ಮಕ್ಕಳಿಗೆ ಸಾವಿರ ರೂ. ಪ್ರೋತ್ಸಾಹಧನ ನೀಡುವ ಸರಸ್ವತಿ ಟೀಚರ್

isd
Published on

ಬೆಳ್ವೆ: ಬೆಳ್ವೆ ಸಮೀಪದ ಹೆಂಗವಳ್ಳಿ ಗ್ರಾಮದ ಮರೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯಶಿಕ್ಷಕಿ ಸರಸ್ವತಿ 2025-26ನೇ ಸಾಲಿನ ಉಡುಪಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಗೊಂಡಿದ್ದಾರೆ. ಅವರು ಅಲ್ಬಾಡಿ ದಿ.ಸುಧಾಕರನ್, ನೇತ್ರಾವತಿ ದಂಪತಿ ಪುತ್ರಿ.

27 ವರ್ಷಗಳ ಕಾಲ ವಿವಿಧ ಶಾಲೆಗಳಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ಮರೂರು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಪ್ರಭಾರ ಮುಖ್ಯಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಶಾಲೆ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ. ಶಾಲೆಗೆ ಸೇರ್ಪಡೆಯಾಗುವ ಮಕ್ಕಳಿಗೆ 1000 ರೂ. ಪ್ರೋತ್ಸಾಹಧನ ನೀಡುತ್ತಿದ್ದಾರೆ. ಹಳೇ ವಿದ್ಯಾರ್ಥಿಗಳು, ದಾನಿಗಳ ಸಹಕಾರದಿಂದ ದತ್ತಿ ನಿಧಿ ಆರಂಭಿಸಿದ್ದಾರೆ. ದೂರದಿಂದ ಬರುವ ಮಕ್ಕಳಿಗಾಗಿ ವಾಹನದ ವ್ಯವಸ್ಥೆಗೂ ನೆರವು ನೀಡುತ್ತಾರೆ.

ಶಾಲೆಗೆ ಬೇಕಾದ ಟಿವಿ, ಪ್ರೊಜೆಕ್ಟರ್, ವಾಟರ್ ಪ್ಯೂರಿಫೈಯರ್, ಪ್ರಿಂಟರ್, ಕಂಪ್ಯೂಟರ್, ಕುಕ್ಕರ್, ಕುರ್ಚಿ, ಟೇಬಲ್, ಧ್ವನಿವರ್ಧಕ, ಸಿಡಿ ಪ್ಲೇಯರ್, ಗೇಟ್, ಟೈಲ್ಸ್, ಇಂಟರ್‌ಲಾಕ್, ಧ್ವಜಕಟ್ಟೆ ಹೀಗೆ ಶಾಲೆಗೆ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಪೂರಕವಾದ ಸಾಮಗ್ರಿ ಒದಗಿಸುವಲ್ಲಿ ಶ್ರಮಿಸಿದ್ದಾರೆ. ತಾವು ಪ್ರಾಥಮಿಕ ಶಿಕ್ಷಣ ಪಡೆದ ಅಲ್ಬಾಡಿ ಮೂರುಕೈ ಶಾಲೆಯಲ್ಲಿ ಮಕ್ಕಳ ದಾಖಲಾತಿ ಹೆಚ್ಚಿಸಲು ದತ್ತಿನಿಧಿಗೆ 10,000 ರೂ. ನೀಡುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net