ಕೋವಿಡ್​ 19 ನಿಯಮ ಪಾಲಿಸದ ಪ್ರಧಾನಿಯೇ ದಂಡ ತೆರಬೇಕಾಯಿತು!

Romania's PM fined over virus lapses at meeting 31 MAY 20
Published on

ಬುಚರೆಸ್ಟ್​: ಜಗತ್ತಿನಾದ್ಯಂತ ಎಲ್ಲ ದೇಶಗಳೂ ಕೋವಿಡ್​ 19 ನಿಯಮಗಳನ್ನು ಜಾರಿಗೆ ತಂದಿದ್ದು, ಅವರವರ ಮತ್ತು ಸಮಾಜ, ಸಮುದಾಯದ ಆರೋಗ್ಯದ ದೃಷ್ಟಿಯಿಂದ ಪ್ರತಿಯೊಬ್ಬರೂ ಪಾಲಿಸಬೇಕಾದ್ದು ಅವಶ್ಯ. ಆದರೆ, ನಿಯಮ ರೂಪಿಸಿದವರೇ ನಿಯಮ ಪಾಲಿಸಿದಿದ್ದರೆ ದಂಡನೆಗೆ ಒಳಗಾಗಬೇಕೆ? ಹೀಗೊಂದು ಸಂದೇಹಕ್ಕೆ ಪ್ರತಿಯೊಬ್ಬರನ್ನೂ ಕಾಡಬಹುದು. ರೊಮಾನಿಯಾದಲ್ಲಿ ಸಚಿವ ಸಂಪುಟ ಸಭೆಯಲ್ಲಿ ನಿಯಮ ಪಾಲಿಸದ ಕಾರಣ ಪ್ರಧಾನಿಯೇ ದಂಡ ಪಾವತಿಸಬೇಕಾಗಿ ಬಂತು. ಈ ರೀತಿ ದಂಡ ಪಾವತಿಸುವ ಅನಿವಾರ್ಯತೆ ಸೃಷ್ಟಿಯಾಗಲು ಕಾರಣವಾಗಿದ್ದು ಮಾಜಿ ಸಚಿವ!

ಮಾಜಿ ಹಣಕಾಸು ಸಚಿವ ಯಗೆನ್​ ಒರ್ಲಾಂಡೊ ಟಿಯೊಡೊರೊವಿಕಿ ತನ್ನ ಫೇಸ್​ಬುಕ್ ಪುಟದಲ್ಲಿ ಒಂದು ಫೋಟೊವನ್ನು ಶುಕ್ರವಾರ ಪ್ರಕಟಿಸಿದ್ದರು. ಅದರಲ್ಲಿ ಪ್ರಧಾನಿ ಲುಡೋವಿಕ್​ ಒರ್ಬಾನ್​, ಉಪ ಪ್ರಧಾನಿ ರಲುಕಾ ಟರ್ಕನ್​, ಸಚಿವರಾದ ವರ್ಜಿಲ್ ಪೊಪೆಸ್ಕು, ಲುಸಿಯಾನ್​ ಬೊಡೆ, ಬೊಗ್​ಡಾನ್​ ಔರೆಸ್ಕು ಅನೌಪಚಾರಿಕ ರೀತಿಯಲ್ಲಿ ಮಾತುಕತೆ ನಡೆಸುತ್ತಿದ್ದ ದೃಶ್ಯವಿತ್ತು.

ಚಿತ್ರದಲ್ಲಿ ಪ್ರಧಾನಿ ಲುಡೋವಿಕ್​ ಧೂಮಪಾನ ಮಾಡುತ್ತಿದ್ದರೆ, ವಿದೇಶಾಂಗ ಸಚಿವ ಕೈಗೆ ಗ್ಲೌಸ್ ಧರಿಸಿಕೊಂಡು ಸಿಗಾರ್ ಹಿಡಿದುಕೊಂಡಿದ್ದು. ಇನ್ನು, ಆರ್ಥಿಕ ಸಚಿವ ಕೈಯಲ್ಲಿ ಒಂದು ಮದ್ಯದ ಗ್ಲಾಸ್ ಇದೆ. ಸಚಿವ ಬೋಡೆ ಅವರು ಮದ್ಯದ ಬಾಟಲಿ ಇದ್ದ ಟೇಬಲ್​ಗೆ ಹತ್ತಿರದಲ್ಲೇ ಕಾಣುತ್ತಿದ್ದಾರೆ. ಟೇಬಲ್​ನಲ್ಲಿ ಷಾಂಪೇನ್​ ಬಾಟಲಿ, ಖಾಲಿ ಬಾಟಲಿ ಹಲವು ಗ್ಲಾಸ್​ಗಳು ಮತ್ತು ತಿನಿಸುಗಳಿವೆ. ರಲುಕಾ ಟರ್ಕನ್ ಮಾತ್ರ ಮಾಸ್ಕ್ ಧರಿಸಿಕೊಂಡಿದ್ದರೂ ಸರಿಯಾಗಿ ಹಾಕಿಕೊಂಡಿಲ್ಲ.

ಈ ಫೋಟೋ ಮೇ 25ರಂದು ನಡೆದ ಸಚಿವ ಸಂಪುಟ ಸಭೆ ಎಂದು ರಾಜಕೀಯ ಮೂಲಗಳು ಹೇಳುತ್ತಿವೆ. ಈ ಫೋಟೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಇದರ ಬೆನ್ನಿಗೆ ಪ್ರಧಾನಿ ಲುಡೋವಿಕ್​ ತಪ್ಪೊಪ್ಪಿಕೊಂಡು 690 ಡಾಲರ್ ( ಅಂದಾಜು ಭಾರತದ 60 ಸಾವಿರ ರೂಪಾಯಿ) ದಂಡವನ್ನು ಪಾವತಿಸಿದ್ದಾರೆ. ಆ ಮೂಲಕ ವಿವಾದದಿಂದ ಬಚಾವ್ ಆಗಲು ಪ್ರಯತ್ನಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net