ಜಿ7 ಔಟ್​ಡೇಟೆಡ್​!: ಹೊಸತನ್ನು ಕಟ್ಟೋಣ, ಭಾರತವನ್ನೂ ಸೇರಿಸೋಣ ಎಂದ್ರು ಅಧ್ಯಕ್ಷ ಟ್ರಂಪ್​

modi trump
Published on

ವಾಷಿಂಗ್ಟನ್​: ಜಗತ್ತಿನ ಏಳು ಬಲಾಢ್ಯ ಅರ್ಥವ್ಯವಸ್ಥೆಯ ಜಿ7 ಹಳೆಯದಾಗಿದೆ. ಹೊಸತನ್ನು ಕಟ್ಟೋಣ, ಭಾರತವನ್ನೂ ಸೇರಿಸೋಣ. ಸದ್ಯ ಇದರ ಶೃಂಗ ನಡೆಸುವುದು ಬೇಡ, ಸೆಪ್ಟೆಂಬರ್ ವರೆಗೂ ಮುಂದೂಡೋಣ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್​ ಹೇಳಿದ್ದಾರೆ.

ಜಿ7 ರಾಷ್ಟ್ರಗಳ ಶೃಂಗವನ್ನು ವೈಟ್​ಹೌಸ್​ನಲ್ಲಿ ಜೂನ್ ತಿಂಗಳಲ್ಲಿ ನಡೆಸುವ ಉದ್ದೇಶಿಸಲಾಗಿತ್ತು. ಆದರೆ, ಸದ್ಯದ ಸನ್ನಿವೇಶದಲ್ಲಿ ಜಿ7 ಹಳೆಯದಾಗಿದೆ. ಭಾರತ, ರಷ್ಯಾ, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾಗಳನ್ನೂ ಆಹ್ವಾನಿಸಿ ಹೊಸತನ್ನು ಕಟ್ಟಬೇಕಾಗಿದೆ. ಹೀಗಾಗಿ ಶೃಂಗವನ್ನು ಸೆಪ್ಟೆಂಬರ್ ತನಕ ಮುಂದೂಡಲಾಗಿದೆ. ಜಗತ್ತಿನಲ್ಲಿ ಸದ್ಯದ ಆಗುಹೋಗುಗಳನ್ನು ಜಿ7 ಸರಿಯಾಗಿ ಪ್ರತಿನಿಧಿಸುತ್ತಿಲ್ಲ. ಹೀಗಾಗಿ ಈ ಗುಂಪು ತುಂಬಾ ಹಳೆಯ ರಾಷ್ಟ್ರಗಳದ್ದಾಗಿ ಜಿ7 ಔಟ್​ಡೇಟೆಡ್ ಆಗಿ ಹೋಗಿದೆ ಎಂದು ನನಗನ್ನಿಸುತ್ತಿದೆ ಎಂದು ಟ್ರಂಪ್​ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಈ ನಡುವೆ, ವೈಟ್ ಹೌಸ್​ನ ಸ್ಟ್ರಾಟಜಿಕ್ ಕಮ್ಯೂನಿಕೇಷನ್ಸ್​ನ ಡೈರೆಕ್ಟರ್​ ಅಲಿಸ್ಸಾ ಅಲೆಕ್ಸಾಂಡ್ರಾ ಫರಾಹ್​ ಪ್ರತಿಕ್ರಿಯಿಸಿದ್ದು, ನಮ್ಮ ಸಾಂಪ್ರದಾಯಿಕ ಮಿತ್ರ ರಾಷ್ಟ್ರಗಳನ್ನು ಒಂದು ಗೂಡಿಸುವ ಪ್ರಯತ್ನವಾಗಿದ್ದು, ಭವಿಷ್ಯದಲ್ಲಿ ಚೀನಾ ಜತೆಗೆ ಹೇಗೆ ವ್ಯವಹರಿಸಬೇಕು ಎಂಬುದನ್ನು ನಿರ್ಧರಿಸುವುದಕ್ಕೆ ಇರುವ ನಡೆಯಾಗಿದೆ.

