27ರಿಂದ ಅರಮನೆ ಮೈದಾನದಲ್ಲಿ ವಿಶ್ವ ಹವ್ಯಕ ಸಮ್ಮೇಳನ: ಸಿಎಂ ಸೇರಿ ಹಲವು ಗಣ್ಯರು ಭಾಗಿ

bramana
Published on

ಬೆಂಗಳೂರು: ಶ್ರೀ ಅಖಿಲ ಹವ್ಯಕ ಮಹಾಸಭಾ ವತಿಯಿಂದ ಡಿ.27ರಿಂದ ಡಿ.29ರವರೆಗೆ ಅರಮನೆ ಮೈದಾನದ ರಾಯಲ್​ ಸೆನೆಟ್​ ಮತ್ತು ಗ್ರ್ಯಾಂಡ್​​ ಕ್ಯಾಸಲ್​ನಲ್ಲಿ ತೃತೀಯ "ವಿಶ್ವ ಹವ್ಯಕ' ಸಮ್ಮೇಳನ ನಡೆಯಲಿದೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಹಾಸಭಾ ಅಧ್ಯಕ್ಷ ಡಾ. ಗಿರಿಧರ್​ ಕಜೆ ಮಾತನಾಡಿ, ಮಹಾಸಭಾಕ್ಕೆ 82 ವರ್ಷ ತುಂಬಿದ ಅಂಗವಾಗಿ ಮೂರು ದಿನಗಳ ಕಾಲ ಚಾರಿತ್ರಿಕ ಸಮ್ಮೇಳನ ಆಯೋಜಿಸಲಾಗಿದೆ. ನಾಡಿನ ಸಂತರ ಸಾನ್ನಿಧ್ಯದಲ್ಲಿ, ದೇಶ-ವಿದೇಶಗಳ ಗಣ್ಯರ ಸಮ್ಮುಖದಲ್ಲಿ ವಿಶಿಷ್ಟ ಹವ್ಯಕ ಸಂಸತಿಯ ಸೊಬಗು ಅನಾವರಣವಾಗಲಿದೆ. 567 ಶ್ರೇಷ್ಠ ಸಾಧಕರಿಗೆ ಸನ್ಮಾನ, 300ಕ್ಕೂ ಅಧಿಕ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಹಳ್ಳಿಸೊಗಡಿನ ಅಲೆಮನೆ, 100ಕ್ಕೂ ಅಧಿಕ ಪಾರಂಪರಿಕ ವಸ್ತುಗಳ ಪ್ರದರ್ಶನ, ದೇಶಿ ಗೋ ಪ್ರದರ್ಶನ ಮತ್ತುವೈವಿದ್ಯಮಯ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಶುಕ್ರವಾರ (ಡಿ.27) ಬೆಳಗ್ಗೆ 9ಕ್ಕೆ ಶ್ರೀರಾಮಚಂದ್ರಾಪುರ ಮಠದ ಶ್ರೀ ರಾವೇಶ್ವರ ಭಾರತೀ ಸ್ವಾಮೀಜಿ ಸಮ್ಮೇಳನಕ್ಕೆ ಚಾಲನೆ ನೀಡಲಿದ್ದಾರೆ. ರಾವೇಂದ್ರ ಮಠದ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ, ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಯದುಗಿರಿ ಯತಿರಾದ ಮಠದ ಯತಿರಾಜ ಜೀಯರ್​, ಸುಬ್ರಹ್ಮಣ್ಯ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ ಜೋಷಿ, ಮಾಜಿ ಸಿಎಂ ಸದಾನಂದಗೌಡ, ಸಚಿವ ಮಂಕಾಳು ವೈದ್ಯ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿ ಸಂಸದರು, ಶಾಸಕರು ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

ಮಹಾಸಭಾ ಉಪಾಧ್ಯಕ್ಷ ಶ್ರೀಧರ್​ ಭಟ್​, ಪ್ರಧಾನ ಕಾರ್ಯದರ್ಶಿ ವೇಣು ವಿಘ್ನೇಶ್​,ಕಾರ್ಯದರ್ಶಿ ಪ್ರಶಾಂತ್​ ಭಟ್​, ಕೋಶಾಧಿಕಾರಿ ಕೃಷ್ಣಮೂರ್ತಿ ಭಟ್​ ಇದ್ದರು.

