

ತಿರುಪತಿ: ತಿರುಪತಿಯ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರು ಹಿರಿಯ ಅಧಿಕಾರಿಗಳನ್ನು ಅಮಾನತು ಮಾಡಲಾಗಿದ್ದು, ಮೃತ ಕುಟುಂಬಗಳಿಗೆ ತಲಾ 25 ಲಕ್ಷ ರೂ. ಮತ್ತು ಕುಟುಂಬದ ಒಬ್ಬಬ್ಬರಿಗೆ ಗುತ್ತಿಗೆ ಆಧಾರದ ಕೆಲಸ ನೀಡುವುದಾಗಿ ಆಂಧ್ರಪ್ರದೇಶ ಸಿಎಂ ಚಂದ್ರ ಬಾಬು ನಾಯ್ಡು ಗುರುವಾರ ಘೋಷಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಇಬ್ಬರಿಗೆ ತಲಾ ರೂ.5 ಲಕ್ಷ ಧನಸಹಾಯ ನೀಡುವುದಾಗಿ ತಿಳಿಸಿದ ಸಿಎಂ ಆರೋಗ್ಯ ಸುಧಾರಿಸುವವರೆಗೆ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿ ಚಂದ್ರಬಾಬು ಸ್ಪಷ್ಟಪಡಿಸಿದರು.
ಇನ್ನು 33 ಗಾಯಾಳುಗಳಿಗೆ ತಲಾ 2 ಲಕ್ಷ ರೂ.ನಂತೆ ಆರ್ಥಿಕ ನೆರವು ನೀಡಲಾಗುತ್ತಿದೆ. ಘಟನೆಯಲ್ಲಿ ಗಾಯಗೊಂಡಿರುವ 35 ಮಂದಿಗೆ ತಿರುಮಲದಲ್ಲಿ ಶ್ರೀವಾರಿ(ತಿಮ್ಮಪ್ಪ) ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ಗಾಯಾಳುಗಳನ್ನು ಅವರ ಸ್ವಗ್ರಾಮಕ್ಕೆ ಕಳುಹಿಸಲು ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದರು.
ತಿರುಮಲ ವೆಂಕಟೇಶ್ವರ ಸ್ವಾಮಿಯ ಭಕ್ತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಪುಣ್ಯದಿನಗಳಲ್ಲಿ ಸ್ವಾಮಿಯ ದರ್ಶನ ಮಾಡುವ ಭಾವ ಜನರಲ್ಲಿ ಅಧಿಕವಾಗುತ್ತಿದೆ. ಪುಣ್ಯದಿನಗಳಲ್ಲಿ ದರ್ಶನ ಸುಗಮವಾಗುವಂತೆ ಮಾಡುವುದು ಅಧಿಕಾರಿಗಳ ಜವಾಬ್ದಾರಿ. ಈ ಕುರಿತು ಅಧಿಕಾರಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಲ್ಲದೆ, ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಸಲಾಗಿದೆ ಎಂದು ಚಂದ್ರಬಾಬು ಸ್ಪಷ್ಟಪಡಿಸಿದರು.
ಕಳೆದ ನಾಲ್ಕೈದು ವರ್ಷಗಳಲ್ಲಿ ಆಗಿರುವ ಎಲ್ಲ ಸಂಗತಿಗಳನ್ನು ಒಂದೊಂದಾಗಿ ಸರಿಪಡಿಸಲಾಗುತ್ತಿದೆ. ಪ್ರಸಾದ, ಅನ್ನದಾನ, ಕುಟೀರಗಳು ಸೇರಿಂದಂತೆ ಹಲವು ವಿಷಯಗಳನ್ನು ಸರಿಪಡಿಸುತ್ತಿದ್ದೇವೆ ಎಂದರು. (ಏಜೆನ್ಸೀಸ್).