VIDEO| ಕಾರು ಡಿಕ್ಕಿಗೆ ಬೈಕ್​ ಸಮೇತ ಹಾರಿ ಬಿದ್ದು ಪೇದೆಗಳಿಬ್ಬರ ದುರ್ಮರಣ: ಬೆಚ್ಚಿಬೀಳಿಸೋ ವಿಡಿಯೋ!

Accident
Published on

ಚೆನ್ನೈ: ಕಾರು ಡಿಕ್ಕಿ ಹೊಡೆದು ಸಶಸ್ತ್ರ ಮೀಸಲು ಪೊಲೀಸರಿಬ್ಬರು ದುರಂತ ಸಾವಿಗೀಡಾಗಿರುವ ಘಟನೆ ಚೆನ್ನೈನ ಮೊಗಪ್ಪೈರ್​ ಬಳಿ ಬುಧವಾರ ನಡೆದಿದೆ. ಬೆಳ್ಳಂಬೆಳಗ್ಗೆಯೇ ಘಟನೆ ನಡೆದಿದ್ದು ಕೆಲಹೊತ್ತಿನ ಬಳಿಕ ನಿರ್ಲಕ್ಷ್ಯ ವಹಿಸಿದ ಚಾಲಕನನ್ನು ಬಂಧಿಸಲಾಗಿದೆ.

ಸಿಸಿಟಿವಿಯಲ್ಲಿ ದಾಖಲಾಗಿರುವ ದೃಶ್ಯದ ಪ್ರಕಾರ ಅಪಘಾತದ ಬುಧವಾರ ಬೆಳಗ್ಗೆ 4.15ಕ್ಕೆ ನಡೆದಿದೆ. ಪೇದೆಗಳಾದ ಬಿ. ರವೀಂದ್ರನ್​ (32) ಮತ್ತು ವಿ ಕಾರ್ತಿಕ್​ (34) ಅಂಬತ್ತೂರ್​ ರಿಯಲ್​ ಎಸ್ಟೇಟ್​ ರಸ್ತೆಯಲ್ಲಿ ಬೈಕ್​ನಲ್ಲಿ ಬರುತ್ತಿದ್ದರು. ಡಿಎವಿ ಹುಡುಗಿಯ ಶಾಲೆ ಬಳಿ ಬರುತ್ತಿದ್ದಂತೆ ಬೈಕ್​ ಓಡಿಸುತ್ತಿದ್ದ ರವೀಂದ್ರನ್​ ಬಲ ತಿರುವು ತೆಗೆದುಕೊಂಡ ಬೆನ್ನಲ್ಲೇ ವೇಗವಾಗಿ ಬಂದ ಎಸ್​ಯುವಿ ಬೈಕ್​ ಅನ್ನು ಗುದ್ದಿಕೊಂಡಿ ಹೋಗಿ ನಿಂತಿತು. ಡಿಕ್ಕಿಯ ರಭಸಕ್ಕೆ ಪೇದೆಗಳಿಬ್ಬರು ಬೈಕ್​ನಿಂದ ಹಾರುವುದನ್ನು ಸಿಸಿಟಿವಿ ದೃಶ್ಯದಲ್ಲಿ ಕಾಣಬಹುದಾಗಿದೆ.

ರವೀಂದ್ರನ್​ ಗಂಭೀರ ಗಾಯಗಳಿಂದ ಸ್ಥಳದಲ್ಲೇ ಮೃತಪಟ್ಟರೆ, ರಾಜೀವ್​ ಗಾಂಧಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಕಾರ್ತಿಕ್​ ಬೆಳಗ್ಗೆ 11 ಗಂಟೆಗೆ ಕೊನೆಯುಸಿರೆಳೆದರು. ಇಬ್ಬರು ಸಹ ಕೊಯಂಬೇಡುವಿನಲ್ಲಿರುವ ಚೆನ್ನೈ ಮೊಫುಸ್ಸಿಲ್​ ಬಸ್​ ಟರ್ಮಿನಲ್​ (ಸಿಎಂಬಿಟಿ)ಗೆ ಕರ್ತವ್ಯಕ್ಕೆಂದು ಹಾಜರಾಗುತ್ತಿದ್ದರು. ಇವರು ವಿವಿಧ ಜಿಲ್ಲೆಗಳಿಂದ ಬರುವ ಬಸ್ಸುಗಳನ್ನು ಸುವ್ಯವಸ್ಥಿತಗೊಳಿಸಲು ಸಹಾಯ ಮಾಡುತ್ತಿದ್ದರು.

