

ಮಂಡ್ಯ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ ರೈತರ ವಿರೋಧದ ನಡುವೆಯೂ ಭೂ ಸ್ವಾಧೀನಕ್ಕೆ ಹೊರಡಿಸಿರುವ ಅಧಿಸೂಚನೆ ಹೊರಡಿಸಲಾಗಿದೆ. ಇದೊಂದು ಹೀನಾಯ ಕೃತ್ಯ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ ಆಕ್ರೋಶ ಹೊರಹಾಕಿದರು.
ಚನ್ನರಾಯಪಟ್ಟಣ ಹೋಬಳಿಯ 13 ಗ್ರಾಮದಲ್ಲಿ ಬಲವಂತವಾಗಿ ಕೆಐಎಡಿಬಿ ಭೂ ಸ್ವಾಧೀನಕ್ಕೆ ಸರ್ಕಾರ ಅಧಿಸೂಚನೆ ಹೊರಡಿಸಿರುವುದು ಹೀನಾಯ ಕೃತ್ಯವಾಗಿದ್ದು, ರಾಜ್ಯ ಸರ್ಕಾರದ ಹೇಡಿತನಕ್ಕೆ ಸಾಕ್ಷಿಯಾಗಿದೆ. 1777 ಎಕರೆ ಭೂಮಿಯನ್ನು ಸ್ವಾಧೀನ ಪಡಿಸಲು ಅಲ್ಲಿನ ರೈತರ ಒಪ್ಪದೇ 1,180 ದಿನಗಳಿಂದ ನಿರಂತರವಾಗಿ ಚನ್ನರಾಯಪಟ್ಟಣದ ನಾಡಾ ಕಚೇರಿ ಬಳಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸ್ವಾಧೀನ ಪ್ರಕ್ರಿಯೆಗೆ ಶೇ.80ರಷ್ಟು ರೈತರು ವಿರೋಧ ವ್ಯಕ್ತಪಡಿಸಿದ್ದರೂ, ಬಲವಂತವಾಗಿ ಸ್ವಾಧೀನಕ್ಕೆ ಮುಂದಾಗಿದ್ದಾರೆ. ಇದು ಭೂಸ್ವಾಧೀನ ಕಾಯ್ದೆ-2013ರ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.
ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಎನ್.ಎಲ್.ಭರತ್ರಾಜ್ ಮಾತನಾಡಿ, ವಿಧಾನಸಭಾ ಚುನಾವಣೆಗೂ ಮುನ್ನ ಭೂ ಸ್ವಾಧೀನಕ್ಕೆ ಅವಕಾಶ ನೀಡುವುದಿಲ್ಲ ಎಂದು ಹೇಳಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅಲ್ಲಿನ ಉಸ್ತುವಾರಿ ಮಂತ್ರಿಗಳು ಭೂ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸುವ ಮೂಲಕ ವಚನ ಭ್ರಷ್ಟ ನಡವಳಿಕೆಯನ್ನು ತೋರಿದ್ದಾರೆ ಎಂದು ಕಿಡಿ ಕಾರಿದರು.
ರೈತ ಸಂಘದ ಲಿಂಗಪ್ಪಾಜಿ, ಅಣ್ಣಯ್ಯ, ಶಿವಮಲ್ಲಯ್ಯ, ಶಿವಕುಮಾರ್, ಲತಾ, ಹನುಮೇಶ್, ಸತೀಶ್, ಸಿ.ಕುಮಾರಿ ಇದ್ದರು.