ಗೋಸಾಗಾಟ ಪ್ರಕರಣದ ಇಬ್ಬರು ಸೆರೆ

Arrest Kaidhi
Published on

ಪಡುಬಿದ್ರಿ: ಹೆಜಮಾಡಿ ಟೋಲ್ ಬಳಿ ಅಕ್ರಮ ಗೋ ಸಾಗಾಟ ಸಂದರ್ಭ ಗಂಗೊಳ್ಳಿ ಠಾಣೆ ಪಿಎಸ್‌ಐ ಹಾಗೂ ಸಿಬ್ಬಂದಿಯ ಹತ್ಯೆಗೆ ಯತ್ನಿಸಿ ಪರಾರಿಯಾಗಿದ್ದ ಮೊಹಮ್ಮದ್ ರಾಜಿಕ್ ಮತ್ತು ಮೊಹಮ್ಮದ್ ಅಜೀಂ ಕಾಪು ಎಂಬುವರನ್ನು ಪಡುಬಿದ್ರಿ ಪೊಲೀಸರು ಶನಿವಾರ ಬಂಧಿಸಿದ್ದಾರೆ. ಆ.5ರಂದು ಪಡುಬಿದ್ರಿ ಠಾಣಾ ವ್ಯಾಪ್ತಿಯ ಹೆಜಮಾಡಿ ಟೋಲ್ ಗೇಟ್ ಬಳಿ ಗಂಗೊಳ್ಳಿ ಠಾಣೆ ಪೊಲೀಸರು ದನ ಕಳವು ಪ್ರಕರಣದ ಆರೋಪಿಗಳ ಪತ್ತೆಯ ಬಗ್ಗೆ ಖಚಿತ ಮಾಹಿತಿ ಮೇರೆಗೆ ಕಾಯುತ್ತಿದ್ದರು. ಆ ವೇಳೆ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ ಕಾರನ್ನು ಪರಿಶೀಲಿಸುವ ಸಂದರ್ಭ ಕಾರಿನ ಒಳಗಡೆ ಐದಾರು ದನಗಳನ್ನು ಹಿಂಸಾತ್ಮಕ ರೀತಿಯಲ್ಲಿ ಕಟ್ಟಿ ಹಾಕಿದ್ದನ್ನು ಕಂಡಾಗ ಕಾರಿನ ಚಾಲಕ ಪೊಲೀಸರ ಮೇಲೆ ಕಾರನ್ನು ಹತ್ತಿಸಿ ಕೊಲೆಗೆ ಪ್ರಯತ್ನಿಸಿದ್ದರು. ಬಳಿಕ ಪೊಲೀಸರು ಕಾರಿನಲ್ಲಿದ್ದ ಶಾರೋಜ್ ಸುರತ್ಕಲ್ ಎಂಬಾತನನ್ನು ವಶಕ್ಕೆ ಪಡೆದಿದ್ದು, ಉಳಿದ ಆರೋಪಿಗಳು ಪೊಲೀಸ್ ಸಿಬ್ಬಂದಿ ಮೇಲೆ ಕಾರನ್ನು ಚಲಾಯಿಸಿ ಗಾಯಗೊಳಿಸಿ ಪರಾರಿಯಾಗಿದ್ದರು. ಗಂಗೊಳ್ಳಿ ಪೊಲೀಸ್ ಠಾಣಾ ಪಿಎಸ್‌ಐ ನೀಡಿದ ದೂರಿನ ಮೇರೆಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಕಾರಿನಲ್ಲಿದ್ದ ಉಳಿದ ಆರೋಪಿಗಳಾದ ಸ್ವಾನ್ ಕಾಪು, ಅಜೀಂ ಕಾಪು, ರಾಜಿಕ್ ಬಜ್ಪೆ ಎಂಬುವರ ದಸ್ತಗಿರಿ ಬಗ್ಗೆ ಪಡುಬಿದ್ರಿ ಪೊಲೀಸರು ಪ್ರಯತ್ನದಲ್ಲಿದ್ದರು.

ವಿವಿಧ ಠಾಣೆಗಳಲ್ಲಿ ಪ್ರಕರಣ

ಅಜೀಂ ಮತ್ತು ರಾಜಿಕ್ ಎಂಬುವರು ತಮಿಳುನಾಡು, ಕೇರಳದಲ್ಲಿ ತಲೆಮರೆಸಿಕೊಂಡಿದ್ದರು. ಆರೋಪಿಗಳನ್ನು ವಶಕ್ಕೆ ಪಡೆದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದ ನ್ಯಾಯಾಲಯ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿದೆ. ರಾಜಿಕ್ ಮೇಲೆ ಬಜ್ಪೆ ಪೊಲೀಸ್ ಠಾಣೆಯಲ್ಲಿ ಅಕ್ರಮ ಗೋಸಾಗಾಟದ ಬಗ್ಗೆ ಪ್ರಕರಣ ದಾಖಲಾಗಿ ನ್ಯಾಯಾಲಯದ ವಿಚಾರಣೆಯಲ್ಲಿ ಇದೆ. ಅಜೀಂ ವಿರುದ್ಧ ಗೋ ಅಕ್ರಮ ಸಾಗಾಟ, ಮೂಡುಬಿದಿರೆ ಠಾಣೆಯಲ್ಲಿ ಕಳ್ಳತನ ಬಗ್ಗೆ ಪ್ರಕರಣ ದಾಖಲಾಗಿ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಅಲ್ಲದೆ ಈತ ಉತ್ತರ ಕನ್ನಡ ಜಿಲ್ಲೆಯ ಚಿತ್ತಾಕುಲ, ಅಂಕೋಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದನ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದು,ಪೊಲೀಸರು ಹುಡುಕಾಟ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net