ಹದಗೆಟ್ಟಿದ ಟ್ರಂಪ್ ಆರೋಗ್ಯ ಸ್ಥಿತಿ! ವೈದ್ಯರಿಂದ ಕೇಳಿಬಂತು ಎಚ್ಚರಿಕೆಯ ಗಂಟೆ | Trump Health

ವಿಜಯವಾಣಿ (38)
Published on

Trump Health: ಎರಡು ರಾಷ್ಟ್ರಗಳ ನಡುವೆ ಸಂಘರ್ಷ ಅಥವಾ ಯುದ್ಧವಿದ್ದರೆ ಅಲ್ಲಿ ಕದನ ವಿರಾಮ ತರಲು ಮಧ್ಯಸ್ಥಿಕೆ ವಹಿಸಲು ಮುಂದಾಗುವ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​, ಇತರ ದೇಶಗಳ ಮೇಲೆ ಸುಂಕ ಸಮರ ಸಾಧಿಸುವ ಪರಿ ನಿಜಕ್ಕೂ ಬೇಸರದ ಸಂಗತಿ. ಸದಾ ತನ್ನ ಕಟು ಮಾತು, ನಿರ್ಧಾರಗಳಿಂದ ಮಾಧ್ಯಮಗಳಲ್ಲಿ ಸದ್ದು ಮಾಡುವ ಟ್ರಂಪ್​, ಈ ಬಾರಿ ತಮ್ಮ ಅನಾರೋಗ್ಯ ವಿಚಾರಗಳಿಂದ ಭಾರೀ ಚರ್ಚೆಗೆ ಗ್ರಾಸವಾಗಿದ್ದಾರೆ.

ಟ್ರಂಪ್​ ಅನಾರೋಗ್ಯ

ಕಳೆದ ಕೆಲವು ದಿನಗಳಿಂದ ಟ್ರಂಪ್ ಅನಾರೋಗ್ಯಕ್ಕೆ ಸಂಬಂಧಿಸಿದಂತೆ ಜಾಲತಾಣಗಳಲ್ಲಿ ಸಾಕಷ್ಟು ವದಂತಿಗಳು ಹರಿದಾಡುತ್ತಿವೆ. ಈ ಸುದ್ದಿ, ವರದಿಗಳಿಗೆ ಪುಷ್ಠಿ ನೀಡಿದ್ದು, ಟ್ರಂಪ್ ಅವರ ಕೈಯಲ್ಲಿ ಪತ್ತೆಯಾದ ಗಾಯದ ಗುರುತು. ಮತ್ತು ಅವರ ಕಾಲುಗಳಲ್ಲಿ ಕಂಡುಬಂದ ಊತ. ಇದರೊಂದಿಗೆ ಸಾರ್ವಜನಿಕರ ಮುಂದೆ ಕಾಣಿಸಿಕೊಳ್ಳದ ಟ್ರಂಪ್​, ಯಾವುದೇ ಜನಪರ ಕಾರ್ಯಕ್ರಮಗಳಿಗೆ ಹಾಜರಾಗುತ್ತಿಲ್ಲ. ಸದ್ಯ ಇವೆಲ್ಲವೂ ಈ ವದಂತಿಗಳು ನಿಜವೇ ಎಂದು ಒತ್ತಿ ಹೇಳುತ್ತಿವೆ. ಈ ಮಧ್ಯೆ ಟ್ರಂಪ್​ ಆರೋಗ್ಯಕ್ಕೆ ಸಂಬಂಧಿಸಿದಂತೆ ವೈದ್ಯರೊಬ್ಬರು ಎಚ್ಚರಿಕೆ ನೀಡಿದ್ದು, ಒಂದಷ್ಟು ಬಹುಮುಖ್ಯ ಸಲಹೆಗಳನ್ನೇ ನೀಡಿದ್ದಾರೆ.

ವೈದ್ಯರ ಮಾತೇನು?

