

Kangana Ranaut: ನಟಿ ಮತ್ತು ಬಿಜೆಪಿ ಸಂಸದೆ ಕಂಗನಾ ರಣಾವತ್ಗೆ ಸುಪ್ರೀಂಕೋರ್ಟ್ ಬಿಗ್ ಶಾಕ್ ನೀಡಿದೆ. ದೇಶದಲ್ಲಿ ನಡೆದ ರೈತರ ಪ್ರತಿಭಟನೆ ಬಗ್ಗೆ ಮಾಡಿದ್ದ ವಿವಾದಾತ್ಮಕ ಟ್ವೀಟ್ ಸಂಬಂಧ ಪಂಜಾಬ್‌ನಲ್ಲಿ ದಾಖಲಾಗಿದ್ದ ಪ್ರಕರಣವನ್ನು ರದ್ದುಗೊಳಿಸುವಂತೆ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿದೆ ಎಂದು ಶುಕ್ರವಾರ(ಸೆ. 12) ವರದಿಯಾಗಿದೆ.
2021 ರಲ್ಲಿ ದೆಹಲಿ ಗಡಿಗಳಲ್ಲಿ ನಡೆದ ರೈತರ ಪ್ರತಿಭಟನೆಯ ಸಂದರ್ಭದಲ್ಲಿ ನಟಿ ಕಂಗನಾ ಮಹಿಂದರ್ ಕೌರ್ ಎಂಬ ವೃದ್ಧ ಮಹಿಳೆಯನ್ನು ಗುರಿಯಾಗಿಸಿ ಅವಹೇಳನಕಾರಿಯಾಗಿ ಟ್ವೀಟ್ ಮಾಡಿದ್ದರು. ಇಂತಹವರೆಲ್ಲಾ 100 ರೂ.ಗೆ ಬರುವ ಪ್ರತಿಭಟನೆಕಾರರು ಎಂದು ಅವಮಾನದ ರೀತಿಯಲ್ಲಿ ಟ್ವೀಟ್ ಮಾಡಿದ್ದರು.
ಆ ವೇಳೆ ವೃದ್ಧ ಮಹಿಂದರ್ ಕೌರ್ ಪಂಜಾಬ್ ಕೋರ್ಟ್ನಲ್ಲಿ ನಟಿ ಕಂಗನಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಜೊತೆಗೆ ಕ್ರಿಮಿನಲ್ ಪ್ರಕರಣವೂ ದಾಖಲಾಗಿತ್ತು. ಸದರಿ ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ರದ್ದುಗೊಳಿಸುವಂತೆ ಕಂಗನಾ ಹರಿಯಾಣ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಹರಿಯಾಣ ಕೋರ್ಟ್ ಅವರ ಅರ್ಜಿ ತಿರಸ್ಕರಿಸಿತ್ತು.
ನಂತರ ಹರಿಯಾಣ ಹೈಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಅಲ್ಲಿಯೂ ಅವರಿಗೆ ಯಾವುದೇ ಪರಿಹಾರ ಸಿಗಲಿಲ್ಲ.ಈಗಾಗಲೇ ಉದ್ವಿಗ್ನ ಪರಿಸ್ಥಿತಿಗೆ ಕಂಗನಾ ತನ್ನ ಟ್ವೀಟ್ ಮೂಲಕ ಬೆಂಕಿಗೆ ತುಪ್ಪ ಸುರಿದಿದ್ದಾರೆ ಎಂದು ಹೇಳಿದ ಸುಪ್ರೀಂಕೋರ್ಟ್, ಕಂಗನಾ ಸಲ್ಲಿಸಿದ ಅರ್ಜಿಯನ್ನು ವಜಾಗೊಳಿಸಿದೆ. (ಏಜೆನ್ಸೀಸ್)