಿವೆ ಎಂದು ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರ ವರದಿ ಯೋಜನೆ (ಒಸಿಸಿಆರ್​ಪಿ) ಎಂಬ ಸಂಸ್ಥೆ ಗುರುವಾರ ಆರೋಪಿಸಿದ್ದು, ಅದಾನಿ ಗ್ರೂಪ್​ಗೆ ಹೊಸ ಸಂಕಟ ಎದುರಾಗಿದೆ. ಜಾರ್ಜ್ ಸೊರೋಸ್ ಮತ್ತು ರಾಕ್​ಫೆಲ್ಲರ್ ಬ್ರದರ್ಸ್ ಫಂಡ್​ನಂಥ ಸಂಸ್ಥೆಗಳ ನೆರವು ಹೊಂದಿರುವ ವೇದಿಕೆಯಾಗಿದೆ ಒಸಿಸಿಆರ್​ಪಿ.

    ಹಿಂಡನ್​ಬರ್ಗ್ ಆರೋಪದಿಂದಾಗಿ ಅದಾನಿ ಗ್ರೂಪ್​ನ ಷೇರು ಮೌಲ್ಯ ಕುಸಿತ ಕಂಡು, ಅಂದಾಜು 150 ಶತಕೋಟಿ ಡಾಲರ್​ನಷ್ಟು ಸಂಪತ್ತು ನಷ್ಟ ಹೊಂದಿತ್ತು. ಲೆಕ್ಕಪತ್ರಗಳಲ್ಲಿ ವಂಚನೆ, ಷೇರು ದರಗಳಲ್ಲಿ ಮೋಸ ಮತ್ತು ತೆರಿಗೆ-ಸ್ವರ್ಗಗಳ ಅಸಮರ್ಪಕ ಬಳಕೆ ಮೊದಲಾದ ಆರೋಪಗಳನ್ನು ಹಿಂಡನ್​ಬರ್ಗ್ ಮಾಡಿದ್ದು ಅವೆಲ್ಲವನ್ನೂ ಅದಾನಿ ಸಮೂಹ ನಿರಾಕರಿಸಿತ್ತು. ಈಗ, ‘ನಿಗೂಢ’ ಹೂಡಿಕೆದಾರರು ವಿದೇಶಗಳ ಅನುಕೂಲಕರ ವ್ಯವಸ್ಥೆಗಳನ್ನು ಬಳಕೆ ಮಾಡಿಕೊಂಡು ಅದಾನಿ ಷೇರುಗಳನ್ನು ಖರೀದಿಸಿ ಮಾರಾಟ ಮಾಡಿದ ಕನಿಷ್ಠ ಎರಡು ಪ್ರಕರಣಗಳು ತೆರಿಗೆ ಸ್ವರ್ಗಗಳ ವಿವಿಧ ಕಡತಗಳು ಮತ್ತು ಅದಾನಿ ಗ್ರೂಪ್​ನ ಇ-ಮೇಲ್​ಗಳ ಪರಿಶೀಲನೆಯಿಂದ ದೃಢಪಟ್ಟಿದೆ ಎಂದು ಒಸಿಸಿಆರ್​ಪಿ ಹೇಳಿದೆ.

    ಗ್ರೂಪ್ ಮೌನ

    ಹೊಸ ಆರೋಪಗಳ ಬಗ್ಗೆ ಅದಾನಿ ಗ್ರೂಪ್ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸಿಲ್ಲ. ಆದರೆ, ಮಾರಿಷಸ್​ನ ಪ್ರಶ್ನಿತ ನಿಧಿಯ ಹೆಸರು ಈಗಾಗಲೇ ಅಮೆರಿಕದ ಹಿಂಡನ್​ಬರ್ಗ್ ವರದಿಯಲ್ಲಿ ಉಲ್ಲೇಖವಾಗಿದೆ. ‘ಈ ಆರೋಪಗಳು ಆಧಾರರಹಿತ ಮಾತ್ರವಲ್ಲದೆ ಅಸಮರ್ಥನೀಯವೂ ಆಗಿವೆ. ಅವುಗಳನ್ನು ಹಿಂಡನ್​ಬರ್ಗ್ ಆರೋಪಗಳನ್ನೇ ಹೊಸದಾಗಿ ತೋರಿಸಲಾಗಿದೆ’ ಎಂದು ತಿಳಿಸಿದೆ. ಅದಾನಿ ಗ್ರೂಪ್​ನ ಸಾರ್ವಜನಿಕವಾಗಿ ಪಟ್ಟಿ ಮಾಡಿದ ಎಲ್ಲ ಕಂಪನಿಗಳು ಕಾನೂನುಬದ್ಧವಾಗಿವೆ. ಷೇರುಗಳು ಕೂಡ ಸೂಕ್ತ ನಿಯಂತ್ರಣಕ್ಕೆ ಒಳಪಟ್ಟಿವೆ ಎಂದೂ ಅದು ಹೇಳಿದೆ.

