

ವಾಷಿಂಗ್ಟನ್: ತಮ್ಮ ಎರಡು ಟ್ವೀಟ್ಗಳನ್ನು ಫ್ಯಾಕ್ಟ್ಚೆಕ್ ನಡೆಸಿದ್ದಕ್ಕೆ ಆಕ್ರೋಶಗೊಂಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾಮಾಜಿಕ ಜಾಲತಾಣ ವೇದಿಕೆಗಳನ್ನು ರದ್ದುಗೊಳಿಸುವುದಾಗಿ ಬುಧವಾರ ಬೆದರಿಕೆ ಹಾಕಿದ್ದಾರೆ.
ಟ್ರಂಪ್ ಅವರು ಮಾಡಿದ ಎರಡು ಟ್ವೀಟ್ ಆಧಾರರಹಿತವಾಗಿದ್ದು, ತಪ್ಪು ಮಾಹಿತಿಯನ್ನು ಹರಡಿದ್ದಾರೆಂದು ಎಂದು ಟ್ವಿಟರ್ ಆರೋಪಿಸಿದೆ. ಇದರ ಬೆನ್ನಲ್ಲೇ ಟ್ವೀಟ್ ಮಾಡಿರುವ ಟ್ರಂಪ್, ಸಂಪ್ರದಾಯವಾದಿಗಳ ಧ್ವನಿಯ ಬಗ್ಗೆ ಸಾಮಾಜಿಕ ಜಾಲತಾಣ ವೇದಿಕೆ ಯಾವಾಗಲು ಸಂಪೂರ್ಣ ಮೌನವಾಗಿರುತ್ತದೆ ಎಂದು ರಿಪಬ್ಲಿಕನ್ಸ್ ಭಾವಿಸಿದೆ. ಇದು ಸಂಭವಿಸಲು ಅನುಮತಿ ನೀಡುವ ಮುನ್ನವೇ ನಾವು ಬಲವಾಗಿ ನಿಯಂತ್ರಿಸಬೇಕಾಗುತ್ತದೆ ಅಥವಾ ಸಂಪೂರ್ಣವಾಗಿ ಜಾಲತಾಣ ವೇದಿಕೆಗಳನ್ನು ಮುಚ್ಚಬೇಕಿದೆ ಎಂದು ಬೆದರಿಕೆ ಹಾಕಿದ್ದಾರೆ.
ಟ್ರಂಪ್ ಮಂಗಳವಾರ ಎರಡು ಟ್ವೀಟ್ಗಳನ್ನು ಮಾಡಿದ್ದರು. ಅದರಲ್ಲಿ ಮೇಲ್ ಇನ್ ಮತದಾನವು ವಂಚನೆ ಹಾಗೂ ಕೈಚಳಕದ ಚುನಾವಣೆಗೆ ದಾರಿ ಮಾಡಿಕೊಡಲಿದೆ ಎಂದು ಆರೋಪಿಸಿದ್ದರು. ಹೀಗಾಗಿ ಯಾವುದೇ ಪುರಾವೆ ಇಲ್ಲದೇ ಟ್ವೀಟ್ ಮಾಡಿದ್ದಕ್ಕೆ ಆಧಾರರಹಿತ ಎಂದು ಟ್ರಂಪ್ ಟ್ವೀಟ್ ಅನ್ನು ಟ್ವಿಟರ್ ತಳ್ಳಿ ಹಾಕಿದೆ.
ಬುಧವಾರ ಮತ್ತೊಮ್ಮೆ ಟ್ವೀಟ್ ಮಾಡಿರುವ ಟ್ರಂಪ್ ಯಾವುದೇ ಕಾರಣಕ್ಕೂ ಮೇಲ್ ಇನ್ ಬ್ಯಾಲಟ್ಸ್ ದೊಡ್ಡ ಪ್ರಮಾಣದಲ್ಲಿ ನಮ್ಮ ದೇಶದಲ್ಲಿ ಬೇರೂರಲು ಬಿಡುವುದಿಲ್ಲ. ಮೇಲ್ ಇನ್ ಮತದಾನದಿಂದ ವಂಚನೆ ಹಾಗೂ ಪೋರ್ಜರಿಗೆ ಮುಕ್ತ ಅವಕಾಶ ಸಿಗಲಿದೆ ಎಂದು ದೂರಿದರು. ಯಾರು ಹೆಚ್ಚು ಮೋಸ ಮಾಡುತ್ತಾರೋ ಅವರು ಗೆಲ್ಲುತ್ತಾರೆ. ಹೀಗಾಗಿ ನಿಮ್ಮ ನಡೆಯನ್ನು ಸ್ವಚ್ಛಗೊಳಿಸಿಕೊಳ್ಳಿ ಎಂದು ಟ್ರಂಪ್ ಜಾಲತಾಣಗಳಿಗೆ ಟಾಂಗ್ ನೀಡಿದ್ದರು.
ಕಳೆದ 2016ರ ಚುನಾವಣೆಯಲ್ಲೂ ಸಾಮಾಜಿಕ ಜಾಲತಾಣ ಮೂಗು ತೂರಿಸಿತ್ತು. ಏನೆಲ್ಲಾ ಮಾಡಲು ಪ್ರಯತ್ನಿಸಿದರು ಎಂಬುದನ್ನು ನಾವು ನೋಡಿದ್ದೇವೆ. ಅದರಲ್ಲಿ ಅವರು ವಿಫಲ ಕೂಡ ಆದರು. ಈ ರೀತಿ ಮತ್ತೊಮ್ಮೆ ಆಗಲು ಬಿಡುವುದಿಲ್ಲ ಎಂದು ಕಿಡಿಕಾರಿದ್ದಾರೆ. (ಏಜೆನ್ಸೀಸ್)