ಮಹಿಳೆಯರ ಏಕದಿನ ವಿಶ್ವಕಪ್: ಇಂದು ಭಾರತ-ಆಸ್ಟ್ರೇಲಿಯಾ ಮಿನಿಫೈನಲ್​!

web ind vs aus w
Published on

ಮುಂಬೈ: ತವರಿನ ಏಕದಿನ ಕ್ರಿಕೆಟ್​ ವಿಶ್ವಕಪ್​ ಟೂರ್ನಿಯಲ್ಲಿ ಅಸ್ಥಿರ ನಿರ್ವಹಣೆ ತೋರಿರುವ ನಡುವೆಯೂ ನಾಕೌಟ್​ ಹಂತಕ್ಕೇರುವಲ್ಲಿ ಯಶಸ್ವಿಯಾಗಿರುವ ಭಾರತ ತಂಡ ಗುರುವಾರ ನಡೆಯಲಿರುವ ಎರಡನೇ ಸೆಮಿಫೈನಲ್​ ಪಂದ್ಯದಲ್ಲಿ ಹಾಲಿ ಮತ್ತು 7 ಬಾರಿಯ ಚಾಂಪಿಯನ್​ ಆಸ್ಟ್ರೆಲಿಯಾ ತಂಡದ ಸವಾಲು ಎದುರಿಸಲಿದೆ. ಟೂರ್ನಿಯ ಬಲಿಷ್ಠ ತಂಡವೆನಿಸಿರುವ ಅಲಿಸ್ಸಾ ಹೀಲಿ ಪಡೆಯನ್ನು ಮಣಿಸಿ ಫೈನಲ್​ಗೇರಿದರೆ ಭಾರತ ತಂಡ "ಅರ್ಧ ಟ್ರೋಫಿ' ಗೆದ್ದಂತೆಯೇ ಆಗಲಿದೆ. ಚೊಚ್ಚಲ ಐಸಿಸಿ ಟ್ರೋಫಿ ಜಯಿಸುವ ಹರ್ಮಾನ್​ಪ್ರೀತ್​ ಕೌರ್​ ಬಳಗದ ಕನಸು ನನಸಾಗಿಸುವ ದೃಷ್ಟಿಯಿಂದ ನವಿ ಮುಂಬೈನ ಡಾ. ಡಿವೈ ಪಾಟೀಲ್​ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಮಿನಿಫೈನಲ್​ ಪಂದ್ಯ ಅತ್ಯಂತ ಮಹತ್ವದ್ದಾಗಿದೆ.

ಲೀಗ್​ ಹಂತದಲ್ಲಿ ಆರಂಭಿಕ 2 ಪಂದ್ಯಗಳ ಗೆಲುವಿನ ಬಳಿಕ ಸತತ 3 ಸೋಲು ಕಂಡಿದ್ದ ಭಾರತ, ನ್ಯೂಜಿಲೆಂಡ್​ ವಿರುದ್ಧದ ನಿರ್ಣಾಯಕ ಪಂದ್ಯ ಗೆದ್ದು ಸೆಮೀಸ್​ ಸ್ಥಾನ ಖಾತ್ರಿಪಡಿಸಿಕೊಂಡಿತ್ತು. ಬಾಂಗ್ಲಾ ವಿರುದ್ಧದ ಕೊನೇ ಲೀಗ್​ ಪಂದ್ಯ ಮಳೆಯಿಂದ ರದ್ದುಗೊಂಡಿತ್ತು. ಮತ್ತೊಂದೆಡೆ ಆಸೀಸ್​ ಲೀಗ್​ ಹಂತದಲ್ಲಿ 6 ಪಂದ್ಯಗಳಲ್ಲಿ ಗೆದ್ದಿದ್ದರೆ, 1 ಪಂದ್ಯ ಮಳೆಯಿಂದ ರದ್ದುಗೊಂಡಿತ್ತು. ಲೀಗ್​ ಹಂತದಲ್ಲಿ ಆಸೀಸ್​ ವಿರುದ್ಧದ ಪಂದ್ಯದಲ್ಲಿ ಭಾರತ 330 ರನ್​ ಪೇರಿಸಿದ್ದರೂ, ಅದನ್ನು ರಸಿಕೊಳ್ಳುವಲ್ಲಿ ವಿಲವಾಗಿತ್ತು. ಆಗ ಮಾಡಿದ್ದ ಕೆಲ ತಪ್ಪುಗಳನ್ನು ಭಾರತ ಈ ಬಾರಿ ಸುಧಾರಿಸಿಕೊಂಡರೆ ಗೆಲುವು ಕಠಿಣವಲ್ಲ.

