ಕೋಟ್ಯಂತರ ಬೆಲೆ ಬಾಳುವ 'ಕ್ಯಾಲಿಫೋರ್ನಿಯಂ' ಮಾರಾಟ! ಇಬ್ಬರ ಬಂಧನ

cropped-Arrested-611631070
Published on

ಕೊಲ್ಕತ: ಕೊಲ್ಕತದ ಎನ್​​ಎಸ್​ಸಿಬಿಐ ವಿಮಾನ ನಿಲ್ದಾಣದ ಬಳಿ ಕ್ಯಾಲಿಫೋರ್ನಿಯಂ ಎಂಬ ಸಿಂಥೆಟಿಕ್ ರೇಡಿಯೋ ಆ್ಯಕ್ಟೀವ್​ ಸಾಮಗ್ರಿ ಎಂದು ಶಂಕಿಸಲಾದ ಕಲ್ಲುಗಳನ್ನು ಮಾರಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಪಶ್ಚಿಮ ಬಂಗಾಳದ ಹೂಗ್ಲಿ ಜಿಲ್ಲೆಯ ನಿವಾಸಿಗಳಾದ ಸೈಲನ್​ ಕರ್ಮಕರ್(41) ಮತ್ತು ಅಸೀತ್​ ಘೋಷ್​(49) ಎಂಬುವರು ಬಂಧಿತರು.

ಬಂಧಿತ ಆರೋಪಿಗಳಿಂದ ಸುಮಾರು 250 ಗ್ರಾಂನಷ್ಟು ತೂಕದ ಹೊಳೆಯುತ್ತಿದ್ದ ನಾಲ್ಕು ಬೂದಿ ಬಣ್ಣದ ಕಲ್ಲುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರಂಭಿಕ ತನಿಖೆಯಿಂದ ಇದು ನ್ಯೂಕ್ಲಿಯರ್​ ರಿಯಾಕ್ಟರ್​ಗಳಲ್ಲಿ ಬಳಸಲಾಗುವ ದುಬಾರಿ ಕ್ಯಾಲಿಫೋರ್ನಿಯಂ ಎಂದು ಭಾವಿಸಲಾಗಿದೆ. ಇದನ್ನು ಅವರು ಕೆಲವೇ ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದರು ಎನ್ನಲಾಗಿದೆ.

ಬಂಧಿತರು ಅದನ್ನು ಕೇರಳದಿಂದ ತಂದು ಇಲ್ಲಿ ಮಾರಾಟ ಮಾಡುತ್ತಿರುವುದಾಗಿ ಹೇಳಿದ್ದಾರೆ. ವಶಪಡಿಸಿಕೊಂಡಿರುವ ಕಲ್ಲುಗಳ ಸ್ಯಾಂಪಲ್​ಅನ್ನು ಪರೀಕ್ಷೆಗಾಗಿ ಸರ್ಕಾರಿ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು. ಅದು ಕ್ಯಾಲಿಫೋರ್ನಿಯಂ ಎಂದೇ ಸಾಬೀತಾದರೆ ಅದು ಪ್ರತಿ ಗ್ರಾಂಗೆ ಕೋಟ್ಯಂತರ ರೂಪಾಯಿ ಬೆಲೆ ಬಾಳುವಂಥದ್ದು. ಇದು ಬಂಧಿತರಿಗೆ ಹೇಗೆ ಸಿಕ್ಕಿತೆಂದು ತನಿಖೆ ನಡೆಯಬೇಕಿದೆ ಎಂದು ಸಿಐಡಿ ಅಧಿಕಾರಿಗಳು ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net