ಮೈಶುಗರ್​ ಸಕ್ಕರೆ ಕಾರ್ಖಾನೆ ಬಾಕಿ ಉಳಿಸಿಕೊಂಡಿರುವ ವಿದ್ಯುತ್​ ಬಿಲ್​ ಮೊತ್ತ ಕೇಳಿದ್ರೆ ಹುಬ್ಬೇರೋದು ಖಚಿತ!

Mandya mysugar factory
Published on

ಮಂಡ್ಯ: ಸಕ್ಕರೆ ನಾಡು ಮಂಡ್ಯದ ಮೈಶುಗರ್​ ಸಕ್ಕರೆ ಕಾರ್ಖಾನೆ ಕೋಟಿ ಕೋಟಿ ರೂಪಾಯಿ ಮೊತ್ತದ ವಿದ್ಯುತ್​ ಬಿಲ್​ ಬಾಕಿ ಉಳಿಸಿಕೊಂಡಿರುವುದು ಬೆಳಕಿಗೆ ಬಂದಿದೆ. ಒಟ್ಟು ಬಾಕಿ ಬಿಲ್ ಮೊತ್ತ ಕೇಳಿದ್ರೆ ಒಂದು ಕ್ಷಣ ಶಾಕ್ ಆಗೋದು ಖಚಿತ!

ಮೈಶುಗರ್​ ಕಾರ್ಖಾನೆ ಎಷ್ಟು ಬಾಕಿ ಉಳಿಸಿಕೊಂಡಿದೆ ಅಂದರೆ, ಬರೋಬ್ಬರಿ 40 ಕೋಟಿ ರೂ. ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದೆ. 2000 ಇಸವಿಯಿಂದಲು ಈ ಕಾರ್ಖಾನೆಯ ಆಡಳಿತ ಮಂಡಳಿ ಕರೆಂಟ್ ಬಿಲ್​ ಅನ್ನೇ ಕಟ್ಟಿಲ್ಲ.

ಸರ್ಕಾರಿ ಶುಗರ್ ಫ್ಯಾಕ್ಟರಿ

ಅಂದಹಾಗೆ ಮೈಶುಗರ್​ ಸಕ್ಕರೆ ಕಾರ್ಖಾನೆ, ರಾಜ್ಯದ ಏಕೈಕ ಸರ್ಕಾರಿ ಶುಗರ್ ಫ್ಯಾಕ್ಟರಿ. ಇದು ರೋಗಗ್ರಸ್ಥ ಕಾರ್ಖಾನೆ ಎಂದೇ ಬಿಂಬಿಸಿಕೊಂಡಿದೆ. ಇತ್ತೀಚೆಗಷ್ಟೇ ರಾಜ್ಯ ಸರ್ಕಾರ ಕಾರ್ಖಾನೆ ಆರಂಭಕ್ಕೆ 50 ಕೋಟಿ ರೂ. ಬಿಡುಗಡೆ ಮಾಡಿತ್ತು. ಪ್ರಸಕ್ತ ಸಾಲಿನಲ್ಲಿ 5 ಲಕ್ಷ ಟನ್ ಕಬ್ಬನ್ನು ನುರಿಯುವ ಗುರಿ ಹೊಂದಿದೆ.

ಕಾರ್ಖಾನೆ ಆರಂಭಕ್ಕೆ ಬೇಕಿದೆ ವಿದ್ಯುತ್ ಸರಬರಾಜು. ಇದೀಗ ವಿದ್ಯುತ್ ಪೂರೈಕೆ ಮಾಡುವಂತೆ ಇಂಧನ ಸಚಿವ ಕೆ.ಜೆ.ಜಾರ್ಜ್​ಗೆ ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಮನವಿ ಮಾಡಿದ್ದಾರೆ.

ಹಂತ ಹಂತವಾಗಿ ಪಾವತಿ

ಈ ವರ್ಷ ರೈತರ ಕಬ್ಬು ಅರೆಯಲು ರೈತರೊಂದಿಗೆ ಕಾರ್ಖಾನೆ ಒಪ್ಪಂದ ಮಾಡಿಕೊಂಡಿದೆ. ಮೈಶುಗರ್ ಹಲವು ವರ್ಷದಿಂದ ನಷ್ಟಕ್ಕೆ ಸಿಲುಕಿ 40.86 ಕೋಟಿ ಕರೆಂಟ್ ಬಿಲ್ ಬಾಕಿ ಉಳಿಸಿಕೊಂಡಿದೆ. ಪ್ರಸಕ್ತ ಹಂಗಾಮಿನಲ್ಲಿ ಕಬ್ಬನ್ನು ನುರಿಯಲು ಅವಶ್ಯವಿರುವ ವಿದ್ಯುತ್ ಸರಬರಾಜು ಮಾಡಿ. ಹಂತ ಹಂತವಾಗಿ ಬಾಕಿ ಮೊತ್ತ ಪಾವತಿಸಲಾಗುತ್ತದೆ. ವಿದ್ಯುತ್​ ನೀಡಲು ಚೆಸ್ಕಾಂ ನಿರ್ದೇಶಕರಿಗೆ ವಿದ್ಯುತ್ ಆದೇಶಿಸುವಂತೆ ಗೂಳಿಗೌಡ ಮನವಿ ಮಾಡಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net