

Earthquake : ಭೂಕಂಪ ಆದಾಗ ಇಡೀ ಕಟ್ಟಡ ಅಥವಾ ಮನೆ ಗಢಗಢ ನಡುಗುವುದು ಸಾಮಾನ್ಯ. ಇಂತಹ ಸಂದರ್ಭದಲ್ಲಿ ಮನೆಯ ಒಳಗಿರುವವರು ಜೀವ ಭಯದಿಂದ ಎದ್ನೋಬಿದ್ನೋ ಅಂತ ಹೊರಗಡೆ ಓಡಿ ಬರುತ್ತಾರೆ. ಮನೆಯಲ್ಲಿ ಎಷ್ಟೇ ದುಡ್ಡಿದ್ದರೂ ಅದರ ಬಗ್ಗೆ ಯೋಚಿಸಿದೇ ಪ್ರಾಣ ಉಳಿದರೆ ಸಾಕಪ್ಪ ಎಂದು ಹೊರಗೆ ಬರುತ್ತಾರೆ. ಎಷ್ಟೇ ರುಚಿಯಾದ ಆಹಾರ ತಿನ್ನುತ್ತಿದ್ದರೂ ಭೂಕಂಪವಾದ್ರೆ ಸಾಕು ಅದನ್ನು ಅಲ್ಲಿಯೇ ಬಿಟ್ಟು ದಿಕ್ಕಾಪಾಲಾಗುತ್ತಾರೆ. ಆದರೆ, ಇಲ್ಲೊಬ್ಬ ಬಾಲಕ ನಡೆದುಕೊಂಡ ರೀತಿ ಮಾತ್ರ ವಿಚಿತ್ರವಾಗಿದೆ ಮತ್ತು ನೋಡುಗರಲ್ಲಿ ನಗು ತರಿಸುವಂತಿದೆ.
ಜೂನ್ 23ರಂದು ಚೀನಾದ ಗುವಾಂಗ್ಡಾಂಗ್ ಪ್ರಾಂತ್ಯದ ಕ್ವಿಂಗ್ಯುವಾನ್ನಲ್ಲಿ 4.3 ತೀವ್ರತೆಯ ಭೂಕಂಪ ಸಂಭವಿಸಿತು. ಈ ವೇಳೆ ಹೆಚ್ಚಿನ ಜನರು ಜೀವ ಭಯದಿಂದ ಸಹಜವಾಗಿಯೇ ಸುರಕ್ಷಿತ ಸ್ಥಳಕ್ಕೆ ಓಡಿದರು. ಆದರೆ, ಈ ಪುಟ್ಟ ಬಾಲಕ ಮಾತ್ರ ಜೀವವನ್ನು ಲೆಕ್ಕಿಸದೇ ಮಾಡಿದ ಕೆಲಸ ಇಂಟರ್ನೆಟ್ನಲ್ಲಿ ನಗೆಗಡಲಲ್ಲಿ ತೇಲುವಂತೆ ಮಾಡಿದೆ.
ಭೂಕಂಪದ ಸಮಯದಲ್ಲಿ ಕುಟುಂಬವೊಂದು ಮನೆಯಲ್ಲಿ ಊಟ ಮಾಡುತ್ತಿರುವ ದೃಶ್ಯ ವೈರಲ್ ಆಗಿರುವ ವಿಡಿಯೋದಲ್ಲಿದೆ. ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿಯ ಪ್ರಕಾರ, ಲಿ ಎಂಬ ಉಪನಾಮದಿಂದ ಗುರುತಿಸಲ್ಪಟ್ಟ ವ್ಯಕ್ತಿ ತನ್ನ ಕಿರಿಯ ಮಗನನ್ನು ಹಿಡಿದುಕೊಂಡು ಬಾಗಿಲಿನ ಕಡೆಗೆ ಓಡುತ್ತಾನೆ. ತಂದೆಯನ್ನು ಹಿಂಬಾಲಿಸುವ ಹಿರಿಯ ಮಗ ಮನೆಕೆಲಸದವರನ್ನು ಓಡಿಹೋಗುವಂತೆ ಒತ್ತಾಯಿಸುತ್ತಾನೆ. ಈ ವೇಳೆ ಇದ್ದಕ್ಕಿದ್ದಂತೆ ಹಿರಿಯ ಮಗ ವಾಪಸ್ ಬಂದು ಟೇಬಲ್ ಮೇಲಿದ್ದ ಆಹಾರದಲ್ಲಿ ಒಂದೆರೆಡು ತುತ್ತನ್ನು ಬಾಯಿಗೆ ಹಾಕಿ, ಮಾಂಸದ ತಟ್ಟೆಯನ್ನು ತೆಗೆದುಕೊಂಡು ಹೋಗಲು ಪ್ರಯತ್ನಿಸುತ್ತಾನೆ. ಮತ್ತೆ ವಾಪಸ್ ಬಂದು ಇನ್ನೊಂದು ತುತ್ತು ಬಾಯಿಗೆ ಹಾಕಿ, ಮಾಂಸವನ್ನು ಅಲ್ಲಿಯೇ ಬಿಟ್ಟು ಅಲ್ಲಿಂದ ಬರಿಗೈಯಲ್ಲಿ ಓಡಿ ಹೋಗುತ್ತಾನೆ.
