ಹಾರ್ನ್​ ಮಾಡಿದರೂ ದಾರಿ ಬಿಡಲಿಲ್ಲ ಎಂದು ಗುಂಡು ಹಾರಿಸಿದ!

shoot
Published on

ನವದೆಹಲಿ: ರಸ್ತೆಯಲ್ಲಿ ತನ್ನ ಕಾರಿಗೆ ದಾರಿ ಬಿಡಲಿಲ್ಲ ಎಂಬ ಕಾರಣಕ್ಕೆ ಚಾಲಕನೊಬ್ಬ ಮುಂದಿದ್ದ ಕಾರಿನ ಮೇಲೆ ಗುಂಡು ಹಾರಿಸಿರುವ ಪ್ರಸಂಗ ವರದಿಯಾಗಿದೆ. ದೆಹಲಿಯ ಕಂಟೋನ್​ಮೆಂಟ್​ ಪ್ರದೇಶದಲ್ಲಿ ನಡೆದ ಈ ಘಟನೆಯಲ್ಲಿ ಯುವಕನೊಬ್ಬನಿಗೆ ತಲೆಗೆ ಪೆಟ್ಟುಬಿದ್ದಿದೆ.

ದೆಹಲಿ-ಗುರುಗ್ರಾಂ ಗಡಿಯ ಟೋಲ್​ನಲ್ಲಿ ನಿಂತಿದ್ದ ಕಾರಿನಲ್ಲಿ ನಾಲ್ಕು ಜನ ಯುವಕರಿದ್ದರು. ಪಕ್ಕಕ್ಕೆ ಬಂದ ನೀಲಿ ಕಾರಿನ ಚಾಲಕ, ಹಾರ್ನ್​ ಮಾಡಿದರೂ ಜಾಗ ಕೊಡಲಿಲ್ಲ ಎನ್ನುತ್ತಾ, ದಿಢೀರನೇ ಗುಂಡು ಚಲಾಯಿಸಿದ. ಒಬ್ಬ ಯುವಕನಿಗೆ ತಲೆಗೆ ಗಾಯವಾಗಿದ್ದು ಕೂಡಲೇ ನಾಯ್ಡಾದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆತ ಈಗ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಹೆಚ್ಚುವರಿ ಡಿಸಿಪಿ ಅಮಿತ್​ ಗೋಯಲ್ ತಿಳಿಸಿದ್ದಾರೆ.

ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿದ್ದು, ಯುವಕರು ಗುಂಡು ಹಾರಿಸಿದ ಚಾಲಕನನ್ನು ಗುರುತಿಸಿದ ನಂತರ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿಯು ತಾನು ಆ ಸಮಯದಲ್ಲಿ ಮದ್ಯ ಸೇವಿಸಿದ್ದು, ಘಟನೆಯ ಬಗ್ಗೆ ಸ್ಪಷ್ಟವಾಗಿ ಏನೂ ನೆನಪಿಲ್ಲ ಎಂದು ಹೇಳಿರುವುದಾಗಿ ಡಿಸಿಪಿ ಗೋಯಲ್ ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net