

ಬೆಂಗಳೂರು: ಒಬ್ಬ ನಟ ಅಥವಾ ನಟಿಯ ಒಂದಕ್ಕಿಂತ ಹೆಚ್ಚು ಚಿತ್ರಗಳು ಒಂದೇ ದಿನ ಬಿಡುಗಡೆಯಾಗುವುದು ಹೊಸದೇನಲ್ಲ. ಈಗಾಗಲೇ ಹಲವು ನಟ-ನಟಿಯರು ಚಿತ್ರಗಳು ಒಂದೇ ದಿನ ಬಿಡುಗಡೆಯಾದ ಉದಾಹರಣೆಗಳಿವೆ. ಈಗ ಆ ಸಾಲಿಗೆ ಅದಿತಿ ಪ್ರಭುದೇವ ಸಹ ಸೇರಿಕೊಂಡಿದ್ದಾರೆ.
ಅದಿತಿ ಅಭಿನಯದ ಎರಡು ಚಿತ್ರಗಳು ನಾಳೆ (ಡಿ.30) ಬಿಡುಗಡೆಯಾಗುವುದಕ್ಕೆ ಸಜ್ಜಾಗಿದೆ. ಅದರಲ್ಲಿ 'ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ' ಚಿತ್ರದಲ್ಲಿ ಪೂರ್ಣಪ್ರಮಾಣದ ನಾಯಕಿಯಾಗಿ ಕಾಣಿಸಿಕೊಂಡರೆ, 'ಪದವಿಪೂರ್ವ' ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿರುವ ಅದಿತಿ, ತಮ್ಮ ಪತಿಯ ಜತೆಗೆ ಹೊಸವರ್ಷವನ್ನು ಬರಮಾಡಿಕೊಳ್ಳುವುದಕ್ಕೆ ತಯಾರಿ ನಡೆಸಿದ್ದಾರೆ. ಹೀಗಿರುವಾಗಲೇ ಅವರ ಎರಡು ಸಿನಿಮಾಗಳು ಒಂದೇ ದಿನ ಬಿಡುಗಡೆಯಾಗುತ್ತಿರುವುದು ವಿಶೇಷ.
ಈ ಎರಡು ಚಿತ್ರಗಳು ಸೇರಿದರೆ, ಈ ವರ್ಷ ಬಿಡುಗಡೆಯಾದ ಅದಿತಿ ಅಭಿನಯದ ಚಿತ್ರಗಳ ಸಂಖ್ಯೆ ಎಂಟಾಗುತ್ತದೆ. ಕನ್ನಡ ಚಿತ್ರರಂಗದಲ್ಲಿ ಅದಿತಿ ಬೇಡಿಕೆಯ ನಟಿಯಾಗಿದ್ದು, ಹಲವು ಚಿತ್ರಗಳನ್ನು ಒಪ್ಪಿಕೊಂಡಿದ್ದರು. ಈ ಪೈಕಿ ಇದೇ ವರ್ಷ ಎಂಟು ಚಿತ್ರಗಳು ಬಿಡುಗಡೆಯಾಗಿರುವುದು ವಿಶೇಷ. ಒಬ್ಬ ನಟಿಯ ಇಷ್ಟೊಂದು ಸಂಖ್ಯೆಯ ಚಿತ್ರಗಳು ಬಿಡುಗಡೆಯಾಗಿ ಹಲವು ವರ್ಷಗಳೇ ಆಗಿವೆ. ಈಗ ಅದಿತಿ ಅಂಥದ್ದೊಂದು ದಾಖಲೆ ಮಾಡಿದ್ದಾರೆ ಎನ್ನುವುದು ವಿಶೇಷ.
ವರ್ಷದ ಆರಂಭದಲ್ಲಿ ಬಿಡುಗಡೆಯಾದ 'ಒಂಬತ್ತನೇ ದಿಕ್ಕು' ಚಿತ್ರದಿಂದ ಪ್ರಾರಂಭಿಸಿ 'ಓಲ್ಡ್ ಮಾಂಕ್', 'ಗಜಾನನ ಅಂಡ್ ಗ್ಯಾಂಗ್', 'ತೋತಾಪುರಿ', 'ಚಾಂಪಿಯನ್' ಮತ್ತು 'ತ್ರಿಬ್ಬಲ್ ರೈಡಿಂಗ್' ಚಿತ್ರಗಳು ಇದುವರೆಗೂ ಬಿಡುಗಡೆಯಾಗಿದ್ದವು. ಈಗ ಆ ಸಾಲಿಗೆ 'ಪದವಿಪೂರ್ವ' ಮತ್ತು 'ಒನ್ಸ್ ಅಪಾನ್ ಎ ಟೈಮ್ ಇನ್ ಜಮಾಲಿಗುಡ್ಡ' ಚಿತ್ರಗಳೂ ಸೇರಿವೆ ಎಂಬುದು ವಿಶೇಷ.