

Honeymoon Murder Case : ಮೇಘಾಲಯ ಹನಿಮೂನ್ ಕೊಲೆ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ. ರಾಜಾ ರಘುವಂಶಿ ಕೊಲೆ ಪ್ರಕರಣದ ಆರೋಪಿಗಳು ತಮ್ಮನ್ನು ತಾವೇ ಖುಲಾಸೆಗೊಳಿಸಿದ್ದಾರೆ. ರಾಜಾನನ್ನು ಕೊಂದ ಐವರು ಆರೋಪಿಗಳಲ್ಲಿ ಇಬ್ಬರು ತಮ್ಮ ಆರೋಪವನ್ನು ಹಿಂತೆಗೆದುಕೊಂಡಿದ್ದಾರೆ.
ಆರೋಪಿಗಳನ್ನು ನ್ಯಾಯಧೀಶರ ಮುಂದೆ ಹಾಜರುಪಡಿಸಿದಾಗ, ಆರೋಪಿಗಳಿಬ್ಬರು ತಮ್ಮ ಅಪರಾಧವನ್ನು ಒಪ್ಪಿಕೊಳ್ಳದೇ ಮೌನವಾಗಿದ್ದರು. ಇದು ಮೇಘಾಲಯ ಪೊಲೀಸರಿಗೆ ಆಘಾತವನ್ನುಂಟು ಮಾಡಿದೆ. ಇದಕ್ಕೂ ಮೊದಲು, ಪೊಲೀಸ್ ವಿಚಾರಣೆಯ ಸಮಯದಲ್ಲಿ, ರಾಜಾನನ್ನು ಕೊಂದಿದ್ದಾಗಿ ಒಪ್ಪಿಕೊಂಡಿದ್ದರು. ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ, ಉಲ್ಟಾ ಹೊಡೆದಿದ್ದಾರೆ. ಆದಾಗ್ಯೂ, ಪೊಲೀಸರು ತಮ್ಮ ಬಳಿ ಎಲ್ಲ ಪುರಾವೆಗಳಿವೆ ಎಂದು ಹೇಳಿದ್ದಾರೆ.
ಕೊಲೆ ಪ್ರಕರಣದ ತನಿಖೆ ನಡೆಸುತ್ತಿರುವ ಶಿಲ್ಲಾಂಗ್ ನಗರ ಪೊಲೀಸ್ ವರಿಷ್ಠಾಧಿಕಾರಿ ಹರ್ಬರ್ಟ್ ಪಿನಿಯೈಡ್ ಖಾರ್ಕೊಂಗೋರ್, ಗುರುವಾರ (ಜೂನ್ 26) ಆರೋಪಿಗಳನ್ನು ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದರು. ಈ ವೇಳೆ ಇಬ್ಬರು ಆರೋಪಿಗಳಾದ ಆಕಾಶ್ ರಜಪೂತ್ ಮತ್ತು ಆನಂದ್ ಕುರ್ಮಿ ಮೌನವಾಗಿದ್ದರು ಮತ್ತು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು ಎಂದು ಹೇಳಿದ್ದಾರೆ. ಆದಾಗ್ಯೂ, ನಮ್ಮ ಬಳಿ ಎಲ್ಲಾ ಪುರಾವೆಗಳಿವೆ ಮತ್ತು ವಿಧಿವಿಜ್ಞಾನ ಪ್ರಯೋಗಾಲಯದ ವರದಿಗಾಗಿ ಕಾಯುತ್ತಿದ್ದೇವೆ ಎಂದು ಖಾರ್ಕೊಂಗೋರ್ ಹೇಳಿದರು.
ತನಿಖೆಯ ಸಮಯದಲ್ಲಿ ಎಲ್ಲಾ ಆರೋಪಿಗಳು ಅಪರಾಧವನ್ನು ಒಪ್ಪಿಕೊಂಡಿದ್ದಾರೆ. ಆದರೆ, ನ್ಯಾಯಾಲಯದಲ್ಲಿ ಇಬ್ಬರು ಆರೋಪಿಗಳು ನಿರಾಕರಿಸಿದ್ದಾರೆ. ಅಲ್ಲದೆ, ನ್ಯಾಯಾಲಯವು ಪೊಲೀಸರ ವಾದವನ್ನು ಸ್ವೀಕರಿಸಿಲ್ಲ. ಅಪರಾಧವನ್ನು ಒಪ್ಪಿಕೊಳ್ಳದಿರುವುದು ಆರೋಪಿಗಳ ಹಕ್ಕು ಮತ್ತು ಅದಕ್ಕಾಗಿಯೇ ಪೊಲೀಸರು ಭೌತಿಕ ಪುರಾವೆಗಳನ್ನು ಪರಿಚಯಿಸುತ್ತಾರೆ. ಇದರಲ್ಲಿ ಯಾವುದೇ ಸಮಸ್ಯೆ ಇಲ್ಲ. ನಮ್ಮ ಬಳಿ ಸಾಕಷ್ಟು ಪುರಾವೆಗಳಿವೆ ಎಂದು ಖಾರ್ಕೊಂಗೋರ್ ತಿಳಿಸಿದರು.
