

Trump Aide: ಪ್ರಸ್ತುತ, ರಷ್ಯಾ ಮತ್ತು ಚೀನಾ ಜೊತೆಗೆ ಕೈಜೋಡಿಸಿರುವ ಭಾರತದ ನಡೆಯನ್ನು ಖಂಡಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ತಮ್ಮ ಜಾಲತಾಣ ಖಾತೆ ಟ್ರೂತ್ ಸೋಷಿಯಲ್ನಲ್ಲಿ ಕಿಡಿಕಾರಿದ್ದಾರೆ. ಈ ವಿಚಾರದಲ್ಲಿ ಮೂಗು ತೂರಿಸಿರುವ ಟ್ರಂಪ್ ವ್ಯಾಪಾರ ಸಲಹೆಗಾರ ಪೀಟರ್ ನವರೋ, ಭಾರತ ಇರಬೇಕಾದ್ದದು ನಮ್ಮ ಜೊತೆ. ರಷ್ಯಾ ಜತೆಗಲ್ಲ ಎಂದು ಹೇಳಿದ್ದಾರೆ.
ಅಮೆರಿಕ ವಿರುದ್ಧ ರಷ್ಯಾ-ಚೀನಾ-ಭಾರತ ಒಗ್ಗಟ್ಟು ಪ್ರದರ್ಶನ ತೋರಿದ್ದನ್ನು ಸಹಿಸಲಾಗದ ಟ್ರಂಪ್, ಜಾಲತಾಣದಲ್ಲಿ ತಮ್ಮ ಕೋಪದ ತಾಪವನ್ನು ಹೊರಹಾಕಿದರು. ಇನ್ನು ಶಾಂಘೈ ಸಹಕಾರ ಸಂಸ್ಥೆ (SCO) ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನಡುವಿನ ಭೇಟಿಯನ್ನು ನಾಚಿಕೆಗೇಡು ಎಂದು ಕರೆದಿರುವ ಪೀಟರ್ ನವರೊ, ಭಾರತದ ರಷ್ಯಾದೊಂದಿಗಿನ ವ್ಯಾಪಾರ ಸಂಬಂಧಗಳನ್ನು ಉಲ್ಲೇಖಿಸಿ, ಟೀಕಿಸಿದ್ದಾರೆ.
"ಮೋದಿ ಅವರು ಕ್ಸಿ ಜಿನ್‌ಪಿಂಗ್ ಮತ್ತು ಪುಟಿನ್ ಅವರೊಂದಿಗೆ ಕೈಜೋಡಿಸಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ. ಅವರು ಏನು ಯೋಚಿಸುತ್ತಿದ್ದಾರೆ ಎಂಬುದು ನನಗೆ ಸ್ಪಷ್ಟವಿಲ್ಲ. ಅಷ್ಟಕ್ಕೂ, ಭಾರತ ರಷ್ಯಾದೊಂದಿಗೆ ಅಲ್ಲ, ನಮ್ಮೊಂದಿಗಿರಬೇಕು. ಈ ವಿಷಯವನ್ನು ಅವರು ಅರ್ಥಮಾಡಿಕೊಳ್ಳುತ್ತಾರೆ ಎಂದು ನಾವು ಭಾವಿಸುವೆ" ಎಂದು ಹೇಳಿದ್ದಾರೆ.
ಮೇಲ್ಕಂಡ ಹೇಳಿಕೆಗೂ ಮೊದಲು ಮಾತನಾಡಿದ್ದ ನವರೊ, "ಅಸಲಿಗೆ ಭಾರತ ಸುಂಕಗಳ ಮಹಾರಾಜ. ನವದೆಹಲಿಯ ಸುಂಕಗಳು ಪ್ರಮುಖ ಆರ್ಥಿಕತೆಗಳಲ್ಲಿ ಅತ್ಯಧಿಕವಾಗಿವೆ ಮತ್ತು ಅದನ್ನು ಒಪ್ಪಿಕೊಳ್ಳಲು ಭಾರತ ನಿರಾಕರಿಸುತ್ತದೆ" ಎಂದು ಹೇಳಿದ್ದರು. "ಇಲ್ಲಿ ಎರಡು ಸಮಸ್ಯೆಯಿದೆ. ಶೇ.25ರಷ್ಟು ಸುಂಕ ಮತ್ತು ಉಳಿದ ಶೇ.25ರಷ್ಟು ಸುಂಕ ವಿಧಿಸಿರುವುದು, ಭಾರತ ರಷ್ಯಾದಿಂದ ತೈಲವನ್ನು ಖರೀದಿಸುತ್ತಿರುವುದಕ್ಕೆ" ಎಂದಿದ್ದಾರೆ,(ಏಜೆನ್ಸೀಸ್).