

ತಮಿಳುನಾಡು: ವಿಕ್ರಮ್ ನಾಯಕನಾಗಿ ನಟಿಸಿರುವ ಗೌತಮ್ ವಾಸುದೇವ್ ಮೆನನ್ ನಿರ್ದೇಶನದ ಬಹುನಿರೀಕ್ಷಿತ 'ಧ್ರುವ ನಚ್ಚತಿರಂ: ಚಾಪ್ಟರ್ 1 - ಯುದ್ಧ ಕಾಂಡಂ' ಚಿತ್ರವು ಕಡೆಗೂ ನವೆಂಬರ್ 24, 2023 ರಂದು ಬಿಡುಗಡೆಗೊಳ್ಳಲು ಸಜ್ಜಾಗಿದೆ. ರಿತು ವರ್ಮಾ ನಾಯಕಿಯಾಗಿ ಕಾಣಿಸಿಕೊಂಡಿರುವ ಈ ಚಿತ್ರದ ಬಗ್ಗೆ ಕುತೂಹಲಕಾರಿ ಸಂಗತಿಯೊಂದು ಹೊರಬಿದ್ದಿದೆ.
ಸಿನಿಮಾ ಕುರಿತಾಗಿ ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿದ ನಿರ್ದೇಶಕ ಹಾಗೂ ನಿರ್ಮಾಪಕರಾದ ಗೌತಮ್ ವಾಸುದೇವ್ ಮೆನನ್ (GVM) 'ಧ್ರುವ ನಚ್ಚತಿರಂ' ಬಗ್ಗೆ ಆಸಕ್ತಿದಾಯಕ ಸಂಗತಿಯೊಂದನ್ನು ಬಹಿರಂಗಪಡಿಸಿದರು. ಈ ಸಿನಿಮಾಗೆ ನಾಯಕನಾಗಿ ವಿಕ್ರಮ್ ಅವರ ಆಯ್ಕೆಗೂ ಮುನ್ನ ಕಾಲಿವುಡ್ನ ಇಬ್ಬರು ಸೂಪರ್‌ಸ್ಟಾರ್ ಬಳಿ ಚಿತ್ರದ ಕಥೆಯನ್ನು ವಿವರಿಸಲಾಗಿತ್ತು ಎಂದು ಹೇಳಿದರು.
ಮೊದಲು ಸಿನಿಮಾದ ಸ್ಕ್ರಿಪ್ಟ್ನ ತಮಿಳು ಚಿತ್ರರಂಗದ ಸ್ಟಾರ್ ನಟ ಸೂರ್ಯ ಅವರಿಗೆ ಹೇಳಲಾಗಿತ್ತು. ಆದ್ರೆ, ಸೂರ್ಯ ಇದಕ್ಕೆ ಅಷ್ಟು ಆಸಕ್ತಿ ತೋರಲಿಲ್ಲ ಎನ್ನಲಾಗಿದೆ. ನಂತರದಲ್ಲಿ ಸೂಪರ್‌ಸ್ಟಾರ್ ರಜನಿಕಾಂತ್ ಅವರಿಗೆ ವಿವರಿಸಿದ್ದಾರೆ. ಸ್ಕ್ರಿಪ್ಟ್ ಇಷ್ಟಪಟ್ಟ ರಜನಿ, ಅದನ್ನು ಮುಂದುವರಿಸಲಿಲ್ಲ. ಇದಾದ ಬಳಿಕ ಅಂತಿಮವಾಗಿ ವಿಕ್ರಮ್ ಅವರನ್ನು ಆ ಪಾತ್ರಕ್ಕೆ ಆಯ್ಕೆ ಮಾಡಲಾಯಿತು ಎಂದು ಜಿವಿಎಂ ಹೇಳಿಕೊಂಡಿದ್ದಾರೆ.
ಸಿನಿಮಾಗೆ ಐಶ್ವರ್ಯ ರಾಜೇಶ್, ಸಿಮ್ರಾನ್, ರಾಧಿಕಾ, ಅರ್ಜುನ್ ದಾಸ್, ದಿವ್ಯದರ್ಶಿನಿ ಮುಂತಾದವರ ತಾರಾಗಣವಿದೆ. ಚಿತ್ರಕ್ಕೆ ಹ್ಯಾರಿಸ್ ಜಯರಾಜ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಒಂಡ್ರಾಗ, ಕೊಂಡಾಡುವಂ ಎಂಟರ್‌ಟೈನ್‌ಮೆಂಟ್ ಮತ್ತು ಎಸ್ಕೇಪ್ ಆರ್ಟಿಸ್ಟ್ಸ್ ಮೋಷನ್ ಪಿಕ್ಚರ್ಸ್ ಜಂಟಿಯಾಗಿ ಸಿನಿಮಾವನ್ನು ನಿರ್ಮಿಸಿದೆ,(ಏಜೆನ್ಸೀಸ್).