

SCO Summit: ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಗಾಗಿ ಚೀನಾಗೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿಗೆ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಸ್ವಾಗತ ಕೋರಿದರು.
ಸಭೆಯ ಆರಂಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಕಳೆದ ವರ್ಷದ ಕಜಾನ್‌ನಲ್ಲಿ ಅರ್ಥಪೂರ್ಣ ಚರ್ಚೆಗಳು ನಡೆದಿದ್ದು, ಅಲ್ಲಿಂದ ನಮ್ಮ ಸಂಬಂಧಗಳು ಸಕಾರಾತ್ಮಕ ದಿಕ್ಕನ್ನು ಪಡೆದುಕೊಂಡಿವೆ. ಗಡಿಗಳಲ್ಲಿ ಶಾಂತಿ ಮತ್ತು ಸ್ಥಿರತೆ ನೆಲೆಸಿದ್ದು, ಟಿಬೆಟ್ ಪ್ರದೇಶಕ್ಕೆ ಕೈಲಾಸ ಮಾನಸ ಸರೋವರ ಯಾತ್ರೆಯನ್ನು ಪುನರಾರಂಭಿಸಲಾಗಿದೆ ಎಂದರು. ಎರಡೂ ದೇಶಗಳ ನಡುವೆ ನೇರ ವಿಮಾನಯಾನವನ್ನು ಮತ್ತೆ ಆರಂಭಿಸಲಾಗುವುದು. ನಮ್ಮ ರಾಷ್ಟ್ರಗಳ ನಡುವಿನ ಸಹಕಾರದಲ್ಲಿ 2.8 ಶತಕೋಟಿ ಜನರ ಹಿತಾಸಕ್ತಿ ಅಡಗಿವೆ, ಪರಸ್ಪರ ನಂಬಿಕೆ, ಗೌರವ ಮತ್ತು ಸೂಕ್ಷ್ಮತೆಯ ಆಧಾರದ ಮೇಲೆ ನಮ್ಮ ಸಂಬಂಧಗಳನ್ನು ಮುಂದುವರಿಸಲು ನಾವು ಬದ್ಧರಾಗಿದ್ದೇವೆ ಎಂದು ಮೋದಿ ಹೇಳಿದರು.
ಇದೇ ವೇಳೆ ಚೀನಾ-ಭಾರತ ಸಹಕಾರದ ಮಹತ್ವವನ್ನು ಒತ್ತಿ ಹೇಳಿದ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್, ಜಗತ್ತು ಪರಿವರ್ತನೆಯತ್ತ ಸಾಗುತ್ತಿದೆ. ವಿಶ್ವದ ಎರಡು ಹೆಚ್ಚು ಜನಸಂಖ್ಯೆ ಹೊಂದಿರುವ ದೇಶಗಳ ಜಾಗತಿಕ ದಕ್ಷಿಣದ ಭಾಗವಾಗಿವೆ, ಡ್ರ್ಯಾಗನ್ ಮತ್ತು ಆನೆ ಒಟ್ಟಿಗೆ ಬರುವುದು ಇಂದಿನ ಅಗತ್ಯ ಎಂದರು.
ಎರಡೂ ರಾಷ್ಟ್ರಗಳು ಸಂಬಂಧವನ್ನು ಕಾರ್ಯತಂತ್ರದ ಮತ್ತು ದೀರ್ಘಕಾಲೀನ ದೃಷ್ಟಿಕೋನದಿಂದ ನೋಡಬೇಕಿದ್ದು, ಬಹುಪಕ್ಷೀಯತೆ, ಬಹುಧ್ರುವೀಯ ಜಗತ್ತು ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿ ಹೆಚ್ಚಿನ ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯಲು ಏಷ್ಯಾ ಮತ್ತು ಪ್ರಪಂಚದಾದ್ಯಂತ ಶಾಂತಿ ಮತ್ತು ಸಮೃದ್ಧಿಗಾಗಿ ಒಟ್ಟಾಗಿ ಕೆಲಸ ಮಾಡಲು ನಾವು ನಮ್ಮ ಐತಿಹಾಸಿಕ ಜವಾಬ್ದಾರಿಗಳನ್ನು ಪೂರೈಸಬೇಕು ಎಂದು ಹೇಳಿದರು.(ಏಜೆನ್ಸೀಸ್)