

Trump 2.0: ವಾಷಿಂಗ್ಟನ್ ಡಿಸಿಯ ಕ್ಯಾಪಿಟಲ್ ಹೌಸ್ನಲ್ಲಿ ಅಮೆರಿಕದ 47ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ ಡೋನಾಲ್ಡ್ ಟ್ರಂಪ್ಗೆ ಯುಎಸ್ ಜನರಿಂದ ಅಭೂತಪೂರ್ವ ಬೆಂಬಲ ದೊರಕಿದ್ದು, ಟ್ರಂಪ್ 2.0 ಯುಗಾರಂಭಕ್ಕೆ ಚಾಲನೆ ಸಿಕ್ಕಾಗಿದೆ. ಅಮೆರಿಕಾದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆಯೇ ಭರ್ತಿ 200 ಆದೇಶಕ್ಕ ಸಹಿ ಹಾಕಿದ ಟ್ರಂಪ್, ಅಕ್ರಮವಾಗಿ ಭಾರತದಿಂದ ವಲಸೆ ಬಂದವರನ್ನು ಈಗ ಅಮೆರಿಕಾದಿಂದ ಓಡಿಸಲು ಸಜ್ಜಾಗಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಇಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಡೊನಾಲ್ಡ್ ಟ್ರಂಪ್ ನಡುವೆ ದೂರವಾಣಿ ಕರೆಯಲ್ಲಿ ಸಂಭಾಷಣೆ ನಡೆದಿದೆ.
ಅಮೆರಿಕದ ಇತಿಹಾಸದಲ್ಲಿಯೇ ಅತಿದೊಡ್ಡ ಗಡಿಪಾರು ಪ್ರಕ್ರಿಯೆಯನ್ನು ನಾವು ಪ್ರಾರಂಭಿಸಲಿದ್ದೇವೆ ಎಂದು ಪ್ರಮಾಣ ವಚನಕ್ಕೂ ಮುನ್ನ ಹೇಳಿದ್ದ ಟ್ರಂಪ್, ಈಗ ಅದನ್ನು ಕಾರ್ಯರೂಪಕ್ಕೆ ತರಲು ಮುಂದಾಗಿದ್ದಾರೆ. ಇಂದು ಅಧ್ಯಕ್ಷ ಟ್ರಂಪ್ ಮತ್ತು ಪ್ರಧಾನಿ ಮೋದಿ ಮಧ್ಯೆ ನಡೆದ ಮೊದಲ ದೂರವಾಣಿ ಸಂಭಾಷಣೆ ಇದಾಗಿದ್ದು, ಟ್ರಂಪ್ ಭಾರತದ ಪ್ರಧಾನಿಗಳೊಂದಿಗೆ ದೀರ್ಘ ಮಾತುಕತೆ ನಡೆಸಿದ್ದಾರೆ. ಇದೇ ಫೆಬ್ರವರಿಯಲ್ಲಿ ಪ್ರಧಾನಿ ಮೋದಿ ಅಮೆರಿಕಕ್ಕೆ ಭೇಟಿ ನೀಡುತ್ತಾರೆ ಎಂದು ಟ್ರಂಪ್ ವರದಿಗಾರರಿಗೆ ಮಾಹಿತಿ ನೀಡಿದರು.
"ನಾನು ಇಂದು ಬೆಳಗ್ಗೆ (ಜ.28) ಪ್ರಧಾನಿ ಮೋದಿ ಅವರೊಂದಿಗೆ ದೀರ್ಘ ಮಾತುಕತೆ ನಡೆಸಿದೆ. ಅವರು ಮುಂದಿನ ತಿಂಗಳು, ಬಹುಶಃ ಫೆಬ್ರವರಿಯಲ್ಲಿ ಶ್ವೇತಭವನಕ್ಕೆ ಭೇಟಿ ನೀಡುವುದಾಗಿ ನನಗೆ ತಿಳಿಸಿದರು. ನಾವು ಭಾರತದೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದ್ದೇವೆ. ವಲಸಿಗರ ವಿಷಯದ ಬಗ್ಗೆಯೂ ಚರ್ಚಿಸಿದ್ದೇವೆ. ಅಕ್ರಮವಾಗಿ ಅಮೆರಿಕಕ್ಕೆ ಬಂದ ಭಾರತೀಯ ವಲಸಿಗರನ್ನು ವಾಪಸ್ ಕರೆಸಿಕೊಳ್ಳುವುದರ ಕುರಿತು ಪ್ರಧಾನಿ ಮೋದಿ, ಸರಿಯಾದದ್ದನ್ನೇ ಮಾಡುತ್ತಾರೆ" ಎಂದು ಭರವಸೆ ವ್ಯಕ್ತಪಡಿಸಿದರು,(ಏಜೆನ್ಸೀಸ್).