ದ್ವಿತೀಯ ಟೆಸ್ಟ್​ ಮುನ್ನ ತಂಡದಲ್ಲಿ ಮಹತ್ವದ ಬದಲಾವಣೆ? ಈ ಇಬ್ಬರಿಗೆ ಇಂಗ್ಲೆಂಡ್​ ವಿರುದ್ಧ ಆಡಲು ಅವಕಾಶ ಕೊಡಿ | IND vs ENG Test

ವಿಜಯವಾಣಿ - 2025-06-26T114353.501
Published on

IND vs ENG: ಹೆಡಿಂಗ್ಲಿಯಲ್ಲಿ ನಡೆದ ಇಂಗ್ಲೆಂಡ್​ ವಿರುದ್ಧದ ಐದು ಟೆಸ್ಟ್ ಪಂದ್ಯಗಳ ಮೊದಲ ಟೆಸ್ಟ್​ ಪಂದ್ಯದಲ್ಲಿ ಭಾರತ ಸೋಲುಂಡಿತು. ಶುಭಮನ್ ಗಿಲ್ ನಾಯಕತ್ವದಲ್ಲಿ ಉತ್ತಮ ರನ್ ಕಲೆಹಾಕಿದ ಟೀಮ್ ಇಂಡಿಯಾ, ಭರ್ಜರಿ ಶತಕಗಳನ್ನು ಸಂಭ್ರಮಿಸಿತು. ಆದರೆ, ಗೆಲುವಿಗಾಗಿ ನಡೆದ ಭಾರೀ ಪೈಪೋಟಿಯಲ್ಲಿ ಬೆನ್​ ಸ್ಟೋಕ್ಸ್ ಪಡೆ ಗೆದ್ದು ಬೀಗಿತು. ಇದೀಗ ಎರಡನೇ ಟೆಸ್ಟ್​ಗೆ ಸಜ್ಜಾಗಿರುವ ಭಾರತ ತಂಡದಲ್ಲಿ ಬದಲಾವಣೆ ಮಾತು ಕೇಳಿಬಂದಿದ್ದು, ಇಬ್ಬರು ಆಟಗಾರರಿಗೆ ಅವಕಾಶ ಕೊಡಲು ಮ್ಯಾನೇಜ್​ಮೆಂಟ್​ಗೆ ಸಲಹೆ ನೀಡಲಾಗಿದೆ.

ಮೊದಲ ಟೆಸ್ಟ್‌ನಲ್ಲಿ ತಂಡದ ಸಂಯೋಜನೆ ಸರಿಯಾಗಿಲ್ಲ, ಅದಕ್ಕಾಗಿಯೇ ಭಾರತ ತಂಡ ಸೋಲುಂಡಿತು ಎಂದು ಅನೇಕ ಮಾಜಿ ಕ್ರಿಕೆಟಿಗರು ದೂರಿದ್ದಾರೆ. ಈ ಸಂದರ್ಭದಲ್ಲಿ, ಜುಲೈ 2ರಿಂದ ಇಂಗ್ಲೆಂಡ್ ವಿರುದ್ಧದ ಎರಡನೇ ಟೆಸ್ಟ್‌ಗೆ ಭಾರತೀಯ ತಂಡದಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲು ಟೀಮ್ ಇಂಡಿಯಾ ಹೆಡ್​ ಕೋಚ್ ಗೌತಮ್ ಗಂಭೀರ್​ ಮತ್ತು ಮ್ಯಾನೇಜ್​ಮೆಂಟ್​ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎನ್ನಲಾಗಿದೆ. ಅಷ್ಟಕ್ಕೂ ಯಾವ ಇಬ್ಬರು ಆಟಗಾರರಿಗೆ ತಂಡದಲ್ಲಿ ಅವಕಾಶ ಕೊಡಬಹುದು ಎಂಬ ಪ್ರಶ್ನೆ ಕ್ರಿಕೆಟ್​ ಪ್ರಿಯರಲ್ಲಿ ಕಾಡತೊಡಗಿದೆ.

