ಬಿ.ಎಸ್​.ವೈಗೆ ಸೆಡ್ಡು ಹೊಡೆಯಲು ಇಂದಿನ ಸಭೆ ಸೀಮಿತವಾಗಿದೆ: ರಾಜ್ಯ ಕಾಂಗ್ರೆಸ್​

BL Santhosh BSY
Published on

ಬೆಂಗಳೂರು: ಬಿಜೆಪಿ ಪಕ್ಷಕ್ಕೆ ಸಭೆ ಕರೆಯಲು ಒಬ್ಬ ಅಧ್ಯಕ್ಷ ದಿಕ್ಕಿಲ್ಲ, ಬಿಜೆಪಿ ಶಾಸಕರ ಸಭೆ ನಡೆಸಲು ಒಬ್ಬ ಶಾಸಕಾಂಗ ಪಕ್ಷದ ನಾಯಕನಿಲ್ಲ ಎಂದು ರಾಜ್ಯ ಕಾಂಗ್ರೆಸ್​ ವ್ಯಂಗ್ಯವಾಡಿದೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಬರೆದುಕೊಂಡಿರುವ ಕಾಂಗ್ರೆಸ್​ ಬಿಜೆಪಿ ಶಾಸಕರೆಲ್ಲಾ ಮಾಜಿ ಸಿಎಂ ಬಿ.ಎಸ್​. ಯಡಿಯೂರಪ್ಪ ಅವರ ಹಿಂದೆ ಹೋಗಿದ್ದೇ ತಡ ಕುಪಿತರಾದ ಬಿ ಎಲ್ ಸಂತೋಷ್ ನಾನೇ ಲೀಡರ್ ಎಂಬ ಸಂದೇಶ ರವಾನಿಸಲು ಸಭೆ ನಡೆಸಿದ್ದಾರೆ ಎಂದು ಟೀಕಿಸಿದೆ.

ನಯಾಪೈಸೆ ಕಿಮ್ಮತ್ತಿಲ್ಲ

ಬಿಜೆಪಿ ತನ್ನ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಮಾಡಲು ಸಭೆ ನಡೆಸಬೇಕಿತ್ತು, ನೂತನ ರಾಜ್ಯಾಧ್ಯಕ್ಷರ ನೇಮಕಕ್ಕಾದರೂ ಸಭೆ ನಡೆಸಬೇಕಿತ್ತು. ಆದರೆ, ಒಬ್ಬ ವ್ಯಕ್ತಿಯ ಪ್ರತಿಷ್ಠೆಯ ಹಪಹಪಿಯನ್ನು ಸಂತೈಸಲು ಸಭೆ ನಡೆಸಿದೆ. ಬಿಜೆಪಿಯ ಅಸಮಾಧಾನಿತರು ಈ ಸಭೆಯಿಂದ ದೂರ ಉಳಿಯುವ ಮೂಲಕ ಕಿತ್ತಾಟ ಮತ್ತೊಮ್ಮೆ ಬಹಿರಂಗವಾಗಿದೆ. ಬಿ.ಎಲ್​​. ಸಂತೋಷ್​ ಅವರಿಗೆ ನಯಾಪೈಸೆ ಕಿಮ್ಮತ್ತಿಲ್ಲ ಎಂಬುದು ಅನಾವರಣಗೊಂಡಿದೆ.

ಬಿಜೆಪಿ ಪಕ್ಷಕ್ಕೆ ಸಭೆ ಕರೆಯಲು ಒಬ್ಬ ಅಧ್ಯಕ್ಷ ದಿಕ್ಕಿಲ್ಲ, ಬಿಜೆಪಿ ಶಾಸಕರ ಸಭೆ ನಡೆಸಲು ಒಬ್ಬ ಶಾಸಕಾಂಗ ಪಕ್ಷದ ನಾಯಕನಿಲ್ಲ. ಜನಪ್ರತಿನಿಧಿಯಾಗಲು ಅರ್ಹತೆ ಇಲ್ಲದ, ನಾಲ್ಕು ಮತಗಳನ್ನು ಸೆಳೆಯಲು ಶಕ್ತಿ ಇಲ್ಲದ ಬಿ ಎಲ್ ಸಂತೋಷ್ ಸಭೆ ನಡೆಸುವ ದುರ್ಗತಿ ಬಂದಿದೆ ಎಂದರೆ ಬಿಜೆಪಿ ಅದೆಷ್ಟು ರಾಜಕೀಯ ದಿವಾಳಿಯಾಗಿರಬಹುದು ಎಂದು ಲೇವಡಿಯಾಡಿದೆ.

ಜೀವ ಬರುವುದಿಲ್ಲ

ಬಿ.ಎಸ್​. ಯಡಿಯೂರಪ್ಪನವರಿಗೆ ಸೆಡ್ಡು ಹೊಡೆಯಲು ಈ ಸಭೆ ಸೀಮಿತವಾಗಿದೆ. ಇತ್ತೀಚಿಗೆ ಬಿಜೆಪಿಯ ಶಾಸಕರು ಯಡಿಯೂರಪ್ಪನವರ ಮನೆಯಲ್ಲಿ ಸಭೆ ಸೇರಿ ನೀವೇ ನಾಯಕತ್ವ ವಹಿಸಿಕೊಳ್ಳಬೇಕು ಎಂದು ಆಗ್ರಹಿಸಿದ್ದರು. ಬಿಜೆಪಿ ಶಾಸಕರೆಲ್ಲಾ ಮಾಜಿ ಸಿಎಂ ಬಿ.ಎಸ್​. ಯಡಿಯೂರಪ್ಪ ಅವರ ಹಿಂದೆ ಹೋಗಿದ್ದೇ ತಡ ಕುಪಿತರಾದ ಬಿ ಎಲ್ ಸಂತೋಷ್ ನಾನೇ ಲೀಡರ್ ಎಂಬ ಸಂದೇಶ ರವಾನಿಸಲು ಸಭೆ ನಡೆಸಿದ್ದಾರೆ.

ಚುನಾವಣೆಯ ತಂತ್ರಗಾರಿಕೆ ಮಕಾಡೆ ಮಲಗಿ ಹೀನಾಯ ಸೋಲು ಅನುಭವಿಸಿದಾಗ ಇದೇ ಸಂತೋಷ್ ಗಂಟು ಮೂಟೆ ಕಟ್ಟಿಕೊಂಡು ನಾಪತ್ತೆಯಾಗಿದ್ದರು, ಈಗ ಬಿ.ಎಸ್​. ಯಡಿಯೂರಪ್ಪನವರಿಗೆ ಸೆಡ್ಡು ಹೊಡೆಯಲು ಮತ್ತೆ ಪ್ರತ್ಯಕ್ಷರಾಗಿ ಸಭೆ ನಡೆಸಿದ್ದಾರೆ. ಅದೇನೇ ಮಾಡಿದರೂ ಬಿಜೆಪಿಗೆ ಮತ್ತೆ ಜೀವ ಬರುವುದಿಲ್ಲ ಎಂದು ರಾಜ್ಯ ಕಾಂಗ್ರೆಸ್​ ಸಾಮಾಜಿಕ ಜಾಲತಾಣ ಎಕ್ಸ್​​ನಲ್ಲಿ ವ್ಯಂಗ್ಯವಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net