ಅಫ್ಘಾನಿಸ್ತಾನದಿಂದ ಭಾರತ ಸರ್ಕಾರ ತೆರವುಗೊಳಿಸಿದ ಜನರೆಷ್ಟು? ಸಂಪೂರ್ಣ ಮಾಹಿತಿ ನೀಡಿದ ಸಚಿವ ಜೈಶಂಕರ್

jaishankar
Published on

ನವದೆಹಲಿ: ಅಫ್ಘಾನಿಸ್ತಾನದಿಂದ ಈವರೆಗೆ 565 ಜನರನ್ನು ಭಾರತ ಸರ್ಕಾರ ತೆರವುಗೊಳಿಸಿದೆ ಎಂದು ವಿದೇಶಾಂಗ ಸಚಿವ ಎಸ್​.ಜೈಶಂಕರ್​ ತಿಳಿಸಿದ್ದಾರೆ. ಅಫ್ಘಾನಿಸ್ತಾನದ ಸನ್ನಿವೇಶದ ಬಗ್ಗೆ ಇಂದು ಸರ್ವಪಕ್ಷಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜೈಶಂಕರ್​, ಎಲ್ಲಾ ಭಾರತೀಯರನ್ನೂ ಅಲ್ಲಿಂದ ತೆರವುಗೊಳಿಸುವ ಸರ್ವಪ್ರಯತ್ನವನ್ನೂ ಸರ್ಕಾರ ನಡೆಸುತ್ತಿದೆ ಎಂದಿದ್ದಾರೆ.

ಒಟ್ಟು 565 ಜನರನ್ನು ಕಾಬುಲ್​​ನಿಂದ ತೆರವುಗೊಳಿಸಿದ್ದು, ಇವರಲ್ಲಿ 175 ಜನ ಎಂಬೆಸಿಯ ಸಿಬ್ಬಂದಿ, 263 ಇತರ ಭಾರತೀಯ ನಾಗರೀಕರು, ಹಿಂದೂಗಳು ಮತ್ತು ಸಿಖ್ಖರು ಸೇರಿದಂತೆ 112 ಅಫ್ಘನ್​ ನಾಗರೀಕರು ಮತ್ತು 15 ವಿದೇಶೀಯ ನಾಗರಿಕರಿದ್ದಾರೆ ಎಂದು ತಿಳಿಸಿದ್ದಾರೆ.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಜೈಶಂಕರ್​, "ಆಪರೇಷನ್​ 'ದೇವಿ ಶಕ್ತಿ' ಹೆಸರಲ್ಲಿ 6 ತೆರವು ವಿಮಾನಗಳು ಕಾರ್ಯನಿರ್ವಹಿಸಿವೆ. ಬಹುತೇಕ ಭಾರತೀಯರನ್ನು ನಾವು ಅಫ್ಘಾನಿಸ್ತಾನದಿಂದ ಕರೆತಂದಿದ್ದೇವೆ. ನಿನ್ನೆ ಭಾರತೀಯ ವಿಮಾನ ಹೊರಡುವ ವೇಳೆಗೆ ಎಲ್ಲರೂ ಬರುವುದಕ್ಕೆ ಸಾಧ್ಯವಾಗಿಲ್ಲ. ಆದರೆ ಪ್ರತಿಯೊಬ್ಬರನ್ನೂ ಕರೆತರಲು ಪ್ರಯತ್ನ ನಡೆಯುತ್ತಿದೆ" ಎಂದು ಹೇಳಿದರು. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net