ಮೊದಲ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲರಾದ ಶಾರ್ದೂಲ್ ಠಾಕೂರ್ ಬದಲಿಗೆ ಸ್ಪಿನ್ನರ್ ಕುಲದೀಪ್ ಯಾದವ್​ಗೆ ಅವಕಾಶ ಕೊಡಬೇಕು ಎಂಬ ಬೇಡಿಕೆಗಳು ಹೆಚ್ಚುತ್ತಿವೆ. ಗಂಭೀರ್ ಮತ್ತು ಕ್ಯಾಪ್ಟನ್​ ಗಿಲ್ ಮೊದಲ ಟೆಸ್ಟ್‌ನಲ್ಲಿ ಶಾರ್ದೂಲ್​ರನ್ನು ಆಡಿಸುವ ನಿರ್ಧಾರವನ್ನು ಬೆಂಬಲಿಸಿದ್ದರೂ, ಎರಡನೇ ಟೆಸ್ಟ್ ತಂಡದ ಆಯ್ಕೆಯ ಬಗ್ಗೆ ಅವರು ಹೆಚ್ಚೇನು ಪ್ರತಿಕ್ರಿಯಿಸಿಲ್ಲ. ಮತ್ತೊಂದೆಡೆ, ಮೊದಲ ಟೆಸ್ಟ್‌ನಲ್ಲಿ ನಾಲ್ವರು ವೇಗಿಗಳೊಂದಿಗೆ ಆಡುವ ನಿರ್ಧಾರವನ್ನು ಅನೇಕ ಮಾಜಿ ಕ್ರಿಕೆಟಿಗರು ಟೀಕಿಸುತ್ತಿದ್ದಾರೆ. ಆದಾಗ್ಯೂ, ಎರಡನೇ ಟೆಸ್ಟ್ ನಡೆಯಲಿರುವ ಬರ್ಮಿಂಗ್‌ಹ್ಯಾಮ್​ನ ಪಿಚ್ ಸ್ಪಿನ್ನರ್‌ಗಳಿಗೆ ವಿಕೆಟ್​ ಕೀಳಲು ಉತ್ತಮವಾಗಿದೆ.

ನಿತೀಶ್​ ರೆಡ್ಡಿ ಮತ್ತು ಕುಲದೀಪ್​

"ಜಡೇಜಾ ಮತ್ತು ಕುಲದೀಪ್ ಅವರ ಕಾಂಬಿನೇಷನ್​ ಬುರ್ಮಿಂಗ್​ಹ್ಯಾಮ್​ನ ಪಿಚ್​ನಲ್ಲಿ ಮೋಡಿ ಮಾಡುವ ಸಾಧ್ಯತೆ ಹೆಚ್ಚಿದೆ" ಎಂದು ಮಾಜಿ ನಾಯಕ ದಿಲೀಪ್ ವೆಂಗ್ ಸರ್ಕಾರ್ ಅಭಿಪ್ರಾಯಿಸಿದ್ದಾರೆ. "ಕುಲದೀಪ್ ಮೊದಲ ಟೆಸ್ಟ್‌ನಲ್ಲಿ ಇದ್ದಿದ್ದರೆ ಫಲಿತಾಂಶ ಬೇರೆಯೇ ಆಗಿರುತ್ತಿತ್ತು" ಎಂದು ಮಾಜಿ ಹಿರಿಯ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಹೇಳಿದ್ದಾರೆ. "ಎರಡನೇ ಟೆಸ್ಟ್‌ನಲ್ಲಿ ಕುಲದೀಪ್ ಅವರನ್ನು ಆಡಿಸಬೇಕು ಮತ್ತು ಅಗತ್ಯವಿದ್ದರೆ ನಿತೀಶ್ ಕುಮಾರ್​ ರೆಡ್ಡಿ ಅವರನ್ನು ಸಹ ತಂಡದಲ್ಲಿ ಆಡಿಸಬೇಕು. ಎರಡನೇ ಟೆಸ್ಟ್‌ನಲ್ಲಿ ಭಾರತ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಿದೆ. ಇಂಗ್ಲೆಂಡ್‌ನಲ್ಲಿ ಆಡುವಾಗ ಕ್ವಾಲಿಟಿ ಬೌಲರ್‌ಗಳು ಇರಬೇಕು. ಇಬ್ಬರು ಸ್ಪಿನ್ನರ್​ ಮಾಂತ್ರಿಕರು ಕಣಕ್ಕಿಳಿಯುವುದು ಉತ್ತಮ" ಎಂದು ಮಂಜ್ರೇಕರ್ ಸಲಹೆ ನೀಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net