

ವಿಜಯವಾಣಿ ಸುದ್ದಿಜಾಲ ಕಾರ್ಕಳ ಪ್ರಸ್ತುತ ಸಮಾಜ ಮಾನವೀಯ ಮೌಲ್ಯ ಕಳೆದುಕೊಳ್ಳುತ್ತಿದ್ದು, ಇದರಿಂದಾಗಿ ಗುರು ಶಿಷ್ಯರ ಸಂಬಂಧದ ಮೌಲ್ಯ ಕುಸಿಯುತ್ತಿದೆ. ಇಂದು ಸಂಬಂಧಗಳನ್ನು ಹಣದ ಮೂಲಕ ಅಳೆಯುತ್ತಿರುವುದು ಖೇದಕರ ವಿಷಯ. ಶಿಕ್ಷಕರು ಸಮಾಜದ ಕಣ್ಮಣಿಗಳು. ಅವರಿಂದ ಸುಸಂಸ್ಕೃತ ಸಮಾಜ ನಿರ್ಮಾಣ ಸಾಧ್ಯ. ಸರ್ವಶ್ರೇಷ್ಟ ನಾಯಕರನ್ನು ತಯಾರು ಮಾಡುವವರು ಶಿಕ್ಷಕರು ಮಾತ್ರ ಎಂದು ಕರ್ನಾಟಕ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೆಗೌಡ ಹೇಳಿದರು. ಕಾರ್ಕಳ ಕ್ರೈಸ್ಟ್‌ಕಿಂಗ್ ಶಿಕ್ಷಣ ಸಂಸ್ಥೆ ಶಿಕ್ಷಕ-ರಕ್ಷಕ ಸಂಘದ ವತಿಯಿಂದ ಕಾಲೇಜು ಸಭಾಂಗಣದಲ್ಲಿ ಆಯೋಜಿಸಲಾದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ವಿಜೇತ ನಿವೃತ್ತ ಮುಖ್ಯಶಿಕ್ಷಕ ಸಂಜೀವ ದೇವಾಡಿಗ ಮಾತನಾಡಿ, ಶಿಕ್ಷಕರು ಸಮರ್ಪಣಾ ಮನೋಭಾವದಿಂದ ಕಾರ್ಯನಿರ್ವಹಿಸಿದರೆ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿ ಸಾಧ್ಯ. ಶಿಕ್ಷಕರು ತಮ್ಮ ವೃತ್ತಿಯ ಬಗ್ಗೆ ಪ್ರೀತಿ, ಅಭಿಮಾನ ಬೆಳೆಸಿಕೊಳ್ಳಬೇಕು ಎಂದರು. ಕ್ರೈಸ್ಟ್‌ಕಿಂಗ್ ಎಜುಕೇಷನ್ ಟ್ರಸ್ಟ್ ಸದಸ್ಯ ಡಾ.ಪೀಟರ್ ಫರ್ನಾಂಡಿಸ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶಿಕ್ಷಕ-ರಕ್ಷಕ ಸಂಘದ ಪದವಿಪೂರ್ವ ವಿಭಾಗ ಅಧ್ಯಕ್ಷ ದಯಾನಂದ ಮಲೆಬೆಟ್ಟು, ಕ್ರೈಸ್ಟ್‌ಕಿಂಗ್ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಆವೆಲಿನ್ ಲೂಯಿಸ್, ಸಂಸ್ಥೆ ಪ್ರಾಥಮಿಕ ಶಾಲಾ ಮುಖ್ಯಶಿಕ್ಷಕ ರುಡಾಲ್ಫ್ ಕಿಶೋರ್ ಲೋಬೊ, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಜೋಸ್ನಾ ಸ್ನೇಹಲತಾ ಉಪಸ್ಥಿತರಿದ್ದರು. ಪದವಿಪೂರ್ವ ವಿಭಾಗದ ಪ್ರಾಚಾರ್ಯ ಲಕ್ಷ್ಮೀನಾರಾಯಣ ಕಾಮತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕನ್ನಡ ಉಪನ್ಯಾಸಕ ಉಮೇಶ್ ಬೆಳ್ಳಿಪ್ಪಾಡಿ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು. ಶಕೀಲಾ ಜಿ.