

Trump- Xi to meet: ಸುಮಾರು ಆರು ವರ್ಷಗಳ ಬಳಿಕ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ದಕ್ಷಿಣ ಕೊರಿಯಾದ ಬುಸಾನ್‌ನಲ್ಲಿ ಇಂದು ಪರಸ್ಪರ ಭೇಟಿಯಾಗಲಿದ್ದಾರೆ, ವ್ಯಾಪಾರ ಉದ್ವಿಗ್ನತೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಮತ್ತು ವಿಶ್ವದ ಎರಡು ದೊಡ್ಡ ಆರ್ಥಿಕತೆಗಳ ನಡುವೆ ಸ್ಥಿರತೆಯನ್ನು ಪುನಃಸ್ಥಾಪಿಸುವ ಗುರಿಯನ್ನು ಈ ಉನ್ನತ ಮಟ್ಟದ ಸಭೆ ಹೊಂದಿದೆ ಎಂದು ವರದಿಯಾಗಿದೆ.
ದಕ್ಷಿಣಾ ಕೊರಿಯಾಗೆ ಪ್ರಯಾಣ ಬೆಳೆಸುವ ಮುನ್ನ ಮಾಧ್ಯಮದವರೊಂದಿಗೆ ಮಾತನಾಡಿದ ಟ್ರಂಪ್, ಚೀನಾದೊಂದಿಗಿನ ಸಂಬಂಧವು ತುಂಬಾ ಉತ್ತಮವಾಗಿದ್ದು, ಫೆಂಟನಿಲ್ ವಿಷಯದಲ್ಲಿ ಅವರು ತಮಗೆ ನೆರವಾಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿಶ್ವದ ಅತಿದೊಡ್ಡ ಆರ್ಥಿಕತೆಗಳನ್ನು ಮುನ್ನಡೆಸುತ್ತಿರುವ ಇಬ್ಬರು ನಾಯಕರುಗಳು, ಏಷ್ಯಾ-ಪೆಸಿಫಿಕ್ ಆರ್ಥಿಕ ಸಹಕಾರ (APEC) ಶೃಂಗಸಭೆಯ ಪ್ರಮುಖ ಸ್ಥಳವಾದ ಜಿಯೊಂಗ್ಜುವಿನಿಂದ ಸುಮಾರು 47 ಮೈಲುಗಳಷ್ಟು ದೂರದಲ್ಲಿರುವ ಪ್ರಮುಖ ಬಂದರು ನಗರವಾದ ಬುಸಾನ್‌ನಲ್ಲಿ ಸ್ಥಳೀಯ ಸಮಯ ಬೆಳಿಗ್ಗೆ 11 ಗಂಟೆಗೆ ಭೇಟಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಎರಡೂ ಕಡೆಯವರು ಮಾತುಕತೆಗಳನ್ನು ಜೀವಂತವಾಗಿಡಲು ಪ್ರಯತ್ನಿಸಿದರೂ ಸಹ ವ್ಯಾಪಾರ ವಿವಾದಗಳು, ಫೆಂಟನಿಲ್ ರಫ್ತು ಮತ್ತು ಅಪರೂಪದ ಭೂಮಿಯ ಖನಿಜಗಳ ಮೇಲಿನ ನಿರ್ಬಂಧಗಳು ಉಭಯ ದೇಶಗಳ ನಡುವಿನ ಸಂಬಂಧಗಳನ್ನು ಹದಗೆಡಿಸಿವೆ.
ದಕ್ಷಿಣ ಕೊರಿಯಾದಲ್ಲಿ ರಾಜತಾಂತ್ರಿಕ ಭೋಜನಕೂಟದ ಸಂದರ್ಭದಲ್ಲಿ, ಟ್ರಂಪ್, ಚೀನಾದ ನಾಯಕ ಕ್ಸಿ ಜಿನ್‌ಪಿಂಗ್ ಅವರೊಂದಿಗಿನ ತಮ್ಮ ಶೃಂಗಸಭೆ ಅಧಿಕೃತ ಯೋಜನೆಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂದು ಬಹಿರಂಗಪಡಿಸಿದ್ದು, ವಿಶ್ವದ ಎರಡು ದೊಡ್ಡ ಆರ್ಥಿಕತೆಗಳ ನಡುವಿನ ವ್ಯಾಪಾರ ಮಾತುಕತೆಗಳಲ್ಲಿ ಮುಂಬರುವ ಪ್ರಗತಿಯ ಬಗ್ಗೆ ಸುಳಿವು ನೀಡಿದರು. ಇಬ್ಬರು ನಾಯಕರ ನಡುವಿನ ಸಭೆಗೆ ಎರಡು ಗಂಟೆಗಳಿಗಿಂತ ಕಡಿಮೆ ಸಮಯವನ್ನು ನಿಗದಿಪಡಿಸಿದ್ದರೂ ಸಹ, ಅದು ಮೂರರಿಂದ ನಾಲ್ಕು ಗಂಟೆಗಳ ಕಾಲ ನಡೆಯಬಹುದು ಎಂದು ಟ್ರಂಪ್ ಇತರ ನಾಯಕರಿಗೆ ತಿಳಿಸಿದ್ದಾರೆ ಎಂದು ವರದಿಯಾಗಿದೆ.
ಗುರುವಾರದ ಸಭೆಯ ಕಾರ್ಯಸೂಚಿಯು ಸುಂಕಗಳು, ಫೆಂಟನಿಲ್ ಕಳ್ಳಸಾಗಣೆ ಮತ್ತು ತಂತ್ರಜ್ಞಾನ ರಫ್ತು ಸೇರಿದಂತೆ ಇತ ಅನೇಕ ವಿಷಯಗಳನ್ನು ಒಳಗೊಳ್ಳುವ ನಿರೀಕ್ಷೆಯಿದೆ. ಫೆಂಟನಿಲ್ ಬಿಕ್ಕಟ್ಟಿನ ಕುರಿತು ಬೀಜಿಂಗ್‌ನ ಸಹಕಾರಕ್ಕೆ ಪ್ರತಿಯಾಗಿ ಚೀನಾದ ಸರಕುಗಳ ಮೇಲಿನ ಕೆಲವು ಸುಂಕಗಳನ್ನು ಕಡಿಮೆ ಮಾಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಟ್ರಂಪ್ ವಾಷಿಂಗ್ಟನ್‌ಗೆ ಮರಳಿದ ಬಳಿಕ ಕ್ಸಿ ಜಿನ್‌ಪಿಂಗ್ ದಕ್ಷಿಣ ಕೊರಿಯಾದಲ್ಲಿಯೇ ಉಳಿಯಲಿದ್ದು, ಏಷ್ಯಾ-ಪೆಸಿಫಿಕ್ ಆರ್ಥಿಕ ಸಹಕಾರ (APEC) ಶೃಂಗಸಭೆಯ ಸಂದರ್ಭದಲ್ಲಿ ಪ್ರಾದೇಶಿಕ ನಾಯಕರೊಂದಿಗೆ ಪ್ರತ್ಯೇಕ ಸಭೆಗಳನ್ನು ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.(ಏಜೆನ್ಸೀಸ್)