    ಕೆಲವರ ಕಣ್ಣು ಕೆಂಪಾಗಿಸಿದೆ

    ಅದಾನಿ ಸಮೂಹ ಆರೋಪ ಕುರಿತು ಗುರುವಾರ ನವದೆಹಲಿ ಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಬಿಜೆಪಿ ರಾಷ್ಟ್ರೀಯ ವಕ್ತಾರ ಸೈಯದ್ ಜಾಫರ್ ಇಸ್ಲಾಂ ಅವರು, ಭಾರತವು ಬಲಿಷ್ಠ ರಾಷ್ಟ್ರವಾಗಿ ಬೆಳೆಯುತ್ತಿರುವುದು ಹಲವರ ಕಣ್ಣು ಕೆಂಪಾಗಿಸಿದೆ ಎಂದಿದ್ದಾರೆ. ಮೃದು ರಾಷ್ಟ್ರವಾಗಿದ್ದ ಭಾರತ ಇಂದು ಬಲಿಷ್ಠ ರಾಷ್ಟ್ರವಾಗಿ ಹೊರ ಹೊಮ್ಮುತ್ತಿದೆ. ಇದು ಅನೇಕ ಜನರ ಕಣ್ಣು ಕೆಂಪಾಗಿಸಿದೆ ಎಂದು ಹೇಳಿದರು.

    ಷೇರು ಮೌಲ್ಯ ಕುಸಿತ

    ಒಸಿಸಿಆರ್​ಪಿ ಆರೋಪಗಳ ಹಿನ್ನೆಲೆಯಲ್ಲಿ ಗುರುವಾರ ಅದಾನಿ ಸಮೂಹದ ಷೇರುಗಳ ಬೆಲೆಗಳಲ್ಲಿ ಕುಸಿತ ದಾಖಲಾಗಿದೆ. ಅದಾನಿ ಗ್ರೀನ್ ಎನರ್ಜಿ ಕಂಪನಿಯ ಷೇರುಗಳ ಮೌಲ್ಯ ಶೇಕಡಾ 4.43ರಷ್ಟು ಕುಸಿತವಾಗಿ ಒಂದು ಷೇರಿನ ಬೆಲೆ 927.65 ರೂಪಾಯಿ ಆಗಿದೆ.

    ಏನಿದು ಪ್ರಕರಣ?

    ನಾಸೆರ್ ಅಲಿ ಶಾಬಾನ್ ಅಹ್ಲಿ ಮತ್ತು ಚಾಂಗ್ ಚುಂಗ್-ಲಿಂಗ್ ಎಂಬ ಇಬ್ಬರು ವ್ಯಕ್ತಿಗಳು ದೀರ್ಘ ಕಾಲದಿಂದ ಅದಾನಿ ಕುಟುಂಬದೊಂದಿಗೆ ವ್ಯಾವಹಾರಿಕ ಸಂಬಂಧ ಹೊಂದಿದ್ದಾರೆ. ಅವರು ಅದಾನಿ ಗ್ರೂಪ್ ಮತ್ತು ಗೌತಂ ಅದಾನಿಯ ಅಣ್ಣ ವಿನೋದ್ ಅದಾನಿಗೆ ಸಂಬಂಧಿಸಿದ ಕಂಪನಿಗಳಲ್ಲಿ ಷೇರು ಹೊಂದಿದ್ದರು ಹಾಗೂ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು ಎಂದು ಒಸಿಸಿಆರ್​ಪಿ ಹೇಳಿದೆ. ಈ ಇಬ್ಬರು ವ್ಯಕ್ತಿಗಳ ಭಾಗವಹಿಸುವಿಕೆ ಮರೆಮಾಚಿ ವಿದೇಶಿ ಬೇನಾಮಿ ಸಂಸ್ಥೆಗಳ ಮೂಲಕ ಅವರು ಅದಾನಿ ಷೇರುಗಳನ್ನು ಖರೀದಿಸಿ ಮಾರಾಟ ಮಾಡಿ ಲಾಭ ಗಳಿಸುತ್ತಿದ್ದರು ಎಂದು ಆರೋಪಿಸಿದೆ.

