

ಬೆಂಗಳೂರು: ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಮೂರು ತಿಂಗಳ ಬಳಿಕ ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳಲು ಸಜ್ಜಾಗಿದ್ದಾರೆ. ಪ್ರವಾಸಿ ದಕ್ಷಿಣ ಆಫ್ರಿಕಾ ಎ ವಿರುದ್ಧ ಉದ್ಯಾನನಗರಿಯ ಬಿಸಿಸಿಐ ಶ್ರೇಷ್ಠತಾ ಕೇಂದ್ರದಲ್ಲಿ ಗುರುವಾರದಿಂದ ನಡೆಯಲಿರುವ ಮೊದಲ ಚತುರ್ದಿನ ಪಂದ್ಯದಲ್ಲಿ ಅವರು ಭಾರತ ಎ ತಂಡದ ನಾಯಕರಾಗಿ ಕಣಕ್ಕಿಳಿಯಲಿದ್ದಾರೆ.
ಪಂತ್ ಕಳೆದ ಜುಲೈ ಅಂತ್ಯದಲ್ಲಿ ನಡೆದ ಇಂಗ್ಲೆಂಡ್ ಪ್ರವಾಸದ 4ನೇ ಟೆಸ್ಟ್ ಪಂದ್ಯದ ವೇಳೆ ಪಾದದ ಮೂಳೆ ಮುರಿತಕ್ಕೊಳಗಾಗಿದ್ದರು. ನಂತರದಲ್ಲಿ ಅವರು ಶಸ್ತ್ರಚಿಕಿತ್ಸೆ ಇಲ್ಲದೆ ಚೇತರಿಕೆ ಕಂಡಿದ್ದಾರೆ. ಏಷ್ಯಾಕಪ್, ವಿಂಡೀಸ್ ವಿರುದ್ಧದ ತವರಿನ ಸರಣಿ, ಆಸೀಸ್ ಪ್ರವಾಸ ತಪ್ಪಿಸಿಕೊಂಡಿರುವ ಪಂತ್, ಮುಂಬರುವ ದಣ ಆಫ್ರಿಕಾ ವಿರುದ್ಧದ ಟೆಸ್ಟ್ಗೆ ಫಿಟ್ ಆಗುವ ದೃಷ್ಟಿಯಿಂದ ಈ ಸರಣಿಯ 2 ಪಂದ್ಯಗಳು ಮಹತ್ವದ್ದಾಗಿವೆ.
ಇತರ ಟೆಸ್ಟ್ ಆಟಗಾರರಾದ ಧ್ರುವ ಜುರೆಲ್, ಸಾಯಿ ಸುದರ್ಶನ್, ಎನ್. ಜಗದೀಶನ್, ಕನ್ನಡಿಗ ದೇವದತ್ ಪಡಿಕ್ಕಲ್ ಕೂಡ ಈ ಪಂದ್ಯದಲ್ಲಿ ಆಡಲಿದ್ದಾರೆ. ಯುವ ಬ್ಯಾಟರ್ ಆಯುಷ್ ಮಹಾತ್ರೆ, ರಜತ್ ಪಾಟೀದಾರ್, ಆಲ್ರೌಂಡರ್ ಹರ್ಷ್ ದುಬೆ, ಸ್ಪಿನ್ನರ್ಗಳಾದ ತನುಷ್ ಕೋಟ್ಯಾನ್, ಮಾನವ್ ಸುಥರ್, ವೇಗಿಗಳಾದ ಖಲೀಲ್ ಅಹ್ಮದ್, ಅಂಶುಲ್ ಕಾಂಬೋಜ್, ಯಶ್ ಠಾಕೂರ್ ಪಂದ್ಯದಲ್ಲಿ ಆಡಲಿರುವ ಇತರ ಪ್ರಮುಖರು. ಸರಣಿಯ 2ನೇ ಪಂದ್ಯಕ್ಕೆ ಕೆಎಲ್ ರಾಹುಲ್, ಮೊಹಮದ್ ಸಿರಾಜ್ ಕೂಡ ಭಾರತ ಎ ತಂಡವನ್ನು ಕೂಡಿಕೊಳ್ಳಲಿದ್ದಾರೆ.
ಟೆಸ್ಟ್ ತಂಡಕ್ಕೆ 2 ವರ್ಷಗಳ ಬಳಿಕ ಮರಳಿರುವ ಬ್ಯಾಟರ್ ಜುಬೇರ್ ಹಂಜಾ ದಕ್ಷಿಣ ಆಫ್ರಿಕಾ ಎ ಪರ ಆಡಲಿದ್ದಾರೆ. ಸರಣಿಯ 2ನೇ ಪಂದ್ಯಕ್ಕೆ ಟೆಸ್ಟ್ ನಾಯಕ ಟೆಂಬಾ ಬವುಮಾ ಕೂಡ ದಕ್ಷಿಣ ಆಫ್ರಿಕಾ ಎ ತಂಡವನ್ನು ಸೇರಿಕೊಳ್ಳಲಿದ್ದಾರೆ.
ಆರಂಭ: ಬೆಳಗ್ಗೆ 9.30