ತಂಡ ಸಂಯೋಜನೆ ಗೊಂದಲ: ಭಾರತ ಟೂರ್ನಿಯುದ್ದಕ್ಕೂ ಆಡುವ 11ರ ಬಳಗದ ಸಂಯೋಜನೆಯ ಗೊಂದಲ ಎದುರಿಸುತ್ತ ಬಂದಿದೆ. ಆರಂಭಿಕ ಬ್ಯಾಟರ್​ ಪ್ರತಿಕಾ ರಾವಲ್​ ಗಾಯದಿಂದಾಗಿ ಸೆಮೀಸ್​ಗೆ ಅಲಭ್ಯರಾಗಿರುವುದರಿಂದ ಭಾರತ ಇದೀಗ ಮತ್ತೊಮ್ಮೆ ಗೊಂದಲದಲ್ಲಿದೆ. ಬದಲಿ ಬ್ಯಾಟರ್​ ಆಗಿ ಶೆಫಾಲಿ ವರ್ಷ ಅವರನ್ನು ಸೇರಿಸಿಕೊಂಡಿದ್ದರೂ, 11ರ ಬಳಗದಲ್ಲಿ ಕಣಕ್ಕಿಳಿಸುವ ಖಾತ್ರಿ ಇಲ್ಲ. ಶೆಫಾಲಿ ಬಿರುಸಿನಾಟ ಎದುರಾಳಿ ಮೇಲೆ ಒತ್ತಡ ಹೇರಬಹುದಾದರೂ, ಸ್ಮೃತಿ ಮಂದನಾ ಜತೆಗೆ ಅವರ ಆರಂಭಿಕ ಜತೆಯಾಟದ ದಾಖಲೆ ಉತ್ತಮವಾಗಿಲ್ಲ. ಹೀಗಾಗಿ ಹರ್ಲೀನ್​ ಡಿಯೋಲ್​ಗೆ ಆರಂಭಿಕ ಆಟಗಾರ್ತಿಯಾಗಿ ಬಡ್ತಿ ನೀಡಿ, 6ನೇ ಬೌಲರ್​ ಕಣಕ್ಕಿಳಿಸುವ ಚಿಂತನೆ ನಡೆದಿದೆ. ಮತ್ತೊಂದೆಡೆ ಸ್ನೇಹಾ ರಾಣಾ ಬದಲಿಗೆ ಎಡಗೈ ಸ್ಪಿನ್ನರ್​ ರಾಧಾ ಯಾದವ್​ರನ್ನು ಆಡಿಸುವ ಸಾಧ್ಯತೆಗಳಿವೆ. ಕೊನೇ ಲೀಗ್​ ಪಂದ್ಯದಿಂದ ಸ್ನೇಹಾಗೆ ವಿಶ್ರಾಂತಿ ನೀಡಿದಾಗ, ಬಾಂಗ್ಲಾ ಎದುರು ರಾಧಾ ಬೌಲಿಂಗ್​ನಲ್ಲಿ ಮಿಂಚಿದ್ದರು. ಅತ್ತ ಸ್ನೇಹಾ, ಕೊನೇ 3 ಪಂದ್ಯಗಳಲ್ಲಿ 1 ವಿಕೆಟ್​ಗೆ 201 ರನ್​ ಬಿಟ್ಟುಕೊಟ್ಟಿದ್ದರು.

ಆಸ್ಟ್ರೆಲಿಯಾ ತಂಡಕ್ಕೂ ಗಾಯದ ಹಿನ್ನಡೆಗಳಿದ್ದು, ನಾಯಕಿ ಅಲಿಸ್ಸಾ ಹೀಲಿ ಸೆಮೀಸ್​ನಲ್ಲಿ ಆಡುವ ಬಗ್ಗೆ ಇನ್ನೂ ಖಾತ್ರಿ ದೊರೆತಿಲ್ಲ. ಅವರು ಲೀಗ್​ನಲ್ಲಿ ಗಾಯದಿಂದಾಗಿ ಇಂಗ್ಲೆಂಡ್​, ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯಗಳನ್ನು ತಪ್ಪಿಸಿಕೊಂಡಿದ್ದರು. ಟೂರ್ನಿಯಲ್ಲಿ 2 ಶತಕ ಸಿಡಿಸಿರುವ ಅಲಿಸ್ಸಾ ಹೀಲಿ ಲಭ್ಯರಾದರೆ ಆಸೀಸ್​ ಬಲ ಹೆಚ್ಚಲಿದೆ. ಆಶ್ಲೆ ಗಾರ್ಡ್​ನರ್​, ಆನ್ನಾಬೆಲ್​ ಸುದರ್​ಲ್ಯಾಂಡ್​ ಆಲ್ರೌಂಡ್​ ನಿರ್ವಹಣೆ ಜತೆಗೆ ಅಲನಾ ಕಿಂಗ್​ ಸ್ಪಿನ್​ ದಾಳಿಯೂ ಆಸೀಸ್​ ಅಜೇಯ ಓಟಕ್ಕೆ ನೆರವಾಗಿದೆ.

