

ಮನಿಲಾ: ಬಟ್ಟೆ ಕಾರ್ಖಾನೆಯೊಂದರಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಮಗು ಸೇರಿದಂತೆ 15ಮಂದಿ ಸಜೀವ ದಹನವಾಗಿರುವ ಘಟನೆ ಫಿಲಿಪೈನ್ಸ್ನ ಮನಿಲಾದಲ್ಲಿ ನಡೆದಿದೆ.
ಘಟನೆಯೂ ಬೆಳಗಿನ ಜಾವ ಐದು ಘಂಟೆ ಸುಮಾರಿಗೆ ಸಂಭವಿಸಿದ್ದು, 15 ಮಂದಿ ಮೃತಪಟ್ಟಿದ್ದಾರೆ. ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಗ್ನಿಶಾಮಕ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಸೆಪ್ಟೆಂಬರ್ 18ರಿಂದ 22ರವರೆಗೆ ಸಂಸತ್ ವಿಶೇಷ ಅಧಿವೇಶನ
ಅವಘಡದ ಕುರಿತು ಪ್ರತಿಕ್ರಿಯಿಸಿರುವ ಅಗ್ನಿಶಾಮಕ ಇಲಾಖೆಯ ವರಿಷ್ಠಾಧಿಕಾರಿ ಅರಿಸ್ಟಾಟಲ್ ಬನಗಾ ಎರಡು ಅಂತಸ್ತಿನ ಕಟ್ಟಡದಲ್ಲಿ ಬ್ಯಾಗ್ ಹಾಗೂ ಬೂಟುಗಳನ್ನು ಮಾರಾಟ ಮಾಡುವುದಾಗಿ ಸ್ಥಳೀಯ ಆಡಳಿತದಿಂದ ಅನುಮತಿ ಪಡೆಯಲಾಗಿತ್ತು. ಆದರೆ, ಇಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಬಟ್ಟೆಗಳನ್ನು ತಯಾರಿಸಲಾಗುತ್ತಿತ್ತು.
ಮೊದಲಿಗೆ ಮೂವರು ಉದ್ಯೋಗಿಗಳನ್ನು ಕಂಪನಿ ಒಳಗೊಂಡಿದೆ ಎಂದು ಹೇಳಲಾಗಿತ್ತು. ಆದರೆ, ಮಾಲೀಕರು ಸೇರಿದಂತೆ 18 ಮಂದಿ ಕೆಲಸ ಮಾಡುತ್ತಿದ್ದರು. ಮಿಷನ್ನಲ್ಲಿ ಉಂಟಾದ ದೋಷದಿಂದ ದುರಂತ ಸಂಭವಿಸಿರಬಹುದು. ಈ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ಅಗ್ನಿಶಾಮಕ ಇಲಾಖೆಯ ವರಿಷ್ಠಾಧಿಕಾರಿ ಅರಿಸ್ಟಾಟಲ್ ಬನಗಾ ತಿಳಿಸಿದ್ದಾರೆ.