ಸಿಎಂ ಭಾಗಿ:

ಸಮ್ಮೇಳನದ 2ನೇ ದಿನವಾದ ಶನಿವಾರ(ಡಿ.28) ನಡೆಯುವ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಭಾಗಿಯಾಗಲಿದ್ದಾರೆ. ಶ್ರೀ ಮನ್ನೆಲೆಮಾವು ಮಠದ ಶ್ರೀ ಮಾಧವಾನಂದ ಭಾರತೀ ಸ್ವಾಮೀಜಿ, ಶ್ರೀರಾಮಕೃಷ್ಣ ಮಠದ ಸ್ವಾಮಿ ನಿತ್ಯಸ್ಥಾನಂದಜೀ ಮಹಾರಾಜ್​ ಸೇರಿ ವಿವಿಧ ಗಣ್ಯರು ಉಪಸ್ಥಿತಿರುವವರು. ಬ್ರಾಹ್ಮಣದಲ್ಲಿರುವ 20ಕ್ಕೂ ಅಧಿಕ ಒಳಪಂಗಡಗಳ ಮುಖಂಡರಗಳ ಜತೆಗೆ ಒಕ್ಕಲಿಗ, ಲಿಂಗಾಯತ ಮತ್ತು ಕುರುಬ ಸೇರಿ 25 ವಿವಿಧ ಸಮುದಾಯದ ಜನರನ್ನು ಸನ್ಮಾನಿಸಲಾಗುವುದು.ಬರೀ ಹವ್ಯಕ ಮಾತ್ರವಲ್ಲದೆ ಬೇರೆ ಸಮುದಾಯದ ಜನರು ಬರಬಹುದು. ಈ ಮೂಲಕ ಸೌಹರ್ದವನ್ನು ಜಗತ್ತಿಗೆ ತೋರಿಸಲಾಗುವುದು. ಭಾನುವಾರ(ಡಿ.29) ಸಮ್ಮೇಳನದ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಗಿರಿಧರ್​ ಕಜೆ ಹೇಳಿದರು.

ಸಮ್ಮೇಳನದ ವಿಶೇಷತೆ?

* 8 ಗೋಷ್ಠಿ, 18 ವಿಷಯ ಚಿಂತನ-ಮಂಥನ

*ಕೃಷಿ, ಶಿಕ್ಷಣ, ಮಿಲಿಟರಿ, ಧಾರ್ಮಿಕ ಸೇರಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 567 ಸಾಧಕರಿಗೆ ಹವ್ಯಕ ರತ್ನ ಪ್ರಶಸ್ತಿ ಪ್ರದಾನ

* ಸಹಸ್ರಚಂದ್ರ ಸ್ಮರಣ ಸಂಚಿಕೆ ಲೋಕಾರ್ಪಣೆ

* ಪ್ರತಿ ನಿತ್ಯ ಲೋಕಕಲ್ಯಾಣಕ್ಕಾಗಿ ಹವ್ಯ-ಯಜ್ಞ

* ಗಾಯತ್ರಿ ಥೀಮ್​ ಪಾರ್ಕ್​, 81 ಕಲಾವಿದರಿಂದ ನರ್ತನ ಸಂಕೀರ್ತನ

* ದೇಶಿ ಗೋ ಲೋಕ, ಯಾಗ ಮಂಡಲ ಕಲಾ ಪ್ರದರ್ಶನ, ವಾದ್ಯ ವೈಭವ

* ನಾಟ್ಯೋತ್ಸವ, ಭಕ್ತಿ ಭಜನೆ, ವಸ್ತು ಪ್ರದರ್ಶನ, ಬೈಕ್​ ರ್ಯಾಲಿ, ಒಂಟೆ ಸವಾರಿ

* ಗೊಂಬೆಗಳ ಆಟ&ಓಡಾಟ, ಗಣ್ಯರಿಂದ ದಿಕ್ಸೂಚಿ ಭಾಷಣ, ಆಹಾರ ಸ್ಪರ್ಧೆ, ರಂಗೋಲಿ ಕಲಾ ಸ್ಪರ್ಧೆ ಸೇರಿ ವಿವಿಧ ಕಾರ್ಯಕ್ರಮಗಳಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net