ಆದಾಗ್ಯೂ, ಟ್ರಂಪ್ ತಮ್ಮ ಮೊಮ್ಮಗ ಮತ್ತು ಮೊಮ್ಮಗಳ ಜತೆಗಿರುವ ಫೋಟೋಗಳು ಹೊರಬಂದಿವೆ. ಅವರು ಶ್ವೇತಭವನದ ದಕ್ಷಿಣ ಬ್ಲಾಕ್‌ನಲ್ಲಿ ತಮ್ಮ ಮೊಮ್ಮಕ್ಕಳೊಂದಿಗೆ ಆಟವಾಡುತ್ತಿರುವ ಫೋಟೋಗಳು ಹರಿದಾಡಿವೆ. ಇದು ಕೆಲವು ವದಂತಿಗಳಿಗೆ ಅಂತ್ಯ ಹಾಡಿದಂತೆ ಮೇಲ್ನೋಟಕ್ಕೆ ಕಂಡುಬಂದಿದ್ದೇ ಆದರೂ ಅವರ ಕೈಮೇಲಿರುವ ಗಾಯಗಳು ಬೇರೆಯೇ ವಿಷಯವನ್ನು ಒತ್ತಿ ಹೇಳಿದೆ. ಮತ್ತು ಈ ಫೋಟೋಗಳನ್ನು ಯಾವ ಸಮಯದಲ್ಲಿ ತೆಗೆದುಕೊಳ್ಳಲಾಗಿದೆ ಎಂಬ ವಿಷಯ ಮುಖ್ಯ ಎಂಬ ಮಾತುಗಳು ಸಹ ಕೇಳಿಬಂದಿವೆ.

ಎಚ್ಚರಿಕೆಯ ಗಂಟೆ

ಪ್ರಸ್ತುತ, ಟ್ರಂಪ್ ಅವರ ಆರೋಗ್ಯ ಸಮಸ್ಯೆ ಕುರಿತು ಹರಿದಾಡುತ್ತಿರುವ ವದಂತಿ ಬಗ್ಗೆ ಪ್ರತಿಕ್ರಿಯಿಸಿರುವ ಅಮೇರಿಕನ್ ವೈದ್ಯೆ ಮಿಮಿ ಕಾಂಗ್, "ಇದು ನಿರ್ಣಾಯಕ ವೀನಸ್ ಇನ್‌ಸಫಿಷಿಯೆನ್ಸಿ (ವೀನಸ್ ಡ್ಯಾಮೇಜ್). ಇದನ್ನು ವೈದ್ಯಕೀಯ ಪರಿಭಾಷೆಯಲ್ಲಿ ಸಿವಿಐ ಎಂದು ಕರೆಯಲಾಗುತ್ತದೆ. ಸಿವಿಐ ಸಾಮಾನ್ಯ. ಅಮೆರಿಕದಲ್ಲಿ ಪ್ರತಿ ಮೂರು ಜನರಲ್ಲಿ ಒಬ್ಬರಿಗೆ ಈ ಸಮಸ್ಯೆ ಕಾಣಿಸುತ್ತದೆ. ಕೆಲವು ಸಂದರ್ಭಗಳಲ್ಲಿ, ಇದು ಸಣ್ಣ ಸಮಸ್ಯೆಯಾಗಿರಬಹುದು. ಅದೇ ಸಮಯದಲ್ಲಿ, ಇದು ಗಂಭೀರವಾಗಿಯೂ ಕಾಡಬಹುದು. ಕಾಲುಗಳಲ್ಲಿ ಊತ, ಊತ ದೊಡ್ಡದಾಗಿದ್ದರೆ, ಚರ್ಮ ದಪ್ಪವಾಗುತ್ತದೆ. ಸುಟ್ಟಂತೆ ಆಗಿರುತ್ತದೆ, ಚರ್ಮ ಒಣಗುತ್ತದೆ. ಸ್ಥಿತಿ ಹದಗೆಟ್ಟರೆ, ಕಾಲುಗಳ ಮೇಲೆ ವಾಸಿಯಾಗದ ಗಾಯಗಳು ಉಂಟಾಗುತ್ತವೆ. ಸ್ಥಿತಿ ಇನ್ನಷ್ಟು ಹದಗೆಟ್ಟರೆ, ಕಾಲು ಅಥವಾ ತೋಳನ್ನು ಕತ್ತರಿಸಬೇಕಾಗುತ್ತದೆ. ಇವು ಕಾಯಿಲೆಯ ರೋಗಲಕ್ಷಣಗಳು" ಎಂದು ಹೇಳಿದ್ದಾರೆ.

