ಟ್ರಂಪ್ ಸುಂಕ ನೀತಿ: ಬ್ರಿಕ್ಸ್ ದೇಶಗಳ ವಿರುದ್ಧ ಹೇರಿರುವ ನಿರ್ಬಂಧಗಳನ್ನು ರಷ್ಯಾ, ಚೀನಾ ವಿರೋಧಿಸುತ್ತವೆ ಎಂದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್| Vladimir Putin

Vladimir Putin 31
Published on

Vladimir Putin: ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಅಡ್ಡಿಯಾಗುವ ತಾರತಮ್ಯ ನಿರ್ಬಂಧಗಳನ್ನು  ರಷ್ಯಾ ಮತ್ತು ಚೀನಾ ವಿರೋಧಿಸುತ್ತವೆ ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.

ಚೀನಾ ಸುದ್ದಿ ಸಂಸ್ಥೆಯೊಂದಿಗೆ ಸಂದರ್ಶನದಲ್ಲಿ ಮಾತನಾಡಿದ ಪುಟಿನ್​​, ಮುಖ್ಯವಾದ ಮೂಲಸೌಕರ್ಯ ಯೋಜನೆಗಳಿಗೆ ಹೆಚ್ಚುವರಿ ಸಂಪನ್ಮೂಲಗಳನ್ನು ಒದಗಿಸಲು ರಷ್ಯಾ ಮತ್ತು ಚೀನಾ ವಿಶೇಷ ಗಮನ ಹರಿಸುತ್ತಿವೆ. ಅಲ್ಲದೆ, ಜಾಗತಿಕ ಸವಾಲುಗಳನ್ನು ಎದುರಿಸಲು ಬ್ರಿಕ್ಸ್‌ನ ಸಾಮರ್ಥ್ಯವನ್ನು ಬಲಪಡಿಸುವಲ್ಲಿ ಒಗ್ಗಟ್ಟಿನಿಂದ ನಿಲ್ಲುತ್ತವೆ ಎಂದು ತಿಳಿಸಿದ್ದಾರೆ.

ಬ್ರಿಕ್ಸ್ ಸದಸ್ಯ ದೇಶಗಳಿಗೆ ಸಾಮಾಜಿಕ ಆರ್ಥಿಕ ಅಭಿವೃದ್ಧಿಗೆ ಅಡ್ಡಿಯಾಗುವ ತಾರತಮ್ಯದ ನಿರ್ಬಂಧಗಳ ವಿರುದ್ಧ ರಷ್ಯಾ ಮತ್ತು ಚೀನಾ ಬಲವಾದ ನಿಲುವನ್ನು ತೆಗೆದುಕೊಳ್ಳುತ್ತವೆ ಎಂದು ರಷ್ಯಾದ ಪುಟಿನ್​ ಹೇಳಿದ್ದಾರೆ.

ಮುಂದುವರೆದು ಮಾತನಾಡಿದ ಪುಟಿನ್, ರಷ್ಯಾ ಮತ್ತು ಚೀನಾ ಅಂತರರಾಷ್ಟ್ರೀಯ ಹಣಕಾಸು ನಿಧಿ ಮತ್ತು ವಿಶ್ವ ಬ್ಯಾಂಕ್ ಸುಧಾರಣೆಗಳನ್ನು ಬೆಂಬಲಿಸುತ್ತವೆ ಎಂದು ತಿಳಿಸಿದರು. ಮುಕ್ತತೆ ಮತ್ತು ನಿಜವಾದ ಸಮಾನತೆ ತತ್ವಗಳ ಮೇಲೆ ಹೊಸ ಹಣಕಾಸು ವ್ಯವಸ್ಥೆಯನ್ನು ನಿರ್ಮಿಸಬೇಕು. ಇದು ಎಲ್ಲಾ ದೇಶಗಳ ಸಾಧನಗಳಿಗೆ ಸಮಾನ ಮತ್ತು ತಾರತಮ್ಯವಿಲ್ಲದ ಪ್ರವೇಶವನ್ನು ಒದಗಿಸುತ್ತದೆ ಮತ್ತು ಜಾಗತಿಕ ಆರ್ಥಿಕತೆಯಲ್ಲಿ ಬ್ರೀಕ್ಸ್​ ಸದಸ್ಯ ರಾಷ್ಟ್ರಗಳ ನೈಜ ಸ್ಥಾನವನ್ನು ಪ್ರತಿಬಿಂಬಿಸುತ್ತದೆ ಎಂದು ಪುಟಿನ್​ ಆಭಿಪ್ರಾಯಪಟ್ಟಿದ್ದಾರೆ.