ಇದೇ ವೇಳೆ ಬಂಧಿತ ಆರೋಪಿಯನ್ನು ಕಾಲೇಜು ವಿದ್ಯಾರ್ಥಿಗಳು ಎಂದು ಗುರುತಿಸಲಾಗಿದೆ. ಮದ್ಯಪಾನ ಮಾಡಿದ್ದ ಯಾವುದೇ ಸೂಚನೆ ತಿಳಿದುಬಂದಿಲ್ಲ. ರೋಹಿತ್​ ಸೂರ್ಯ (21), ವರುಣ್​ ಸೆಕರ್​ (20) ಮತ್ತು ಅಮರ್​ನಾತ್​ ಎಂಬ ವಿದ್ಯಾರ್ಥಿಗಳು ಕಾರಿನಲ್ಲಿದ್ದರು. ಹುಟ್ಟುಹಬ್ಬ ಆಚರಣೆ ಮುಗಿಸಿಕೊಂಡು ಮನೆಗೆ ಬರುತ್ತಿದ್ದರು ಎಂದು ತಿಳಿದುಬಂದಿದೆ. ಅಮರ್​ನಾಥ್​ ಎಂಬ ಯುವಕ ಕಾರು ಚಲಾಯಿಸುತ್ತಿದ್ದ. ತುಂಬಾ ವೇಗವಾಗಿ ಬರುತ್ತಿದ್ದರಿಂದ ನಿಯಂತ್ರಣ ಮಾಡಲಾಗದೇ ಬಲ ತಿರುವು ಪಡೆದುಕೊಳ್ಳುತ್ತಿದ್ದ ಪೇದೆಗಳಿಗೆ ಡಿಕ್ಕಿ ಹೊಡೆಸಿದ್ದಾರೆ.

ಆರೋಪಿಗಳ ವಿರುದ್ಧ ಐಪಿಸಿಯ ವಿವಿಧ ಸೆಕ್ಷನ್​ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತರಾದ ರವೀಂದ್ರನ್​ ಇಬ್ಬರು ಮಕ್ಕಳು ಮತ್ತು ಪತ್ನಿಯನ್ನು ಅಗಲಿದ್ದಾರೆ. ಕಾರ್ತಿಕ್​ ಪತ್ನಿ ಮತ್ತು ಹಿರಿಯ ಪಾಲಕರನ್ನು ಬಿಟ್ಟು ಹೋಗಿದ್ದಾರೆ. ಸಂತ್ರಸ್ತರ ರಕ್ತಸಂಬಂಧಿಗಳಿಗೆ ಯಾವುದೇ ಪರಿಹಾರ ನೀಡಲು ಬಯಸಿದರೆ ನೈತಿಕ ಹೊಣೆಗಾರಿಕೆ ತೆಗೆದುಕೊಳ್ಳುವುದು ಆರೋಪಿಗಳ ಕುಟುಂಬಗಳಿಗೆ ಬಿಟ್ಟದ್ದು ಎಂದು ಪೊಲೀಸ್​ ಅಧಿಕಾರಿಯೊಬ್ಬರು ಹೇಳಿದ್ದಾರೆ. (ಏಜೆನ್ಸೀಸ್​)

(ವಿಡಿಯೋ ಕೃಪೆ: ನ್ಯೂಸ್​ ಮಿನಟ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net