

Shashi Tharoor: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಶೇ. 50ರಷ್ಟು ಸುಂಕಗಳಿಂದ ಭಾರತದಲ್ಲಿ ತೀವ್ರತರವಾದ ಪರಿಣಾಮ ಬೀರಿದೆ. ಅನೇಕರು ಈಗಾಗಲೇ ತಮ್ಮ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ ಎಂದು ಶುಕ್ರವಾರ(ಸೆ. 12) ಹಿರಿಯ ಕಾಂಗ್ರೆಸ್ ನಾಯಕ, ಸಂಸದ ಶಶಿ ತರೂರ್ ಹೇಳಿದ್ದಾರೆ.
ಕ್ರೆಡೈ ಆಯೋಜಿಸಿದ್ದ ಸಮ್ಮೇಳನದಲ್ಲಿ ಟ್ರಂಪ್ ಸುಂಕಗಳ ಕುರಿತು ಮಾತನಾಡಿರುವ ಶಶಿ ತರೂರ್, ಡೊನಾಲ್ಡ್ ಟ್ರಂಪ್ ಯಾವಾಗ ಏನು ಮಾಡುತ್ತಾರೆಂದು ತಿಳಿದಿಲ್ಲದ ವ್ಯಕ್ತಿ. ಸಾಂಪ್ರದಾಯಿಕ ರಾಜತಾಂತ್ರಿಕ ವಿಧಾನಗಳನ್ನು ಅವರು ಗೌರವಿಸುವುದಿಲ್ಲ ಎಂದು ಟ್ರಂಪ್ ನಿಲುವನ್ನು ಟೀಕಿಸಿದರು.
ಟ್ರಂಪ್ ಅವರ ಮನಸ್ಸು ಹೇಗಿದೆ ಎಂದು ನಿಮಗೆ ಹೇಳಲು ಸಾಧ್ಯವಿಲ್ಲ. ಅಮೇರಿಕನ್ ವ್ಯವಸ್ಥೆಯು ಅಧ್ಯಕ್ಷರಿಗೆ ಅಗಾಧವಾದ ಸ್ವಾತಂತ್ರ್ಯವನ್ನು ನೀಡುತ್ತದೆ. ಟ್ರಂಪ್‌ಗಿಂತ ಮೊದಲು, ಸುಮಾರು 45 ಅಧ್ಯಕ್ಷರು ಅಮೆರಿಕವನ್ನು ಆಳಿದರು. ಆದರೆ ಶ್ವೇತಭವನದಿಂದ ಇಂತಹ ನಡವಳಿಕೆಯನ್ನು ಯಾರೂ ಊಹಿಸಿರಲಿಲ್ಲ. ಯಾವುದೇ ಸಂದರ್ಭದಲ್ಲಿ, ಟ್ರಂಪ್ ಅವರದು ಅಸಾಮಾನ್ಯ ನಡೆ. ಅಂತರರಾಷ್ಟ್ರೀಯ ನಾಯಕರು ನೊಬೆಲ್ ಶಾಂತಿ ಪ್ರಶಸ್ತಿಯನ್ನು ನಿರೀಕ್ಷಿಸುವುದಾಗಿ ಬಹಿರಂಗವಾಗಿ ಹೇಳುವುದನ್ನು ನಾವು ಎಂದಾದರೂ ನೋಡಿದ್ದೇವೆಯೇ?, ಟ್ರಂಪ್ ಸ್ವಲ್ಪ ಅಸಾಮಾನ್ಯ ವ್ಯಕ್ತಿ ಎಂದು ವ್ಯಂಗ್ಯವಾಡಿದ್ದಾರೆ.
ಟ್ರಂಪ್ ಅವರ ಸುಂಕಗಳಿಂದ ಭಾರತಕ್ಕೆ ತೀವ್ರ ಹೊಡೆತ ಬಿದ್ದಿದೆ. ಜನರು ಈಗಾಗಲೇ ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಸೂರತ್‌ನಲ್ಲಿ ವಜ್ರ ಮತ್ತು ಆಭರಣ ಕ್ಷೇತ್ರದಲ್ಲಿ 1.35 ಲಕ್ಷ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಶೇಕಡಾ 50 ರಷ್ಟು ಸುಂಕದಿಂದಾಗಿ, ಅನೇಕ ಭಾರತೀಯ ಉತ್ಪನ್ನಗಳನ್ನು ರಫ್ತು ಮಾಡುವುದು ಅಸಾಧ್ಯವಾಗಿದೆ. ತನ್ನ ಪ್ರತಿಸ್ಪರ್ಧಿಗಳ ಮೇಲಿನ ಕಡಿಮೆ ಸುಂಕಗಳಿಂದಾಗಿ ಭಾರತವು ಅಮೆರಿಕದ ಮಾರುಕಟ್ಟೆಯನ್ನು ಪ್ರವೇಶಿಸುವುದು ಅಸಾಧ್ಯವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ನಾವು ಮಾತುಕತೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.
ಭಾರತದ ಮೇಲೆ ವಿಧಿಸಲಾದ ಹೆಚ್ಚುವರಿ ವಿಧಿಸಲಾದ ಶೇ. 25ರಷ್ಟು ಸುಂಕ, ಅದು ಸುಂಕವಲ್ಲ. ಅದು ರಷ್ಯಾದ ತೈಲವನ್ನು ಖರೀದಿಸಲಾರದಂತೆ ತಡೆಯುವ ನಿರ್ಬಂಧವಾಗಿದೆ, ಇದು ಅನ್ಯಾಯ. ಚೀನಾ ಭಾರತಕ್ಕಿಂತ ರಷ್ಯಾದಿಂದ ಹೆಚ್ಚು ತೈಲ ಮತ್ತು ನೈಸರ್ಗಿಕ ಅನಿಲವನ್ನು ಆಮದು ಮಾಡಿಕೊಳ್ಳುತ್ತದೆ. ಭಾರತವು ಈ ಸಂದರ್ಭಗಳಿಗೆ ಹೊಂದಿಕೊಳ್ಳಬೇಕು. ಇತರ ದೇಶಗಳಿಗೆ ತನ್ನ ರಫ್ತುಗಳನ್ನು ಹೆಚ್ಚಿಸಬೇಕು ಎಂದು ತಿಳಿಸಿದರು. (ಏಜೆನ್ಸೀಸ್)