ವದಂತಿಗಳಿಗೆ ಶ್ವೇತಭವನ ತಿರುಗೇಟು

ಮತ್ತೊಂದೆಡೆ, ಇದೇನು ದೊಡ್ಡ ಸಮಸ್ಯೆಯಲ್ಲ. ಟ್ರಂಪ್ ಅವರ ಆರೋಗ್ಯ ಚೆನ್ನಾಗಿದೆ ಎಂದು ಶ್ವೇತಭವನ ವದಂತಿಗಳನ್ನು ತಳ್ಳಿಹಾಕಿದೆ. ಅಮೆರಿಕ ಅಧ್ಯಕ್ಷರು, ಪ್ರತಿದಿನ ಎಲ್ಲರೊಂದಿಗೂ ಕೈಕುಲುಕಿ ಮಾತನಾಡುವುದರಿಂದ ಚರ್ಮ ಸಮಸ್ಯೆಯಿಂದ ಬಳಲುತ್ತಿದ್ದಾರೆಯೇ ಹೊರತು ಇನ್ಯಾವುದೇ ರೀತಿಯ ಕಾಯಿಲೆಗಳು ಇಲ್ಲ ಎಂದು ಒತ್ತಿ ಹೇಳಿದೆ.

‘ಟ್ರಂಪ್​ ಮೃತ’ ಟ್ರೆಂಡ್​!

ಕಳೆದ ಒಂದೆರೆಡು ದಿನಗಳಿಂದ ಎಕ್ಸ್​ನಲ್ಲಿ​ (ಹಿಂದಿನ ಟ್ವಿಟರ್​) ಸಖತ್ ಟ್ರೆಂಡಿಂಗ್​ನಲ್ಲಿರುವ ಟ್ರಂಪ್​, ತಮ್ಮ ರಾಜಕೀಯ ವಿಷಯದಿಂದಲೋ ಅಥವಾ ಸುಂಕ ಸಮರದಿಂದಲೋ ಚರ್ಚೆಗೆ ಬಂದಿಲ್ಲ. ಬದಲಿಗೆ ಸಾವಿನ ಸುದ್ದಿ ಮೂಲಕ ಭಾರೀ ಟೀಕೆ, ವ್ಯಂಗ್ಯಕ್ಕೆ ಗುರಿಯಾಗಿದ್ದಾರೆ. ಇದು ಉಪಾಧ್ಯಕ್ದ ಜೆಡಿ ವ್ಯಾನ್ಸ್ ನೀಡಿದ ಹೇಳಿಕೆಗೋ ಅಥವಾ ಟ್ರಂಪ್ ಆರೋಗ್ಯ ಸಮಸ್ಯೆಯಿಂದಲೋ ಎಂಬುದು ಅಸ್ಪಷ್ಟ.

‘ಟ್ರೂತ್​’ನಲ್ಲಿ ಟ್ರಂಪ್​ ಸಕ್ರಿಯ

ಆಗಸ್ಟ್ 30 ಮತ್ತು 31ರಂದು ಟ್ರಂಪ್‌ಗೆ ಯಾವುದೇ ವೇಳಾಪಟ್ಟಿ ನಿಗದಿಯಾಗಿಲ್ಲ. ಇದು ವದಂತಿಗಳಿಗೆ ಮತ್ತಷ್ಟು ಉತ್ತೇಜನ ನೀಡಿದೆ. ಟ್ರಂಪ್ ಆರೋಗ್ಯ ವದಂತಿಗಳು ಹೆಚ್ಚಿನ ಕಳವಳವನ್ನು ಉಂಟುಮಾಡುವುದರ ಜತೆಗೆ ಜೆಡಿ ವ್ಯಾನ್ಸ್​ ನುಡಿದಂತೆ ನಡೆಯಲಿದ್ಯಾ? ಎಂಬ ಪ್ರಶ್ನೆಗಳನ್ನು ಮುನ್ನೆಲೆಗೆ ತಂದಿವೆ. ಡೊನಾಲ್ಡ್ ಟ್ರಂಪ್​, ಜನರ ಕಣ್ಣಿಗೆ ಬೀಳದಿದ್ದರೂ ಮತ್ತು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸದಿದ್ದರೂ, ಅವರ ಸೋಷಿಯಲ್ ಮೀಡಿಯಾ ಖಾತೆಗಳು ಸಕ್ರಿಯವಾಗಿವೆ. ತಮ್ಮದೇ ಆದ ಟ್ರೂತ್​ ಸೋಷಿಯಲ್​ನಲ್ಲಿ ಟ್ರಂಪ್​ ತಮ್ಮ ಪೋಸ್ಟ್​ಗಳನ್ನು ಎಂದಿನಂತೆ ಹಂಚಿಕೊಳ್ಳುತ್ತಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net