ಆ ಗೆರೆ ದಾಟಾಗಿದೆ! ಈತ ಅಮೆರಿಕಕ್ಕೆ ಅಪಾಯಕಾರಿ; ಜೋಹ್ರಾನ್​ ಮಮ್ದಾನಿ ಕುರಿತು ಟ್ರಂಪ್​ ಕಟು ಮಾತು | Trump

ವಿಜಯವಾಣಿ - 2025-06-26T125531.043
Published on

Trump: ನ್ಯೂಯಾರ್ಕ್ ನಗರದ ಮೇಯರ್ ಹುದ್ದೆಗೆ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿಯಾಗಿದ್ದ ಜೋಹ್ರಾನ್ ಮಮ್ದಾನಿ ಗೆಲುವನ್ನು ಉಲ್ಲೇಖಿಸಿ ಕಿಡಿಕಾರಿರುವ ಅಮೆರಿಕ ಅಧ್ಯಕ್ಷ, "ಕೊನೆಗೂ ನಾನೇನು ನಿರೀಕ್ಷಿಸಿದ್ದೇ ಆದೇ ಆಗಿಬಿಟ್ಟಿದೆ" ಎಂದು ಕಟು ಮಾತುಗಳನ್ನಾಡಿದ್ದಾರೆ.

ಡೆಮಾಕ್ರಟಿಕ್ ಪಕ್ಷ ಮತ್ತು ಜೋಹ್ರಾನ್​ರನ್ನು ಟೀಕಿಸಿರುವ ಡೋನಾಲ್ಡ್ ಟ್ರಂಪ್​, "ಅಂತಿಮವಾಗಿ, ನಿರೀಕ್ಷಿಸಿದ್ದೇ ಸಂಭವಿಸಿದೆ. ಡೆಮೋಕ್ರಾಟ್‌ಗಳು ಗೆರೆಯನ್ನು ದಾಟಿಯೇ ಬಿಟ್ಟಿದ್ದಾರೆ. ಜೋಹ್ರಾನ್ ಮಮ್ದಾನಿ ಎಂಬ ವ್ಯಕ್ತಿ 100ಕ್ಕೆ 100 ಕಮ್ಯುನಿಸ್ಟ್ ಹುಚ್ಚ. ಅಂಥಾ ವ್ಯಕ್ತಿ ಆ ಪಕ್ಷದ ಮೇಯರ್ ಅಭ್ಯರ್ಥಿಗಾಗಿ ಪ್ರಾಥಮಿಕ ಚುನಾವಣೆಯಲ್ಲಿ ಗೆಲ್ಲುವ ಸ್ಪರ್ಧೆಯಲ್ಲಿ ನಿಂತಿದ್ದರು. ಅವರು ಸಕ್ರಿಯ ವ್ಯಕ್ತಿ ಅಲ್ಲವೇ ಅಲ್ಲ. ಆತ ನೋಡಲು ಭಯಾನಕ. ಅವನ ಧ್ವನಿಯೂ ಕಠೋರ. ಆತನನ್ನು ಬೆಂಬಲಿಸುವವರೆಲ್ಲರೂ ನಕಲಿಗಳೇ. ಅಲೆಕ್ಸಾಂಡ್ರಿಯಾ ಒಕಾಸಿಯೊ-ಕಾರ್ಟೆಜ್ (AOC) ಮತ್ತು ಅಂತಿಮವಾಗಿ ನಮ್ಮ ಮಹಾನ್ ಪ್ಯಾಲೆಸ್ಟೀನಿಯನ್ ಸೆನೆಟರ್ ಚಕ್ ಶುಮರ್ ಸೇರಿದಂತೆ. ಅವರೆಲ್ಲ ಗೆದ್ದರೆ, ಖಂಡಿತ ದೇಶಕ್ಕೆ ಆಪತ್ತು ತಂದಿಡುತ್ತಾರೆ" ಎಂದು ವ್ಯಂಗ್ಯವಾಗಿ ಪೋಸ್ಟ್ ಮಾಡಿದ್ದಾರೆ.

ಅಲ್ಲಿಗೆ ನಿಲ್ಲದ ಟೀಕೆ!

ಮತ್ತೊಂದು ಪೋಸ್ಟ್‌ನಲ್ಲಿ, ಡೆಮಾಕ್ರಟಿಕ್ ಪಕ್ಷದ ನಾಯಕತ್ವವನ್ನು ಟೀಕಿಸಿದ ಟ್ರಂಪ್​, "ಡೆಮಾಕ್ರಾಟ್‌ಗಳು ರಾಜಕೀಯವಾಗಿ ಪ್ರಮುಖ ಪಾತ್ರಕ್ಕೆ ಮರಳಬೇಕೆಂಬ ಆಲೋಚನೆ ನನ್ನಲ್ಲಿದೆ. ಆ ಪಕ್ಷದಲ್ಲಿ ಕೆಲವರನ್ನು ವರ್ಷಗಳಿಂದ ಬದಿಗಿಡಲಾಗಿದೆ. ಮುಖ್ಯವಾಗಿ 2024ರ ಅಧ್ಯಕ್ಷೀಯ ಚುನಾವಣೆಯಲ್ಲಿ ಐತಿಹಾಸಿಕ ಸೋಲಿನ ಬಳಿಕ ಡೆಮಾಕ್ರಟಿಕ್ ಮಹಿಳಾ ನಾಯಕಿ ಜಾಸ್ಮಿನ್ ಕ್ರೊಕೆಟ್ ಎಂಬ ಕಡಿಮೆ ಬುದ್ಧಿವಂತ ಅಭ್ಯರ್ಥಿಯನ್ನು ಅಧ್ಯಕ್ಷ ಸ್ಥಾನಕ್ಕೆ ನಾಮನಿರ್ದೇಶನ ಮಾಡಬೇಕು. ಅಲೆಕ್ಸಾಂಡ್ರಿಯಾ ಒಕಾಸಿಯೊ-ಕೊರ್ಟೆಜ್ ಮತ್ತು ಇತರ ಮೂವರು ಉಪಾಧ್ಯಕ್ಷ ಸ್ಥಾನ ಮತ್ತು ಸಂಪುಟದಲ್ಲಿ ಉನ್ನತ ಸ್ಥಾನಗಳಲ್ಲಿರಬೇಕು. ಜೋಹ್ರಾನ್ ಮಮ್ದಾನಿ ನ್ಯೂಯಾರ್ಕ್‌ನ ಭವಿಷ್ಯದ ಕಮ್ಯುನಿಸ್ಟ್ ಮೇಯರ್ ಆಗಿ ಗೆದ್ದರೆ, ನಮ್ಮ ದೇಶ ಸರ್ವನಾಶ" ಎಂದು ಕಿಡಿಕಾರಿದ್ದಾರೆ.