ನಾವು ಎಲ್ಲಾ ಮಾನವೀಯತೆಯ ಪ್ರಗತಿಯನ್ನು ಬಯಸುತ್ತೇವೆ. ರಷ್ಯಾ ಮತ್ತು ಚೀನಾ ಈ ಉದಾತ್ತ ಗುರಿಯತ್ತ ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತವೆ. ನಮ್ಮ ರಾಷ್ಟ್ರಗಳ ಸಮೃದ್ಧಿಯನ್ನು ಖಚಿತಪಡಿಸಿಕೊಳ್ಳಲು ನಮ್ಮ ಪ್ರಯತ್ನಗಳನ್ನು ಜೋಡಿಸುತ್ತವೆ ಎಂದು ನನಗೆ ವಿಶ್ವಾಸವಿದೆ ಎಂದು ಪುಟಿನ್​ ಹೇಳಿದ್ದಾರೆ.

ಎಸ್‌ಸಿಒ ಟಿಯಾಂಜಿನ್ ಶೃಂಗಸಭೆಯು 10 ಸದಸ್ಯರ ಸಂಸ್ಥೆಗೆ ಹೊಸ ಆವೇಗವನ್ನು ತುಂಬುತ್ತದೆ. ಅಲ್ಲದೆ, ಸಮಕಾಲೀನ ಸವಾಲುಗಳು ಮತ್ತು ಬೆದರಿಕೆಗಳಿಗೆ ಪ್ರತಿಕ್ರಿಯಿಸುವ ಸಾಮರ್ಥ್ಯವನ್ನು ಬಲಪಡಿಸುತ್ತದೆ. ಯುರೇಷಿಯನ್ ಜಾಗದಲ್ಲಿ ಒಗ್ಗಟ್ಟನ್ನು ಬಲಪಡಿಸುತ್ತದೆ ಎಂದು ರಷ್ಯಾ ಅಧ್ಯಕ್ಷರು ತಿಳಿಸಿದ್ದಾರೆ.

ಬ್ರಿಕ್ಸ್ ಬ್ರೆಜಿಲ್, ರಷ್ಯಾ, ಭಾರತ, ಚೀನಾ ಮತ್ತು ದಕ್ಷಿಣ ಆಫ್ರಿಕಾಗಳನ್ನು ಒಳಗೊಂಡಿರುವ ಸಂಘಟನೆಯಾಗಿದೆ. ಸೌದಿ ಅರೇಬಿಯಾ, ಇರಾನ್, ಇಥಿಯೋಪಿಯಾ, ಈಜಿಪ್ಟ್, ಅರ್ಜೆಂಟೀನಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ಬ್ರಿಕ್ಸ್ ಅನ್ನು ಅದರ ಹೊಸ ಸದಸ್ಯರಾಗಿ ಸೇರಿಕೊಂಡಿವೆ.

ರಷ್ಯಾ ಅಧ್ಯಕ್ಷ ಪುಟಿನ್​ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್​ರೊಂದಿಗೆ ಮಾತುಕತೆ ನಡೆಸುವುದರ ಜೊತೆಗೆ, ಎರಡನೇ ಮಹಾಯುದ್ಧದಲ್ಲಿ ಜಪಾನ್ ವಿರುದ್ಧದ ಗೆಲುವಿನ 80 ನೇ ವಾರ್ಷಿಕೋತ್ಸವದ ಸ್ಮರಣಾರ್ಥವಾಗಿ ಚೀನಾದ ವಿ-ಡೇ ಪರೇಡ್‌ನಲ್ಲಿಯೂ ಭಾಗವಹಿಸಲಿದ್ದಾರೆ.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net