*ಮುಖಾಮುಖಿ: 60

ಭಾರತ: 11

ಆಸ್ಟ್ರೆಲಿಯಾ: 49

*ವಿಶ್ವಕಪ್​ನಲ್ಲಿ: 14

ಭಾರತ: 3

ಆಸ್ಟ್ರೆಲಿಯಾ: 11

*ಆರಂಭ: ಮಧ್ಯಾಹ್ನ 3.00

*ನೇರಪ್ರಸಾರ: ಸ್ಟಾರ್​ ಸ್ಪೋರ್ಟ್ಸ್​, ಜಿಯೋ ಹಾಟ್​ಸ್ಟಾರ್​.

ಹರ್ಮಾನ್​ ಪಡೆಗೆ ಇತಿಹಾಸದ ಸ್ಫೂರ್ತಿ

ಭಾರತಕ್ಕೆ 2017ರ ವಿಶ್ವಕಪ್​ನಲ್ಲಿ ಸೆಮಿಫೈನಲ್​ ಹಂತದಲ್ಲೇ ಆಸ್ಟ್ರೆಲಿಯಾವನ್ನು ಮಣಿಸಿ ಫೈನಲ್​ಗೇರಿದ್ದು, ಈ ಬಾರಿ ಸ್ಫೂರ್ತಿಯ ಅಂಶವಾಗಿದೆ. ಆಗ ಹರ್ಮಾನ್​ಪ್ರೀತ್​ 115 ಎಸೆತಗಳಲ್ಲಿ ಅಜೇಯ 171 ರನ್​ ಸಿಡಿಸಿ ಆಸೀಸ್​ ತಂಡವನ್ನು ಫೈನಲ್​ಗೇರದಂತೆ ತಡೆದಿದ್ದರು. 8 ವರ್ಷಗಳ ಹಿಂದಿನ ಅದೇ ಬಲಿಷ್ಠ ನಿರ್ವಹಣೆಯನ್ನು ಪುನರಾವರ್ತಿಸಿದರೆ ಭಾರತ, ತವರಿನ ವಿಶ್ವಕಪ್​ನಲ್ಲೂ ಫೈನಲ್​ಗೇರಿದ ಅಮೋಘ ಸಾಧನೆ ಮಾಡಬಹುದಾಗಿದೆ. ಪ್ರಮುಖವಾಗಿ ಹರ್ಮಾನ್​ಪ್ರೀತ್​ ಲಯಕ್ಕೆ ಮರಳಬೇಕಿದೆ. ಸ್ಮೃತಿ 1 ಶತಕ, 2 ಅರ್ಧಶತಕ ಸಹಿತ 365 ರನ್​ ಸಿಡಿಸಿ ಭರ್ಜರಿ ಫಾರ್ಮ್​ನಲ್ಲಿರುವುದು ಭಾರತಕ್ಕೆ ಪ್ಲಸ್​ ಪಾಯಿಂಟ್​.

*3: ಭಾರತ ತಂಡ 3ನೇ ಬಾರಿ ಏಕದಿನ ವಿಶ್ವಕಪ್​ ಫೈನಲ್​ಗೇರುವ ಕನಸಿನಲ್ಲಿದೆ. ಈ ಮುನ್ನ 2005 ಮತ್ತು 2017ರಲ್ಲಿ ಈ ಸಾಧನೆ ಮಾಡಿತ್ತು.

*10: ಈ ಹಿಂದಿನ 12 ವಿಶ್ವಕಪ್​ಗಳಲ್ಲಿ ಆಸೀಸ್​ 9 ಬಾರಿ ಫೈನಲ್​ಗೇರಿದ್ದು, ಈ ಬಾರಿ 10ನೇ ಫೈನಲ್​ ಗುರಿಯಲ್ಲಿದೆ. ಈ ಹಿಂದೆ 1993, 2009, 2017ರಲ್ಲಿ ಮಾತ್ರ ಫೈನಲ್​ಗೇರಿರಲಿಲ್ಲ.

ಕಾಡುತ್ತಿದೆ ಮಳೆ ಭೀತಿ

ಲೀಗ್​ನಲ್ಲಿ ಐದು ಪಂದ್ಯಗಳು ಮಳೆಯಿಂದ ರದ್ದುಗೊಂಡಿದ್ದರೆ, 2ನೇ ಸೆಮೀಸ್​ಗೂ ಮಳೆ ಅಡಚಣೆ ತರುವ ಸಾಧ್ಯತೆಗಳಿವೆ. ಆದರೆ ಪಂದ್ಯಕ್ಕೆ ಮೀಸಲು ದಿನದ (ಶುಕ್ರವಾರ) ಅನುಕೂಲವಿದೆ. ಮೀಸಲು ದಿನವೂ ಫಲಿತಾಂಶ ಬಾರದಿದ್ದರೆ ಅಂಕಪಟ್ಟಿಯಲ್ಲಿ ಅತ್ಯುತ್ತಮ ಸ್ಥಾನ ಪಡೆದಿರುವ ತಂಡ ಫೈನಲ್​ಗೇರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net