    ಜೆಪಿಸಿ ತನಿಖೆಗೆ ಆಗ್ರಹ

    ಅದಾನಿ ಸಮೂಹದ ವಿರುದ್ಧ ಇನ್ನೊಂದು ಗಂಭೀರ ಆರೋಪ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ನರೇಂದ್ರ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಅದಾನಿ ಗ್ರೂಪ್​ಗೆ ಸಂಬಂಧಿಸಿದ ಶೆಲ್ ಕಂಪನಿಗಳಲ್ಲಿನ ‘ಭ್ರಷ್ಟಾಚಾರ’ವು ಇನ್ನಷ್ಟು ಬಲಗೊಳ್ಳುತ್ತಿದೆ ಎಂದಿರುವ ಕಾಂಗ್ರೆಸ್, ಜಂಟಿ ಸಂಸದೀಯ ಸಮಿತಿಯಿಂದ (ಜೆಪಿಸಿ) ಮಾತ್ರವೇ ಸತ್ಯ ಹೊರಬರಲಿದೆ ಎಂದು ಅಭಿಪ್ರಾಯಪಟ್ಟಿದೆ. ಅದಾನಿ ಗುಂಪಿನ ಅವ್ಯವಹಾರಗಳನ್ನು ಮುಚ್ಚಿ ಹಾಕಲು ಮೋದಿ ಸರ್ಕಾರ ಎಷ್ಟೇ ಪ್ರಯತ್ನಗಳನ್ನು ಮಾಡಿದರೂ ಸತ್ಯವನ್ನು ಶಾಶ್ವತವಾಗಿ ಮುಚ್ಚಿಡಲು ಆಗುವುದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ವಕ್ತಾರ ಜೈರಾಮ್ ರಮೇಶ್ ಹೇಳಿದ್ದಾರೆ.

    ವ್ಯಾಪಕ ಜಾಲ

    24 ಲಾಭೇತರ ತನಿಖಾ ಕೇಂದ್ರಗಳು ಸೇರಿಕೊಂಡು ರೂಪಿಸಿದ ತನಿಖಾ ವರದಿಗಾರಿಕೆ ವೇದಿಕೆ ತಾನೆಂದು ಹೇಳಿಕೊಳ್ಳುವ ಒಸಿಸಿಆರ್​ಪಿ ಯುರೋಪ್, ಆಫ್ರಿಕಾ, ಏಷ್ಯಾ ಮತ್ತು ಲ್ಯಾಟಿನ್ ಅಮೆರಿಕಗಳಲ್ಲಿ ವ್ಯಾಪಿಸಿದೆ. ಅದು ಸದ್ಯವೇ ಉನ್ನತ ಭಾರತೀಯ ಕಾರ್ಪೆರೇಟ್ ಕಂಪನಿಯೊಂದರ ಹಗರಣಗಳನ್ನು ಬಯಲು ಮಾಡಲಿದೆ ಎಂದು ಕೆಲವು ದಿನಗಳ ಹಿಂದೆ ಮಾಧ್ಯಮ ಸಂಸ್ಥೆಯೊಂದು ವರದಿ ಮಾಡಿತ್ತು. ಅಲಿ ಮತ್ತು ಚಾಂಗ್, ಅದಾನಿ ಪರವಾದ ಪ್ರವರ್ತಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆಂದು ಪರಿಗಣಿಸಬೇಕೇ ಎಂದು ಒಸಿಸಿಆರ್​ಪಿ ಪ್ರಶ್ನಿಸಿತ್ತು. ಒಂದು ವೇಳೆ ಅದು ಹೌದೆಂದಾಲ್ಲಿ ಕಾನೂನುಸಮ್ಮತ ಶೇಕಡಾ 75ಕ್ಕಿಂತ ಹೆಚ್ಚಿನ ಷೇರುಗಳ ಮಾಲೀಕತ್ವವನ್ನು ಒಳಗಿನವರೇ ಹೊಂದಿದಂತಾಗುತ್ತದೆ. ಇದು ಭಾರತೀಯ ಲಿಸ್ಟಿಂಗ್ ಕಾನೂನಿನ ಉಲ್ಲಂಘನೆಯಾಗುತ್ತದೆ ಎಂದಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts