ಇದು ಹೀಗೆ ಮುಂದುವರಿದರೆ ಶೀಘ್ರವೇ 1 ಲಕ್ಷ ದಾಟಲಿದೆ ಚಿನ್ನ! ಕೇಂದ್ರ ಬಜೆಟ್​ ಮೇಲೆ ಜನರ ಚಿತ್ತ, ಹೀಗಿದೆ ವರದಿ | Gold Price

ವಿಜಯವಾಣಿ - 2025-01-26T133056.145
Published on

Gold Price: ಶ್ರೀಮಂತರಾಗಲಿ ಅಥವಾ ಬಡವರಾಗಲಿ, ಮದುವೆ ಮತ್ತು ಶುಭ ಸಂದರ್ಭಗಳು ಸಮೀಪಿಸಿದಾಗ ಚಿನ್ನದ ಬೇಡಿಕೆ, ಅಗತ್ಯತೆ ಹುಡುಕಿಕೊಂಡು ಬರುವುದು ಸರ್ವೆ ಸಾಮಾನ್ಯ. ಮದುವೆ, ಶುಭ ಸಮರಂಭ ಸೇರಿದಂತೆ ಇನ್ನಿತರ ಅದ್ಧೂರಿ ಕಾರ್ಯಕ್ರಮಗಳಿಗೆ ಒಡವೆಗಳು ನಮ್ಮನ್ನು ಕೂಗಿ ಕರೆಯುತ್ತವೆ. ವಿಶೇಷವಾಗಿ ಮನೆಯಲ್ಲಿ ಹುಡುಗಿಯ ಮದುವೆಗೆ ಖಂಡಿತವಾಗಿಯೂ ಚಿನ್ನವನ್ನು ಖರೀದಿಸಲೇಬೇಕು. ಈ ಪಟ್ಟಿಯಲ್ಲಿ ಶ್ರೀಮಂತರು ಸದಾ ಮುಂಚೂಣಿಯಲ್ಲಿರುತ್ತಾರೆ. ಮಧ್ಯಮ ವರ್ಗದ ಜನರು ತಮ್ಮ ಕೈಗೆಟುಕುವ ಬೆಲೆಗೆ ಅನುಗುಣವಾಗಿ ಚಿನ್ನವನ್ನು ಖರೀದಿಸುತ್ತಾರೆಯೇ ಹೊರೆತು ಅನಗತ್ಯ ಖರೀದಿಗೆ ಮುಂದಾಗುವುದಿಲ್ಲ. ಇದಕ್ಕೆ ಹಣದ ಅಭಾವ ಹಾಗೂ ಇಲ್ಲದ ಬಯಕೆಯೂ ಕಾರಣವಿರಬಹುದು.

ಹೊಸ ವರ್ಷದಲ್ಲಿಯೂ ಇಲ್ಲ ಇಳಿಕೆ

ಆದರೆ, ಸಿರಿವಂತರಿಗೆ ಇದ್ಯಾವುದರ ಅಡ್ಡಿ-ಆತಂಕವಿಲ್ಲ. ಕಾರಣ, ಚಿನ್ನ ಎಷ್ಟು ದುಬಾರಿಯಾದರೂ ಅದನ್ನು ಖರೀದಿಸುವ ಮನಸ್ಥಿತಿಯಿಂದ ಅವರು ಎಂದಿಗೂ ಇಟ್ಟ ಹೆಜ್ಜೆಯನ್ನು ಹಿಂತೆಗೆಯುವುದಿಲ್ಲ. ಆದ್ರೆ, ಈಗ ಅದು ಬದಲಾಗುವ ಸಮಯ ಎನ್ನುವಂತಾಗಿದೆ. ಕಾರಣ, ಚಿನ್ನದ ಬೆಲೆ ನಿರೀಕ್ಷೆಗೂ ಮೀರಿ ದುಪ್ಪಟ್ಟು ದುಬಾರಿ ಆಗಲಿದೆ ಎಂಬ ಮಾತುಗಳು ಶ್ರೀಮಂತರಲ್ಲಿಯೂ ಬೇಸರ ಮೂಡಿಸಿದೆ. ಚಿನ್ನದ ಬೆಲೆ ಶ್ರೀಮಂತ ವರ್ಗಗಳನ್ನು ಸಹ ಚಿಂತೆಗೀಡಾಗುವ ಮಟ್ಟಕ್ಕೆ ಏರುತ್ತಿವೆ. ಕಳೆದ ವರ್ಷದ ಅಂತ್ಯದಲ್ಲಿ ವೇಗವಾಗಿ ಏರುತ್ತಿದ್ದ ಚಿನ್ನದ ಬೆಲೆ ಹೊಸ ವರ್ಷದಲ್ಲಿಯೂ ಇಳಿಕೆಯಾಗುವುದಿಲ್ಲ ಎಂಬಂತೆ ಮತ್ತಷ್ಟು ಹೆಚ್ಚುತ್ತಿದೆ. ಈಗಾಗಲೇ 24 ಕ್ಯಾರೆಟ್‌ನ 10 ಗ್ರಾಂ ಚಿನ್ನದ ಬೆಲೆ 83 ಸಾವಿರ ರೂ. ದಾಟಿದೆ.

