

ಚಂಡೀಗಢ: ಚೀನಾ ಕಾಲ್ಕೆರೆಯುತ್ತ ಮೈಮೇಲೆ ಬಂದಾಗ ಹೆದರಿ ಹಿಮ್ಮೆಟ್ಟೋದಕ್ಕೆ ಈಗ ನಡೀತಿರೋದು 1962 ಅಲ್ಲ ಎಂಬುದು ಬೀಜಿಂಗ್ಗೆ ನೆನಪಿರಲಿ. ನಮಗೆ ಯುದ್ಧ ಬೇಡ, ಆದರೆ ಬೆದರಿಸುವ ಬೀಜಿಂಗ್ನ ಪ್ರವೃತ್ತಿಯನ್ನು ಸಹಿಸಿಕೊಂಡು ಹೋಗೋದಕ್ಕೆ ಸಾಧ್ಯವಿಲ್ಲ ಎಂದು ಪಂಜಾಬ್ನ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಎಚ್ಚರಿಸಿದ್ದಾರೆ. ಅವರು ಭಾರತೀಯ ಸೇನೆಯಲ್ಲಿ ಈ ಹಿಂದೆ ಕ್ಯಾಪ್ಟನ್ ಆಗಿದ್ದವರು.
ಗಡಿಭಾಗದಲ್ಲಿ ಅತಿಕ್ರಮಣ, ಆಕ್ರಮಣಕಾರಿ ನೀತಿಯನ್ನು ಚೀನಾ ಅನುಸರಿಸಿದರೆ ಅದಕ್ಕೆ ತಕ್ಕ ಬೆಲೆಯನ್ನೂ ಅದು ತೆರಬೇಕಾದೀತು. ಭಾರತೀಯ ಸೇನೆ ಈಗಾಗಲೇ ತಕ್ಕ ಉತ್ತರವನ್ನು ನೀಡುವುದಕ್ಕೆ ಸಿದ್ಧವಾಗಿದೆ. ಚೀನಾ ಅದಕ್ಕೆ ಅವಕಾಶ ಮಾಡಿಕೊಡಬಾರದು ಎಂದು ಅವರು ಕೋಲ್ಕತ್ತದ ನಿವಾಸಿಯೊಬ್ಬರ ಪ್ರಶ್ನೆಗೆ ಫೇಸ್ಬುಕ್ ಲೈವ್ ಕಾರ್ಯಕ್ರಮದಲ್ಲಿ ಎಚ್ಚರಿಸಿದ್ದಾರೆ.
ಯಾವುದೇ ದೇಶದೊಂದಿಗೆ ನಮಗೆ ಯುದ್ಧ ಬೇಡ ಮತ್ತು ಅಂತಹ ಸಂಕಷ್ಟದ ಸನ್ನಿವೇಶ ತಿಳಿಗೊಂಡು ಬಾಂಧವ್ಯ ವೃದ್ಧಿಯಾಗಬೇಕು ಎಂಬ ಅಪೇಕ್ಷೆ ನಮ್ಮದು. ಆದರೆ, ಅವರಾಗಿಯೇ ಆ ರೀತಿ ಮುಂದುವರಿದರೆ ನಮ್ಮ ಬಳಿ ಬೇರೆ ಆಯ್ಕೆ ಇರುವುದಿಲ್ಲ. ಇದನ್ನು ಚೀನಾದವರೂ ಅರ್ಥ ಮಾಡಿಕೊಳ್ಳಬೇಕು. ನಮ್ಮ ಭೌಗೋಳಿಕ ವ್ಯಾಪ್ತಿಯೊಳಗೆ ಬಂದು ರಸ್ತೆ ನಿರ್ಮಿಸುತ್ತಿರುವ ಅವರು ನಮ್ಮ ಆಕ್ಷೇಪಣೆಗಳನ್ನು ಕೇಳುವುದಿಲ್ಲ. ಆದರೆ, ನಮ್ಮ ಭೌಗೋಳಿಕ ವ್ಯಾಪ್ತಿ ಅಕ್ಸಾಯ್ ಚಿನ್ನಲ್ಲಿ ನಾವು ರಸ್ತೆ ನಿರ್ಮಿಸಿದರೆ ಆಕ್ರಮಕಾರಿ ನೀತಿ ಅನುಸರಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. (ಏಜೆನ್ಸೀಸ್)