ರೋಹಿತ್ ಜತೆ ಶೇರ್​ ಮಾಡಿಕೊಂಡಿದ್ದ ರೂಮ್​ಗೆ ಗರ್ಲ್​​ಫ್ರೆಂಡ್​​ ಕಳ್ಳಸಾಗಾಣೆ: ಸ್ಫೋಟಕ ಸಂಗತಿ ಬಿಚ್ಚಿಟ್ಟ ಧವನ್​! Shikhar Dhawan

Shikhar Dhawan
Published on

Shikhar Dhawan : ಟೀಮ್​ ಇಂಡಿಯಾದ ಮಾಜಿ ಆಟಗಾರ ಶಿಖರ್ ಧವನ್ ಅವರದ್ದು ಪ್ರಾಮಾಣಿಕ ಮತ್ತು ನಿರ್ಭೀತ ವ್ಯಕ್ತಿತ್ವ. ತಮ್ಮ ಜೀವನವನ್ನು ಪೂರ್ಣವಾಗಿ ಬದುಕುವಂತಹ ವ್ಯಕ್ತಿ. ಮೈದಾನದಲ್ಲಿ ಅಥವಾ ಹೊರಗೆ, ಧವನ್ ಯಾವಾಗಲೂ ಎಲ್ಲರನ್ನೂ ಆಕರ್ಷಿಸುವ ವ್ಯಕ್ತಿ. ಏನೇ ಇದ್ದರೂ ಅದನ್ನು ಓಪನ್​ ಆಗಿ ಹೇಳುವ ಸ್ವಭಾವ ಅವರದ್ದು. ಕ್ರೀಡೆ ಮಾತ್ರವಲ್ಲದೇ ಡಾನ್ಸ್​ ಮೂಲಕ ಮನರಂಜನೆ ನೀಡುವುದರಲ್ಲೂ ಸದಾ ಮುಂದು.

ಭಾರತ ತಂಡದ ಮಾಜಿ ಆರಂಭಿಕ ಆಟಗಾರ ಧವನ್​, ಇದೀಗ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಸಂಚಲನಾತ್ಮಕ ಸಂಗತಿಯೊಂದನ್ನು ಬಹಿರಂಗಪಡಿಸಿದ್ದಾರೆ. ಇದು 2006ರಲ್ಲಿ ನಡೆದ ಘಟನೆ. ಆಸ್ಟ್ರೇಲಿಯಾಕ್ಕೆ ಭಾರತ ಎ ತಂಡ ಪ್ರವಾಸ ಮಾಡಿದಾಗ ನಡೆದ ಘಟನೆಯನ್ನು ಧವನ್​ ನೆನಪಿಸಿಕೊಂಡಿದ್ದಾರೆ. ಅಂದು ಧವನ್ ಅವರು ಗರ್ಲ್​ಫ್ರೆಂಡ್​ ಹೇಗೆ ಮಾಡಿಕೊಂಡರು? ಮತ್ತು ಪ್ರವಾಸದ ಸಮಯದಲ್ಲಿ ರೋಹಿತ್ ಶರ್ಮ ಜೊತೆ ಹಂಚಿಕೊಂಡ ಹೋಟೆಲ್ ರೂಮ್​ಗೆ ಗರ್ಲ್​ಫ್ರೆಂಡ್​ ಅನ್ನು ಕಳ್ಳಸಾಗಣೆ ಮಾಡುತ್ತಿದ್ದೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಈ ವಿಚಾರ ಗೊತ್ತಾದಾಗ ರೋಹಿತ್ ಪ್ರತಿಕ್ರಿಯೆ ಹೇಗಿತ್ತು ಅನ್ನೋದನ್ನು ಸಹ ತಿಳಿಸಿದ್ದಾರೆ.

ಆಕೆ ತುಂಬಾ ಸುಂದರವಾಗಿದ್ದಳು ಮತ್ತು ಇದ್ದಕ್ಕಿದ್ದಂತೆ ನಾನು ಮತ್ತೆ ಪ್ರೀತಿಯಲ್ಲಿ ಬಿದ್ದೆ! ಪ್ರೀತಿ ಮಾಡುತ್ತಾ ಆಕೆ ನನಗೆ ಸೂಕ್ತ ಎನಿಸಿದಳು. ನಾನು ಆಕೆಯನ್ನು ಮದುವೆಯಾಗಲಿದ್ದೇನೆ ಎಂದು ನಾನು ನನ್ನೊಳಗೆ ಭಾವಿಸಿದೆ. ನಮ್ಮ ಪ್ರೀತಿ ಚೆನ್ನಾಗಿಯೇ ಸಾಗಿತು ಎಂದು ಧವನ್ ತಮ್ಮ ಆತ್ಮಚರಿತ್ರೆಯಲ್ಲಿ ಬರೆದಿರುವ ಸಂಗತಿಯನ್ನು ಸ್ಪೋರ್ಟ್‌ಸ್ಟಾರ್ ವರದಿ ಮಾಡಿದೆ.

