

ಬೆಂಗಳೂರು:ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಶನಿವಾರ ನಗರದ ವಿವಿಧ ಮನೆಗಳಿಗೆ ಭೇಟಿ ನೀಡಿ ಸೂಪರ್ ಚೆಕ್ಕಿಂಗ್ ಕಾರ್ಯ ನಡೆಸಿದರು.
ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ಪಟ್ಟಿ ಶುದ್ಧೀಕರಣವನ್ನು ಅಧಿಕಾರಿಗಳು ಸಮರ್ಪಕವಾಗಿ ಮಾಡಿದ್ದಾರೆ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಲು ಬ್ಯಾಟರಾಯನಪುರ, ಹೆಬ್ಬಾಳ, ವಿಜಯನಗರ,ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯ ಮತದಾರರ ಮನೆಗಳಿಗೆ ಮುಖ್ಯ ಆಯುಕ್ತರು, ಭೇಟಿ ನೀಡಿ ನಮೂನೆ ಪರಿಶೀಲಿಸಿದರು.
ಮೊದಲು ಬ್ಯಾಟರಾಯನಪುರ ಕ್ಷೇತ್ರ ವ್ಯಾಪ್ತಿಯ ವೆಂಕಟೇಶಪುರ, ಸೂಯೋರ್ದಯ ಬಡಾವಣೆ ಹಾಗೂ ಥಣಿಸಂದ್ರದ ಶಬರಿ ನಗರದಲ್ಲಿ ನಮೂನೆ ಪರಿಶೀಲಿಸಿ ಅಧಿಕಾರಿಗಳು ಕೈಗೊಂಡ ಕ್ರಮದ ಕುರಿತು ಅರ್ಜಿದಾರರ ಬಳಿ ಚರ್ಚಿಸಿ ಪರಿಷ್ಕರಣೆ ಬಗ್ಗೆ ಖಾತರಿಪಡಿಸಿಕೊಂಡ ತುಷಾರ್ ಗಿರಿನಾಥ್, ವೆಂಕಟೇಶಪುರದಲ್ಲಿ ಮೃತಪಟ್ಟಿರುವ ಹಾಗೂ ಎರಡು ಕಡೆ ಹೆಸರಿರುವ ನಮೂನೆ ಪರಿಶೀಲಿಸಿ ಮತದಾರರ ಪಟ್ಟಿಯಲ್ಲಿ ಹೆಸರು ತೆಗೆದಿರುವ ಬಗ್ಗೆ ಅಧಿಕಾರಿಗಳ ಬಳಿ ಮಾಹಿತಿ ಪಡೆದರು.ಸೂಯೋರ್ದಯ ಬಡಾವಣೆಯಲ್ಲಿ ಎರಡು ಕಡೆ ಹೆಸರು ಇರುವ ಹಾಗೂ ಶಬರಿ ನಗರದಲ್ಲಿ ಬೇರೆಡೆ ಸ್ಥಳಾಂತರವಾಗಿರುವ ನಮೂನೆ, ಪರಿಶೀಲಿಸಿದರು. ಚುನಾವಣಾ ವಿಭಾಗದ ಸಹಾಯಕ ಆಯುಕ್ತ ಶರಣಪ್ಪ, ಮತದಾರ ನೋಂದಣಾಧಿಕಾರಿಗಳು, ಬೂತ್ ಮಟ್ಟದ ಮೇಲ್ವಿಚಾರಕರು, ಅಧಿಕಾರಿಗಳು ಸೇರಿ ಮತ್ತಿತರರಿದ್ದರು.
ಮೃತಪಟ್ಟವರ ಹೆಸರು ತೆಗಿಯಿರಿ:
ಹೆಬ್ಬಾಳ ಕ್ಷೇತ್ರದಲ್ಲಿ ಮಂಜುನಾಥ್ ಬಡಾವಣೆ, ಸೀತಪ್ಪ ಬಡಾವಣೆ ಹಾಗೂ ವೆಂಕಟೇಶಪ್ಪ ಬಡಾವಣೆಯಲ್ಲಿ ನಮೂನೆ 6ರ ಮೂಲಕ ಮತದಾರರ ಪಟ್ಟಿಯಲ್ಲಿ ಹೊಸದಾಗಿ ಸೇರ್ಪಡೆಯಾಗಿರುವ 3 ನಮೂನೆ, ವಿಜಯನಗರ ಕ್ಷೇತ್ರದ ಅತ್ತಿಗುಪ್ಪೆ ಬಳಿಯ ದ್ವಾರಕಾ ನಗರದಲ್ಲಿ ಹೊಸದಾಗಿ ಸೇರ್ಪಡೆಯಾದ ನಮೂನೆಯನ್ನು ತುಷಾರ್ ಗಿರಿನಾಥ್ ಪರಿಶೀಲಿಸಿದರು. ಕೊನೆಯದಾಗಿ ಗೋವಿಂದರಾಜನಗರ ಕ್ಷೇತ್ರದ ಅಗ್ರಹಾರ ದಾಸರಹಳ್ಳಿ ಮತದಾರರ ಪಟ್ಟಿಯಲ್ಲಿ ವಿಳಾಸ ಬದಲಾವಣೆ ಮಾಡಿಕೊಂಡಿರುವ ಮನೆಗೆ ಭೇಟಿ ನೀಡಿದ ವೇಳೆ, ಮನೆಯ ಸದಸ್ಯರೊಬ್ಬರು ಮೃತಪಟ್ಟಿರುವ ವಿಚಾರ ತಿಳಿದ ಕೂಡಲೆ ಅಗತ್ಯ ದಾಖಲೆ ಪಡೆದು ಮೃತಪಟ್ಟವರ ಹೆಸರನ್ನು ಪಟ್ಟಿಯಿಂದ ತಗೆಯಲು ಅಧಿಕಾರಿಗಳಿಗೆ ಸೂಚಿಸಿದರು.