ಮಧ್ಯಪ್ರದೇಶದ ಇಂದೋರ್ ಮೂಲದ ರಾಜಾ ರಘುವಂಶಿ ಮತ್ತು ಸೋನಂ ಮೇ 11 ರಂದು ವಿವಾಹವಾದರು. ಅದೇ ತಿಂಗಳು 20 ರಂದು ಅವರು ತಮ್ಮ ಹನಿಮೂನ್‌ಗಾಗಿ ಮೇಘಾಲಯಕ್ಕೆ ತೆರಳಿದರು. ಆರಂಭದಲ್ಲಿ, ಅವರು ಜಮ್ಮು ಮತ್ತು ಕಾಶ್ಮೀರಕ್ಕೆ ಹೋಗಲು ಯೋಜಿಸಿದ್ದರು. ಆದರೆ, ಪಹಲ್ಗಾಮ್ ಭಯೋತ್ಪಾದಕ ದಾಳಿ ನಡೆದಿದ್ದರಿಂದ ಮೇಘಾಲಯಕ್ಕೆ ತಮ್ಮ ಪ್ಲಾನ್ ಬದಲಾಯಿಸಿದರು. ನವದಂಪತಿ ಮೇ 20 ರಂದು ತಮ್ಮ ಹನಿಮೂನ್‌ಗೆ ಮೇಘಾಲಯಕ್ಕೆ ತೆರಳಿದರು. ಮೇ 23 ರಂದು ತಮ್ಮ ವಸತಿಗೃಹದಿಂದ ಸ್ಕೂಟಿಯಲ್ಲಿ ಹೊರಟು ಇದ್ದಕ್ಕಿದ್ದಂತೆ ನಾಪತ್ತೆಯಾದರು. ಸ್ಕೂಟರ್ ಒಂದು ಹಳ್ಳಿಯ ಹೊರವಲಯದಲ್ಲಿ ಪತ್ತೆಯಾಗಿತ್ತು. ಆದಾಗ್ಯೂ, ಅವರು ಕಣ್ಮರೆಯಾದ 11 ದಿನಗಳ ನಂತರ (ಜೂನ್ 2 ರಂದು), ಪೊಲೀಸರು ರಘುವಂಶಿ ಅವರ ಶವವನ್ನು ಸೊಹ್ರಾದಲ್ಲಿನ ಜಲಪಾತದ ಬಳಿಯ ಆಳವಾದ ಕಣಿವೆಯಲ್ಲಿ ಪತ್ತೆ ಮಾಡಿದರು. ಅವರ ದೇಹದ ಮೇಲೆ ಚಾಕುವಿನಿಂದಾದ ಗಾಯಗಳಿದ್ದ ಕಾರಣ, ಪೊಲೀಸರು ಕೊಲೆ ಎಂದು ಶಂಕಿಸಿದರು. ಸೋನಂ ಎಲ್ಲಿದ್ದಾರೆಂದು ಪತ್ತೆಯಾಗದ ಕಾರಣ ಎಲ್ಲರೂ ಭಯಭೀತರಾಗಿದ್ದರು. ಈ ಮಧ್ಯೆ, ವಿಶೇಷ ಪಡೆ ಆಕೆಗಾಗಿ ಕಾಡಿನಲ್ಲಿ ಹುಡುಕಾಟ ನಡೆಸಿತು. ಮತ್ತೊಂದೆಡೆ, ಪೊಲೀಸರು ಪ್ರಕರಣದ ತನಿಖೆಯ ವೇಗವನ್ನು ಹೆಚ್ಚಿಸಿದರು.
ಸೋನಂ ಮತ್ತು ಕುಶ್ವಾಹ ಅವರ ಯೋಜನೆಯಂತೆಯೇ ಎಲ್ಲವೂ ನಡೆಯಿತು. ಆದರೆ, ಕೊಲೆಗೆ ಅವರು ಬಳಸಿದ್ದ ಹರಿತವಾದ ಆಯುಧ ಎಲ್ಲವನ್ನೂ ತಲೆಕೆಳಗು ಮಾಡಿತು. ರಘುವಂಶಿ ಕೊಲೆ ಪ್ರಕರಣದ ತನಿಖೆಯ ಸಮಯದಲ್ಲಿ, ಸೋನಂ ಜೀವಂತವಾಗಿದ್ದಾಳೆ ಎಂಬ ಅನುಮಾನ ಮೂಡಿತು. ಅಲ್ಲದೆ, ಆಕೆಯೇ ಕೊಲೆ ಮಾಡಿರಬಹುದು ಎಂಬ ಅನುಮಾನವನ್ನು ಹುಟ್ಟುಹಾಕಿತು. ಸಾಮಾನ್ಯವಾಗಿ, ಮೇಘಾಲಯದಲ್ಲಿ ಅಂತಹ ಆಯುಧವನ್ನು ಬಳಸಲಾಗುವುದಿಲ್ಲ. ಹೀಗಾಗಿ ಹೊರಗಿನವರು ಭಾಗಿಯಾಗಿರುವ ಬಗ್ಗೆ ಪೊಲೀಸರಿಗೆ ಅನುಮಾನ ಮೂಡಿತು. ಬಳಿಕ ಕರೆ ದಾಖಲೆಗಳನ್ನು ಪರಿಶೀಲಿಸಿದಾಗ ಸೋನಂ, ರಾಜ್ ಕುಶ್ವಾಹ ಜತೆ ನಿಯಮಿತವಾಗಿ ಸಂಪರ್ಕದಲ್ಲಿರುವುದು ತಿಳಿದುಬಂತು. ಸೋನಮ್, ರಾಜಾ ರಘುವಂಶಿ ಅವರ ತಾಯಿಯೊಂದಿಗೆ ಮಾತನಾಡಿದ ಕೊನೆಯ ಮಾತುಗಳು ಸಹ ಪೊಲೀಸರಿಗೆ ಅನುಮಾನ ಉಂಟುಮಾಡಿದವು. ಅಲ್ಲದೆ, ಅವರಿಬ್ಬರೂ ಒಟ್ಟಿಗೆ ಇರುವ ಫೋಟೋಗಳ ಯಾವುದೇ ಸ್ಟೇಟಸ್‌ಗಳನ್ನು ಪೋಸ್ಟ್ ಮಾಡದ ಕಾರಣ ಅನುಮಾನಗಳು ಇನ್ನಷ್ಟು ಬಲಗೊಂಡವು.