ಟ್ರಂಪ್​ 2.0 ಯುಗಾರಂಭ

ಚಿನ್ನದ ಬೆಲೆಗಳು ಸಾರ್ವಕಾಲಿಕ ದಾಖಲೆಗಳನ್ನು ಸ್ಥಾಪಿಸುತ್ತಿವೆ. ಕಳೆದ ಹತ್ತು ದಿನಗಳಲ್ಲಿ ಬೆಲೆಗಳು ಗಣನೀಯವಾಗಿ ಹೆಚ್ಚಾಗಿದೆ. ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ 2.0 ಯುಗಾರಂಭ ಮತ್ತು ಅವರು ತೆಗೆದುಕೊಂಡ ಆಕ್ರಮಣಕಾರಿ ನಿರ್ಧಾರಗಳಿಂದಾಗಿ ಚಿನ್ನದ ಬೆಲೆಯಲ್ಲಿ ದಿಢೀರ್​ ಏರಿಕೆ ಸಾಧ್ಯತೆಗಳು ಹೆಚ್ಚಿದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಅಮೆರಿಕದ ಆರ್ಥಿಕತೆಯು ವಲಸಿಗರೊಂದಿಗೆ ಅವಿನಾಭಾವ ಸಂಬಂಧ ಹೊಂದಿದೆ. ಇದರಿಂದಾಗಿ, ಹೂಡಿಕೆದಾರರು ತಮ್ಮ ಹಣವನ್ನು ಚಿನ್ನದ ಕಡೆಗೆ ಹರಿಸುತ್ತಿದ್ದಾರೆ. ಇಂದಿಗೂ ಚಿನ್ನವನ್ನು ಒಂದು ಸುರಕ್ಷಿತ ಹೂಡಿಕೆ ಸಾಧನವೆಂದೇ ಪರಿಗಣಿಸಲಾಗಿದೆ. ಮತ್ತೊಂದೆಡೆ, ಚೀನಾ ಕೂಡ ಚಿನ್ನದ ಬೆಲೆ ಏರಿಕೆಗೆ ಕಾರಣವೆಂದು ಹೇಳಲಾಗಿದೆ.

ಕೇಂದ್ರ ಬಜೆಟ್​ ಮೇಲೆ ಚಿತ್ತ

ಚೀನಾದ ಚಿನ್ನದ ನಿಕ್ಷೇಪದಲ್ಲಿ ಭಾರಿ ಹೆಚ್ಚಳವು ಬೆಲೆ ಏರಿಕೆಗೆ ಒಂದು ಕಾರಣವೆಂದು ಪರಿಗಣಿಸಲಾಗಿದೆ. ಚಿನ್ನದ ಬೆಲೆ ಏರಿಕೆಯಲ್ಲಿ ಇದೇ ವೇಗ ಮುಂದುವರಿದರೆ. ಇನ್ನು ಕೆಲವೇ ತಿಂಗಳುಗಳಲ್ಲಿ 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ಬರೋಬ್ಬರಿ 1 ಲಕ್ಷ ರೂ. ತಲುಪಿದರೂ ಆಶ್ಚರ್ಯವಿಲ್ಲ ಎಂದು ತಜ್ಞರು ಅಂದಾಜಿಸಿದ್ದಾರೆ. ಇದರ ಮಧ್ಯೆ ಕೇಂದ್ರ ಸರ್ಕಾರ ಫೆ.01ರಂದು ಸಂಸತ್ತಿನಲ್ಲಿ ಬಜೆಟ್​ ಮಂಡಿಸಲಿದೆ. ಕೇಂದ್ರವು ಚಿನ್ನದ ಮೇಲಿನ ಆಮದು ಸುಂಕವನ್ನು ಕಡಿಮೆ ಮಾಡಿದ ನಂತರ ಚಿನ್ನದ ಬೆಲೆ ತೀವ್ರವಾಗಿ ಕುಸಿಯಿತು. ಆದಾಗ್ಯೂ, ಈ ಬಾರಿ ಬಜೆಟ್‌ನಲ್ಲಿ ಇದೇ ರೀತಿಯ ನಿರ್ಧಾರ ತೆಗೆದುಕೊಳ್ಳಲಾಗುತ್ತದೆಯೇ? ಅಥವಾ ಸುಂಕವನ್ನು ಏರಿಸಲಿದೆಯೇ? ಎಂಬ ಕುತೂಹಲ ಸದ್ಯ ಜನರಲ್ಲಿ ಮೂಡಿದೆ. ಇದಕ್ಕೆ ಉತ್ತರ ಅಂದೇ ತಿಳಿಯಬೇಕಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net