ನಾನು ಅಭ್ಯಾಸ ಪಂದ್ಯವನ್ನು ಅರ್ಧಶತಕದೊಂದಿಗೆ ಪ್ರಾರಂಭಿಸಿದೆ ಮತ್ತು ನನ್ನ ಪ್ರವಾಸವು ಉತ್ತಮವಾಗಿ ಸಾಗುತ್ತಿತ್ತು. ಪ್ರತಿ ಪಂದ್ಯದ ನಂತರ ನಾನು ಆಕೆಯನ್ನ ಭೇಟಿ ಮಾಡಲು ಹೋಗುತ್ತಿದ್ದೆ. ಇಬ್ಬರ ನಡುವೆ ಆತ್ಮೀಯತೆ ಗಾಢವಾಯಿತು. ಶೀಘ್ರದಲ್ಲೇ ನಾನು ರೋಹಿತ್ ಶರ್ಮ ಜತೆ ಹಂಚಿಕೊಳ್ಳುತ್ತಿದ್ದ ನನ್ನ ರೂಮಿಗೆ ಆಕೆಯನ್ನು ಯಾರಿಗೂ ತಿಳಿಯದಂತೆ ಕದ್ದು ಸಾಗಿಸಲು ಪ್ರಾರಂಭಿಸಿದೆ. ಆದರೆ, ಈ ವಿಚಾರ ರೋಹಿತ್​ಗೆ ಗೊತ್ತಾದಾಗ ಆಗೊಮ್ಮೆ ಈಗೊಮ್ಮೆ ಹಿಂದಿಯಲ್ಲಿ ದೂರು ನೀಡುತ್ತಿದ್ದರು. ನೀವಿಬ್ಬರು ನನ್ನನ್ನು ಮಲಗಲು ಬಿಡುತ್ತೀರಾ? ಎನ್ನುತ್ತಿದ್ದರು ಎಂದು ಧವನ್​ ಹೇಳಿದ್ದಾರೆ.

ಒಂದು ದಿನ ಸಂಜೆ, ನಾನು ಆಕೆಯ ಜೊತೆ ಊಟಕ್ಕೆ ಹೋದಾಗ, ಅವಳು ನನ್ನೊಂದಿರುವ ಸುದ್ದಿ ಇಡೀ ತಂಡಕ್ಕೆ ಕಾಡ್ಗಿಚ್ಚಿನಂತೆ ಹರಡಿತು. ನಮ್ಮೊಂದಿಗೆ ಪ್ರವಾಸದಲ್ಲಿದ್ದ ಹಿರಿಯ ರಾಷ್ಟ್ರೀಯ ಆಯ್ಕೆದಾರರು, ನಾವು ಕೈ ಕೈ ಹಿಡಿದು ಲಾಬಿಯಲ್ಲಿ ನಡೆದುಕೊಂಡು ಹೋಗುವುದನ್ನು ಗಮನಿಸಿದರು. ಆದರೆ, ನಾವು ಯಾವುದೇ ಅಪರಾಧ ಮಾಡುತ್ತಿರಲಿಲ್ಲವಾದ್ದರಿಂದ, ಅವಳ ಕೈ ಬಿಡಬೇಕೆಂದು ನನಗೆ ಅನಿಸಲೇ ಇಲ್ಲ. ಅಂದು ಆ ಆಸ್ಟ್ರೇಲಿಯಾ ಪ್ರವಾಸದಲ್ಲಿ ನಾನು ಸ್ಥಿರವಾಗಿ ಪ್ರದರ್ಶನ ನೀಡಿದ್ದರೆ, ನಾನು ಹಿರಿಯರ ಭಾರತೀಯ ತಂಡಕ್ಕೆ ಸೇರುವ ಸಾಧ್ಯತೆ ಹೆಚ್ಚಿತ್ತು, ಆದರೆ ನನ್ನ ಪ್ರದರ್ಶನ ಕುಸಿಯುತ್ತಲೇ ಇತ್ತು ಎಂದು ಧವನ್​ ತಿಳಿಸಿದ್ದಾರೆ.

ಅಂದಹಾಗೆ, ಭಾರತ ಪರ 34 ಟೆಸ್ಟ್, 167 ಏಕದಿನ ಮತ್ತು 68 ಟಿ20 ಪಂದ್ಯಗಳನ್ನು ಆಡಿರುವ ಧವನ್, 50 ಓವರ್‌ಗಳ ಮಾದರಿಯಲ್ಲಿ 44.11 ಸರಾಸರಿಯಲ್ಲಿ 6793 ರನ್ ಗಳಿಸಿದ್ದಾರೆ. 17 ಶತಕ ಮತ್ತು 39 ಅರ್ಧಶತಕಗಳನ್ನು ಗಳಿಸಿದ್ದಾರೆ. ಟೆಸ್ಟ್ ಸ್ವರೂಪದಲ್ಲಿ, ಧವನ್ 2315 ರನ್ ಗಳಿಸಿ 40.61 ಸರಾಸರಿಯಲ್ಲಿ 7 ಶತಕ ಮತ್ತು 5 ಅರ್ಧಶತಕಗಳನ್ನು ಗಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net