WEB EXCLUSIVE | ಒಂದೇ ಹುದ್ದೆಗೆ ಇಬ್ಬರು ಇಂಜಿನಿಯರ್​ಗಳ ಕಿತ್ತಾಟ!

HBL 9-RNR-03
Published on

ಕಚೇರಿಗೆ ಬೀಗ ಜಡಿದ ಎಇಇ ಗಿರೀಶ ನಾಯಕ | ಬಾಗಿಲ ಬಳಿ ನಿಂತ ಮತ್ತೊಬ್ಬ ಎಇಇ ರಮೇಶ

ರಾಣೆಬೆನ್ನೂರ : ಇಲ್ಲಿಯ ಹೆಸ್ಕಾಂ ಉಪ ವಿಭಾಗ-1ರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹುದ್ದೆಗೆ ಎಇಇಗಳ ವರ್ಗಾವಣೆ ಕುರಿತು ಸ್ಪಷ್ಟ ನಿರ್ದೇಶನ ಬಾರದ ಹಿನ್ನೆಲೆಯಲ್ಲಿ ಒಂದೇ ಹುದ್ದೆಗೆ ಇಬ್ಬರು ಎಇಇಗಳು ಕಿತ್ತಾಡುವ ಪರಿಸ್ಥಿತಿ ನಿರ್ವಣವಾಗಿದೆ. ಈ ವಿಚಾರವಾಗಿ ಹಾಲಿ ಕಾರ್ಯನಿರ್ವಹಿಸುತ್ತಿರುವ ಎಇಇ ಮತ್ತೊಬ್ಬ ಎಇಇಯನ್ನು ಒಳಗೆ ಬಿಡದೆ ಕಚೇರಿಗೆ ಬೀಗ ಹಾಕಿಕೊಂಡು ಹೋದ ಘಟನೆ ಬುಧವಾರ ನಡೆಯಿತು.

ಏನಿದು ಘಟನೆ...? : 2019 ಅಕ್ಟೋಬರ್ 31ರಂದು ರಾಣೆಬೆನ್ನೂರಿನ ಹೆಸ್ಕಾಂ ಉಪ ವಿಭಾಗ-1ರ ಎಇಇ ಗಿರೀಶ ನಾಯಕ ಅವರನ್ನು ಶಿಗ್ಗಾಂವಿ ಕಚೇರಿಗೆ ಹಾಗೂ ಶಿಗ್ಗಾಂವಿ ಎಇಇ ರಮೇಶ ಬಿ.ವೈ. ಅವರನ್ನು ರಾಣೆಬೆನ್ನೂರ ಕಚೇರಿಗೆ ವರ್ಗಾಯಿಸಿ ಹೆಸ್ಕಾಂ ಪ್ರಧಾನ ವ್ಯವಸ್ಥಾಪಕರು ಆದೇಶ ಹೊರಡಿಸಿದ್ದರು. ಆಗ ಇಬ್ಬರು ಬಂದು ತಮಗೆ ಸೂಚಿಸಿದ ಸ್ಥಳದಲ್ಲಿ ವರದಿ ಮಾಡಿಕೊಂಡಿದ್ದರು.

ರಾಣೆಬೆನ್ನೂರ ನಗರದ ಹೆಸ್ಕಾಂ ಉಪ ವಿಭಾಗ-1ರ ಕೊಠಡಿಗೆ ಎಇಇ ಗಿರೀಶ ನಾಯಕ ಬೀಗ ಹಾಕಿದ ಹಿನ್ನೆಲೆಯಲ್ಲಿ ಇನ್ನೊಬ್ಬ ಎಇಇ ರಮೇಶ ಬಿ.ವೈ. ಬಾಗಿಲು ಎದುರು ನಿಂತಿರುವುದು.

ಎರಡು ತಿಂಗಳ ನಂತರ ಗಿರೀಶ ನಾಯಕ ಅವರನ್ನು ಮತ್ತೆ ರಾಣೆಬೆನ್ನೂರ ಕಚೇರಿಗೆ ವರ್ಗಾವಣೆ ಮಾಡಿ ಆದೇಶ ಬಂತು. ಆದರೆ, ಶಿಗ್ಗಾಂವಿಯಿಂದ ಬಂದಿದ್ದ ರಮೇಶ ಬಿ.ವೈ. ಅವರನ್ನು ಬೇರೆಡೆ ವರ್ಗಾವಣೆ ಮಾಡಿರಲಿಲ್ಲ. ಹೀಗಾಗಿ ಇಬ್ಬರು ಒಂದೇ ಖುರ್ಚಿಗಾಗಿ ಒಂದು ವರ್ಷದಿಂದ ಕಿತ್ತಾಡುತ್ತಿದ್ದಾರೆ. ಆದರೆ, ಇಲಾಖೆಯಿಂದ ಈ ಬಗ್ಗೆ ಈವರೆಗೂ ಯಾವುದೇ ನಿರ್ದೇಶನ ಬಂದಿಲ್ಲ.

ಕಚೇರಿಗೆ ಗಿರೀಶ ನಾಯಕ ಬೀಗ ಜಡಿದ ಕಾರಣ ರಮೇಶ ಬಿ.ವೈ. ಬಾಗಿಲು ಮುಚ್ಚಿದ ಕಚೇರಿ ಎದುರು ಕೆಲಸಕ್ಕಾಗಿ ಕಾಯ್ದು ನಿಂತಿದ್ದರು. ‘ನ್ಯಾಯಯುತವಾಗಿ ಕಚೇರಿಯಲ್ಲಿ ನಾನು ಕರ್ತವ್ಯ ನಿರ್ವಹಿಸಬೇಕು. ಗಿರೀಶ ನಾಯಕ ಅವರು ಕಚೇರಿಗೆ ಬೀಗ ಜಡಿದು ನನಗೆ ಒಳಗೆ ಬಾರದಂತೆ ಮಾಡಿದ್ದಾರೆ. ಆದ್ದರಿಂದ ನನಗೆ ನ್ಯಾಯ ಒದಗಿಸಿಕೊಡಬೇಕು’ ಎಂದು ರಮೇಶ ಒತ್ತಾಯಿಸಿದರು.

ಈ ಕುರಿತು ಹೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ಎನ್. ಬೆಳಕೇರಿ ಇಬ್ಬರ ನಡುವೆ ಮಾತುಕತೆ ನಡೆಸಿ ಸಂಧಾನ ಮಾಡಿದರು. ‘ಇಬ್ಬರ ವರ್ಗಾವಣೆ ಹಾಗೂ ಯಾರು ಎಲ್ಲಿ ಕಾರ್ಯನಿರ್ವಹಣೆ ಮಾಡಬೇಕು ಎಂಬ ಬಗ್ಗೆ ಸ್ಪಷ್ಟವಾಗಿ ನಿರ್ದೇಶನ ನೀಡುವಂತೆ ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಎರಡ್ಮೂರು ದಿನದಲ್ಲಿ ಮೇಲಧಿಕಾರಿಗಳಿಮದ ನಿರ್ದೇಶನ ಬರಲಿದೆ. ಅಲ್ಲಿಯವರೆಗೆ ಬೀಗ ತೆಗೆದು ಕಾರ್ಯನಿರ್ವಹಣೆ ಮಾಡಿ’ ಎಂದು ಸೂಚಿಸಿದರು. ನಂತರ ಕಚೇರಿಯ ಬೀಗ ತೆಗೆಯಲಾಯಿತು.

ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net