ಅಂದಹಾಗೆ, ಸೋನಂ ತನ್ನ ತಂದೆಯ ಕಂಪನಿಯಲ್ಲಿ ಕೆಲಸ ಮಾಡುವ ರಾಜ್ ಕುಶ್ವಾಹನನ್ನು ಪ್ರೀತಿಸುತ್ತಿದ್ದಳು. ಆದರೆ, ಆ ಬಗ್ಗೆ ಹಿರಿಯರಿಗೆ ಹೇಳುವ ಧೈರ್ಯ ಇರಲಿಲ್ಲ. ಆದ್ದರಿಂದ, ಅವಳು ರಾಜಾ ರಘುವಂಶಿಯನ್ನು ಮದುವೆಯಾದಳು. ಬಳಿಕ ತಮ್ಮ ಪ್ರೇಮಕ್ಕೆ ರಘುವಂಶಿ ಅಡ್ಡಿಯಾಗುತ್ತಾನೆಂದು ಭಾವಿಸಿ, ಆತನನ್ನು ಕೊಲ್ಲಲು ಸೋನಂ ಮತ್ತು ಕುಶ್ವಾಹ ಸಂಚು ರೂಪಿಸಿದರು. ಅದನ್ನು ಕಾರ್ಯಗತಗೊಳಿಸಲು, ಸುಪಾರಿ ಹಂತಕರನ್ನು ಏರ್ಪಡಿಸಿದರು. ಸೋನಂ ಮೇಘಾಲಯಕ್ಕೆ ಹನಿಮೂನ್ ಪ್ಲಾನ್ ಮಾಡಿದಳು. ಆದರೆ, ಕುಶ್ವಾಹ ಮೇಘಾಲಯಕ್ಕೆ ಹೋಗಲಿಲ್ಲ. ಬದಲಾಗಿ ಫೋನ್‌ನಲ್ಲಿ ಸೋನಂ ಜೊತೆ ಸಂಪರ್ಕದಲ್ಲಿದ್ದನು. ಯೋಜನೆಯ ಪ್ರಕಾರ, ಸೋನಂ, ರಾಜಾ ರಘುವಂಶಿಯನ್ನು ಚಿರಾಪುಂಜಿಯ ಸಂಚಾರವಿಲ್ಲದ ರಸ್ತೆಗೆ ಕರೆದೊಯ್ದಳು. ಅಲ್ಲಿ, ಸುಪಾರಿ ಹಂತಕರು ಆತನನ್ನು ಕೊಂದರು. ನಂತರ, ಸೋನಂ ಸೇರಿದಂತೆ ಮೂವರು ಆರೋಪಿಗಳು ಅಸ್ಸಾಂನ ಗುವಾಹಟಿಗೆ ಹೋಗಿ, ಅಲ್ಲಿಂದ ಬೇರೆ ಬೇರೆಯಾದರು. ಈ ನಡುವೆ ಸೋನಂ, ಪೊಲೀಸರಿಗೆ ರಘುವಂಶಿಯನ್ನು ತಾನು ಕೊಂದಿಲ್ಲ, ಬದಲಿಗೆ ಯಾರೋ ಅವರನ್ನು ಅಪಹರಿಸಿದ್ದಾರೆ ಎಂದು ಹೇಳಿದಳು. ಆದರೆ, ತನಿಖೆಯಲ್ಲಿ ಆಕೆಯ ಕಳ್ಳಾಟ ಎಲ್ಲವು ಬಯಲಾಯಿತು. ಕೊನೆಗೂ ಸೋನಂ ಕೂಡ ತನ್ನ ತಪ್ಪನ್ನು ಒಪ್ಪಿಕೊಂಡಳು. (ಏಜೆನ್ಸೀಸ್)