ಭೂಕಂಪ ಶಾಂತವಾಗಿ, ಮನೆಗೆ ಮರಳುವುದು ಸುರಕ್ಷಿತ ಎಂದು ಭಾವಿಸುವವರೆಗೂ ಕುಟುಂಬವು ಒಂದು ಗಂಟೆ ಮನೆಯ ಕೆಳಗಡೆಯೇ ಸಮಯ ಕಳೆಯಿತು. ಒಂದು ಹಂತದಲ್ಲಿ, ಹುಡುಗ ತನ್ನ ಡ್ರೋನ್ ಹಿಡಿಯಲು ಮತ್ತೆ ಅಪಾರ್ಟ್ಮೆಂಟ್ಗೆ ಪ್ರವೇಶಿಸಬಹುದೇ ಎಂದು ಕೇಳಿದನು. ಅಲ್ಲದೆ, ತನ್ನ ತಿನಿಸಿನ ಮೇಲೆಯೇ ಆತನಿಗೆ ಗಮನವಿತ್ತು. ಈ ಘಟನೆಯ ಬಗ್ಗೆ ಲಿ, ಜಿಮು ನ್ಯೂಸ್ ಜೊತೆ ಮಾತನಾಡಿದ್ದು, ಆ ಸಮಯದಲ್ಲಿ ತನ್ನ ಮಗನನ್ನು ಕೂಗಿ ಕರೆಯುವುದಷ್ಟೇ ನಮಗೆ ಸಾಧ್ಯವಾಗಿತ್ತು ಎಂದರು.
ಆ ಸಮಯದಲ್ಲಿ ನಾನು ತುಂಬಾ ನರ್ವಸ್ ಆಗಿದ್ದೆ ಮತ್ತು ಅವನಿಗೆ ಓಡಿ, ಓಡಿ ಎಂದು ಹೇಳುತ್ತಲೇ ಇದ್ದೆ. ಆತನಿಗೆ ಸಹಜ ಹಾಸ್ಯ ಪ್ರವೃತ್ತಿ ಇದೆ. ವಿಡಿಯೋ ನೋಡಿದ ನಂತರವೇ ಅದು ಎಷ್ಟು ತಮಾಷೆಯಾಗಿದೆ ಎಂದು ನನಗೆ ಅರಿವಾಯಿತು. ಟೇಬಲ್ ಮೇಲೆ ಇದ್ದಿದ್ದು ನನ್ನ ಮಗ ಬಿಟ್ಟುಕೊಡಲು ಸಾಧ್ಯವಾಗದ ಭಕ್ಷ್ಯಗಳೇನಲ್ಲ ಆದರೆ, ಆತ ತಿನ್ನಲು ತುಂಬಾ ಇಷ್ಟಪಡುತ್ತಾನೆ ಎಂದು ಲಿ, ಜಿಮು ನ್ಯೂಸ್ಗೆ ತಿಳಿಸಿದರು.
ಜೀವನ ಹಾಗೂ ಸುರಕ್ಷತೆ ಮೊದಲು. ಭೌತಿಕ ಆಸ್ತಿಗಳ ಬಗ್ಗೆ ಯೋಚಿಸಬೇಡಿ. ಭೂಕಂಪ ಸಂಭವಿಸಿದಾಗ, ತಪ್ಪಿಸಿಕೊಳ್ಳುವುದು ಮತ್ತು ನಿಮ್ಮ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ನಿಮ್ಮ ಆದ್ಯತೆಯಾಗಿರಬೇಕು ಎಂದು ಲಿ ತನ್ನ ಮಗನಿಗೆ ಕೊನೆಯಲ್ಲಿ ಪಾಠ ಮಾಡಿದ್ದಾರೆಂದು ವರದಿಯಾಗಿದೆ. (ಏಜೆನ್ಸೀಸ್)