ಶೆಟ್ಟಿ, ವಿದ್ಯಾ, ಮಮತಾ, ವಿಶ್ವನಾಥ ಪೂಜಾರಿ, ಕಿಶನ್, ಪ್ರಕಾಶ್ ಡಿಸೋಜ, ಸುನೀಲ್ ಡಿಸೋಜ, ಜಾನ್ ತಾವ್ರೋ, ವನಿತಾ ವಿವಿಧ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ-ರಕ್ಷಕ ಸಂಘದ ಪ್ರಾಥಮಿಕ ವಿಭಾಗ ಅಧ್ಯಕ್ಷ ಉದಯರವಿ ಸ್ವಾಗತಿಸಿದರು. ಪ್ರೌಢಶಾಲಾ ವಿಭಾಗ ಅಧ್ಯಕ್ಷೆ ಶರಿಟಾ ನೊರೋನ್ಹ ವಂದಿಸಿದರು. ಶಿಕ್ಷಕ-ರಕ್ಷಕ ಸಂಘದ ಸದಸ್ಯರಾದ ಹೇಮಲತಾ, ಯಶಸ್ವಿನಿ ರಾವ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಶಿಕ್ಷಕರು, ಪಾಲಕರಿಂದ ಮನರಂಜನಾ ಕಾರ್ಯಕ್ರಮ ಜರುಗಿತು.
ರೆಂಜಾಳ ಸರ್ಕಾರಿ ಪ್ರೌಢಶಾಲೆ ಮುಖ್ಯಶಿಕ್ಷಕಿ ಸ್ವರ್ಣಲತಾ ಕೆ. ಅವರಿಗೆ ಕ್ರೈಸ್ಟ್‌ಕಿಂಗ್ ಶಿಕ್ಷಕ ರತ್ನ, ಬೈಲೂರು ಸರ್ಕಾರಿ ಪದವಿಪೂರ್ವ ಕಾಲೇಜು ದೈಹಿಕ ಶಿಕ್ಷಣ ಶಿಕ್ಷಕ ಫ್ರೆಡ್ರಿಕ್ ರೆಬೆಲ್ಲೊ ಅವರಿಗೆ ಕ್ರೈಸ್ಟ್‌ಕಿಂಗ್ ಕ್ರೀಡಾ ಶಿಕ್ಷಕಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಂಸ್ಥೆ ಗಣಿತಶಾಸ್ತ್ರ ಉಪನ್ಯಾಸಕ ಅರುಣ್ ಸಂದೀಪ್ ಡಿಸೋಜ, ಕಚೇರಿ ಸಹಾಯಕಿ ಪೃಥ್ವಿ ಶೆಟ್ಟಿ, ಗ್ರಂಥಪಾಲಕಿ ರೇಷ್ಮಾ, ಸಂಸ್ಥೆಯ ಎಲ್ಲ ಶಿಕ್ಷಕರು, ಉಪನ್ಯಾಸಕರು, ಬೋಧಕೇತರ ವೃಂದದವರನ್ನು ಗೌರವಿಸಲಾಯಿತು.
ಶಿಕ್ಷಕರು ಮಕ್ಕಳನ್ನು ಪ್ರೀತಿ ವಾತ್ಸಲ್ಯದಿಂದ ನೋಡಿಕೊಳ್ಳಬೇಕು. ನಮ್ಮ ದೇಶಕ್ಕಾಗಿ ಕಾಯಾ ವಾಚಾ ಮನಸಾ ದುಡಿಯುವುದೇ ನಿಜವಾದ ದೇಶಪ್ರೇಮ. ತರಗತಿ ಕೊಠಡಿಗಳಲ್ಲಿ ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ದೊರೆತಾಗ ಭಾರತ ವಿಶ್ವನಾಯಕನಾಗುತ್ತದೆ. ಡಾ.ಪೀಟರ್ ಫರ್ನಾಂಡಿಸ್ ಕ್ರೈಸ್ಟ್‌ಕಿಂಗ್ ಎಜುಕೇಷನ್ ಟ್ರಸ್ಟ್ ಸದಸ್ಯ