

ಹಾಸನ: ನಗರದಲ್ಲಿ ಬೈಕ್ ವ್ಹೀಲಿಂಗ್ ಮಾಡುವ ಪುಂಡರ ಹಾವಳಿ ಹೆಚ್ಚಾಗಿದ್ದು, ಶಾಲಾ-ಕಾಲೇಜಿಗೆ ಬರುವ ವಿದ್ಯಾರ್ಥಿನಿಯರೂ ಕೂಡ ಇವರಿಂದ ನಿತ್ಯವು ಕಿರುಕುಳ ಅನುಭವಿಸುತ್ತಿದ್ದಾರೆ. ಇದೀಗ ಅಚಾತುರ್ಯವೊಂದು ನಡೆದಿದ್ದು, ವ್ಹೀಲಿಂಗ್ ಮಾಡುವ ವೇಳೆ ಪುಂಡರು, ಡಿಕ್ಕಿ ಹೊಡೆದಿದ್ದು, ಯುವತಿಯರಿಬ್ಬರು ಗಾಯಗೊಂಡಿದ್ದಾರೆ.
ಭೂಮಿಕಾ ಮತ್ತು ಸಿಂಚನ ಎಂಬ ಇಬ್ಬರು ಯುವತಿಯರಿಗೆ ಗಂಭೀರ ಗಾಯವಾಗಿದೆ. ಹಾಸನ ನಗರದ ಸಾಲಗಾಮೆ ರಸ್ತೆಯ, ಕನ್ನಡ ಸಾಹಿತ್ಯ ಪರಿಷತ್ ಭವನದ ಎದುರು ನಿನ್ನೆ ರಾತ್ರಿ ಘಟನೆ ನಡೆದಿದೆ. ಆಗಷ್ಟೇ ಊಟ ಮುಗಿಸಿ ಭೂಮಿಕಾ ಮತ್ತು ಸಿಂಚನ ಬೈಕ್ ಏರಿದ್ದರು. ಜನನಿಬಿಡ ಪ್ರದೇಶದಲ್ಲೇ ಪುಂಡರು ವ್ಹೀಲಿಂಗ್ ಮಾಡಿಕೊಂಡು ಬಂದು ಭೂಮಿಕಾ ಹಾಗೂ ಸಿಂಚನಗೆ ಡಿಕ್ಕಿ ಹೊಡೆದಿದ್ದಾರೆ.
ಭೂಮಿಕಾ ತಲೆಗೆ ಬಲವಾದ ಪೆಟ್ಟು ಬಿದ್ದ ಹಿನ್ನಲೆಯಲ್ಲಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಸಿಂಚನಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ವ್ಹೀಲಿಂಗ್ ಮಾಡಿ ಸಿಕ್ಕಿಬಿದ್ದ ಶಾಕೀರ್ ಹಾಗೂ ಅಪ್ರಾಪ್ತನಿಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬಟ್ಟೆ ಬಚ್ಚಿ ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ವ್ಲೀಲಿಂಗ್ ಮಾಡಿ ಅಪಘಾತ ಮಾಡಿದ ಶಾಕೀರ್ ಹಾಗೂ ಅಪ್ರಾಪ್ತ ಬಾಲಕನನ್ನು ಹಾಸನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ. ಹಾಸನ ನಗರದಲ್ಲಿ ವ್ಹೀಲಿಂಗ್ ಪುಂಡರ ಹಾವಳಿ ಮಿತಿಮೀರಿದ್ದು, ಪುಂಡರ ಆಟೋಟಪಕ್ಕೆ ಕಡಿವಾಣ ಹಾಕುವಂತೆ ಪೊಲೀಸರಿಗೆ ಸಾರ್ವಜನಿಕರು ಒತ್ತಾಯ ಮಾಡಿದ್ದಾರೆ. (ದಿಗ್ವಿಜಯ ನ್ಯೂಸ್)