ಯಾರು ಈ ಜೋಹ್ರಾನ್ ಮಮ್ದಾನಿ?

33 ವರ್ಷದ ಜೋಹ್ರಾನ್ ಮಮ್ದಾನಿ ಓರ್ವ ರಾಜಕಾರಣಿ ಮತ್ತು ಸಾಮಾಜಿಕ ಕಾರ್ಯಕರ್ತ. ಉಗಾಂಡಾದಲ್ಲಿ ಭಾರತೀಯ ಮೂಲದ ಕುಟುಂಬದಲ್ಲಿ ಜನಿಸಿದ ಮಮ್ದಾನಿ ಅವರ ತಂದೆ ಪ್ರೊಫೆಸರ್ ಮಹ್ಮದ್ ಮಮ್ದಾನಿ ಮತ್ತು ತಾಯಿ ಪ್ರಸಿದ್ಧ ನಿರ್ದೇಶಕಿ ಮೀರಾ ನಾಯರ್. ಅವರ ಪತ್ನಿ ಸಿರಿಯನ್ ಮಾಡೆಲ್ ರಾಮ ದುವಾಜಿ. ನ್ಯೂಯಾರ್ಕ್ ಮೇಯರ್ ಓಟದ ಪ್ರಚಾರದ ಆರಂಭದಿಂದಲೂ, ಉಚಿತ ಬಸ್ ಪ್ರಯಾಣದ ಭರವಸೆಯೊಂದಿಗೆ ಜನಪ್ರಿಯತೆಯನ್ನು ಗಳಿಸಿದ್ದಾರೆ. ಮಕ್ಕಳ ಆರೈಕೆ ಮತ್ತು ಶ್ರೀಮಂತರ ಮೇಲೆ ಹೆಚ್ಚಿನ ತೆರಿಗೆ ವಿಧಿಸುವಂತಹ ಭರವಸೆಗಳೊಂದಿಗೆ ಒಂದು ವರ್ಷದಿಂದ ಪ್ರಚಾರದಲ್ಲಿ ಉತ್ತುಂಗಕ್ಕೇರಿರುವುದು ಗಮನಾರ್ಹ.

ಅಲೆಕ್ಸಾಂಡ್ರಿಯಾ ಒಕಾಸಿಯೊ-ಕೊರ್ಟೆಜ್ ಮತ್ತು ಬರ್ನಿ ಸ್ಯಾಂಡರ್ಸ್‌ರಂತಹ ಸೆಲೆಬ್ರಿಟಿಗಳು ಮಮ್ದಾನಿರನ್ನು ಬೆಂಬಲಿಸಿದ್ದಾರೆ. ಆದಾಗ್ಯೂ, ಪ್ಯಾಲೆಸ್ಟೈನ್‌ಗೆ ಅವರ ಬೆಂಬಲ ಮತ್ತು ಆಡಳಿತಾತ್ಮಕ ಅನುಭವದ ಕೊರತೆಯಂತಹ ವಿಷಯಗಳಿಂದ ಅವರು ಭಾರೀ ಟೀಕೆಗಳನ್ನು ಎದುರಿಸಿದ್ದಾರೆ. ಆದಾಗ್ಯೂ, ಜೋಹ್ರಾಮ್ ಮಮ್ದಾನಿ ಕಡಿಮೆ ಅವಧಿಯಲ್ಲಿ ಜನರಲ್ಲಿ ಅತ್ಯಂತ ಜನಪ್ರಿಯತೆ ಗಳಿಸಿದ್ದಾರೆ. ವಿಶೇಷವಾಗಿ ಯುವಕರಲ್ಲಿ. ಕಳೆದು ಒಂದು ವರ್ಷದಿಂದ ಸೋಷಿಯಲ್ ಮೀಡಿಯಾವನ್ನು ಉತ್ತಮ ಅಸ್ತ್ರವನ್ನಾಗಿ ಬಳಸಿಕೊಂಡಿರುವ ಅವರು, ತಮ್ಮ ಪ್ರಚಾರವನ್ನು ಪರಿಣಾಮಕಾರಿಯಾಗಿ ನಡೆಸುತ್ತಿರುವುದು ಗಮನಾರ್ಹ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net