ಇದಕ್ಕೂ ಮುನ್ನ, ಜರ್ಮನಿಯ ಚಾನ್ಸಲರ್​ ಏಂಜೆಲಾ ಮರ್ಕೆಲ್​ ಕಚೇರಿ ಶನಿವಾರ ಪ್ರತಿಕ್ರಿಯಿಸಿದ್ದು, ಕರೊನಾ ವೈರಸ್​ ಸೋಂಕು ಜಗತ್ತನ್ನು ಹರಡಿದ ರೀತಿ ಅಲ್ಲಿಂದೀಚೆಗೆ ಬದಲಾದ ರೀತಿ ಇವನ್ನೆಲ್ಲ ಅವಲೋಕಿಸಿ ಸರಿಯಾದ ಕ್ರಮಗಳ ಬಗ್ಗೆ ಗಮನಹರಿಸದೇ ಶೃಂಗದಲ್ಲಿ ಭಾಗಿಯಾಗಲು ಸಾಧ್ಯವಿಲ್ಲ ಎಂದು ಹೇಳಿತ್ತು.  ಜಿ7 ಎಂಬುದು ಜಗತ್ತಿನ ಏಳು ಪ್ರಬಲ ಅರ್ಥ ವ್ಯವಸ್ಥೆ ಹೊಂದಿರುವ ರಾಷ್ಟ್ರಗಳ ವೇದಿಕೆ. ಇದರಲ್ಲಿ ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಅಮೆರಿಕ, ಬ್ರಿಟನ್​ ಮತ್ತು ಕೆನಡಾಗಳಿವೆ. ಈ ರಾಷ್ಟ್ರಗಳ ಮುಖ್ಯಸ್ಥರು ವರ್ಷಕ್ಕೊಮ್ಮೆ ಸಭೆ ಸೇರಿ ಅಂತಾರಾಷ್ಟ್ರೀಯ ಆರ್ಥಿಕತೆ ಮತ್ತು ಇತರೆ ವಿಷಯಗಳ ಬಗ್ಗೆ ಚರ್ಚೆ ನಡೆಸುತ್ತಾರೆ.

ಈ ವರ್ಷ ಜಿ7 ನ ಅಧ್ಯಕ್ಷತೆ ಅಮೆರಿಕದ ಅಧೀನವಿದೆ. ಸಾಮಾನ್ಯವಾಗಿ ಜಿ7 ಅಧ್ಯಕ್ಷರು ಈ ರಾಷ್ಟ್ರಗಳ ಹೊರತಾಗಿ ಒಂದೋ ಅಥವಾ ಎರಡೋ ಅನ್ಯ ರಾಷ್ಟ್ರಗಳ ಮುಖ್ಯಸ್ಥರನ್ನು ಸಭೆಗೆ ಆಹ್ವಾನಿಸುತ್ತಾರೆ. ಕಳೆದ ವರ್ಷ ಫ್ರಾನ್ಸ್​ ಅಧ್ಯಕ್ಷ ಇಮ್ಯಾನುವೆಲ್ ಮ್ಯಾಕ್ರನ್​ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಜಿ 7 ಶೃಂಗಕ್ಕೆ ಆಹ್ವಾನಿಸಿದ್ದರು.ಈ ಸಲ ಮುಂದಿನ ಜಿ7 ಶೃಂಗಕ್ಕೆ ಭಾರತವನ್ನೂ ಆಹ್ವಾನಿಸುವ ಮಾತನ್ನು ಟ್ರಂಪ್​ ಹೇಳಿದ್ದು, ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚುತ್ತಿರುವ ಭಾರತದ ಪ್ರಾಮುಖ್ಯತೆಯನ್ನು ಪ್ರತಿಬಿಂಬಿಸುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net